ಸ್ವಂತ ಆಸ್ಪತ್ರೆಯಲ್ಲಿ ಕಿಮ್ಸ್ ವೈದ್ಯರು ಕಾಲಹರಣ
ಹುಬ್ಬಳ್ಳಿ: ಕಿಮ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ತಮ್ಮ ಸ್ವಂತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹೊಂದಿದ್ದು, ದಿನದ ಬಹುಪಾಲು ಸಮಯವನ್ನು ತಮ್ಮ ಸ್ವಂತ ಆಸ್ಪತ್ರೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿ ಗುರುವಾರ ಸಮತಾ ಸೇನಾ ಕಾರ್ಯಕರ್ತರು ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ಸರ್ಕಾರಿ ಸೇವೆಯಲ್ಲಿದ್ದುಕೊಂಡು ಸ್ವಂತ ಆಸ್ಪತ್ರೆಗಳನ್ನು ನಡೆಸುತ್ತಿರುವ ಅನೇಕ ವೈದ್ಯರು ಕಿಮ್ಸ್‌ಗೆ ಕೇವಲ ಹಾಜರಿ ಹಾಕುವುದಕ್ಕೆ ಮತ್ತು ತಮ್ಮ ಆಸ್ಪತ್ರೆಗೆ ರೋಗಿಗಳನ್ನು ಹುಡುಕುವುದಕ್ಕೆ ಬರುತ್ತಿದ್ದಾರೆ. ವೈಯಕ್ತಿಕ ಲಾಭಕ್ಕೆ ಆಸ್ಪತ್ರೆಯನ್ನು ಬಳಸಿಕೊಳ್ಳುತ್ತಿರುವ ಇವರಿಂದ ಕಿಮ್ಸ್‌ಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಆರೋಪಿಸಿದರು.
ತಮ್ಮ ಸ್ವಂತ ಲಾಭಕ್ಕಾಗಿ ಕಿಮ್ಸ್‌ನ್ನು ಉಪಯೋಗಿಸುತ್ತಿರುವ ವೈದ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಿದರು. ಗುರುನಾಥ ಉಳ್ಳಿಕಾಶಿ, ಕೃಷ್ಣ ಜಕ್ಕಪ್ಪನವರ, ಸೋಮಶೇಖರ ಚಲವಾದಿ, ಬಾಷಾ ಮಾಸನೂರ, ಲೋಹಿತ ಗಾಮಗಾನಟ್ಟಿ, ಹನುಮಂತ ತಳವಾರ, ಸತೀಶ ಸಾತಪತಿ, ಫಕೀರಪ್ಪ ಚಲವಾದಿ ಇತರರಿದ್ದರು.