ಪ್ರತ್ಯೇಕ ಪಡಿತರ ವಿತರಣಾ ಕೇಂದ್ರಕ್ಕೆ ಆಗ್ರಹ
ಧಾರವಾಡ: ಗ್ರಾಮಕ್ಕೆ ಪ್ರತ್ಯೇಕ ಪಡಿತರ ವಿತರಣಾ ಕೇಂದ್ರ ನೀಡಬೇಕೆಂದು ಒತ್ತಾಯಿಸಿ ತಾಲೂಕಿನ ಮುಳಮುತ್ತಲ ಗ್ರಾಮದ ಗ್ರಾಮಸ್ಥರು ಗುರುವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿ ತಹಸೀಲ್ದಾರ್ ಹಾಗೂ ಆಹಾರ ಇಲಾಖೆ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
30 ವರ್ಷಗಳಿಂದ ಗ್ರಾಮಸ್ಥರಿಗೆ ಪಡಿತರವನ್ನು ಸಮೀಪದ ಮಂಗಳಗಟ್ಟಿ ಗ್ರಾಮದ ಲೋಕಲ್ ಕಮಿಟಿಯ ಮಲ್ಲಿಕಾರ್ಜುಗೌಡ ಪಾಟೀಲ ಅವರು ನೀಡುತ್ತಿದ್ದಾರೆ. ಆದರೆ, ಪ್ರಸ್ತುತ ಪಡಿತರ ಹಂಚಿಕೆಯಲ್ಲಿ ಅಕ್ರಮ ನಡೆಸಲಾಗುತ್ತಿದ್ದು, ಗ್ರಾಮಸ್ಥರಿಗೆ ಕಡಿಮೆ ಪಡಿತರ ದೊರಕುತ್ತಿದೆ. ಪಡಿತರಕ್ಕೆ ನಿಗದಿತ ಬೆಲೆ ತೆಗೆದುಕೊಳ್ಳುವ ಬದಲು ಪ್ರತಿ ಪಡಿತರ ಚೀಟಿಗೆ ರು. 30 ಹೆಚ್ಚಿನ ಹಣ ಪಡೆಯಲಾಗುತ್ತಿದೆ. ಪಡಿತರ ಪಡೆದ ನಂತರ ಸೂಕ್ತ ರಶೀದಿ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಚೀಟಿ ರದ್ದುಗೊಂಡಿವೆ: ಪಡಿತರ ಬಂದ ಮೇಲೆ ಗ್ರಾಮಕ್ಕೆ ತಿಂಗಳಲ್ಲಿ ಕೇವಲ ಮೂರು ದಿನ ಮಾತ್ರ ಪಡಿತರ ಹಂಚಿಕೆ ಮಾಡಲಾಗುತ್ತದೆ. ಇದರಿಂದಾಗಿ ಸಾಕಷ್ಟು ಜನತೆ ಪಡಿತರಿಂದ ವಂಚಿತರಾಗುತ್ತಿದ್ದಾರೆ. ಇನ್ನೊಂದೆರಡು ದಿನ ನೀಡಿ ಎಂದು ಮನವಿ ಮಾಡಿದರೂ ಬೇಜಬ್ದಾರಿ ಉತ್ತರ ನೀಡುತ್ತಾರೆ. ಪ್ರಸ್ತುತ ಗ್ರಾಮಸ್ಥರ ಪಡಿತರ ಚೀಟಿಯಲ್ಲಿ ಗೊಂದಲಗಳೂ ಉಂಟಾಗಿವೆ. ಹೊಸ ಪಡಿತರ ಚೀಟಿಯನ್ನು ನೀಡುವುದಾಗಿ ಭರವಸೆ ನೀಡುವ ಮೂಲಕ ಹಳೆ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗಿದೆ. ಲೆಕ್ಕದಲ್ಲಿ ಕೇವಲ 10 ಕಾರ್ಡ್ಗಳು ರದ್ದಾಗಿದ್ದು, ಪಡಿತರ ವಿತರಣಾ ಕೇಂದ್ರದಲ್ಲಿ ಮಾತ್ರ 62 ರದ್ದಾಗಿವೆ ಎಂದು ಹೇಳಿ ಮೋಸ ಮಾಡಲಾಗುತ್ತಿದೆ ಎಂದು ದೂರಿದರು. ಪ್ರತಿಭಟನೆಗೆ ಸ್ಪಂದಿಸಿದ ತಹಸೀಲ್ದಾರ್ ಸೈಯದಾ ಆಫ್ರೀನಾ ಬಳ್ಳಾರಿ, ಸದ್ಯ ಹೊಸ ಅಂಗಡಿಗಳನ್ನು ತೆರೆಯುವಂತೆ ಯಾವುದೇ ಅಧಿಸೂಚನೆ ನೀಡಿಲ್ಲ. ಬಹುತೇಕ ಗ್ರಾಮಗಳಲ್ಲಿ ಪಡಿತರ ಚೀಟಿಯಲ್ಲಿ ಗೊಂದಲಗಳಿವೆ. ಶೀಘ್ರ ಸರಿಪಡಿಸಲಾಗುವುದು. ತಾವು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡುವ ಭರವಸೆ ನೀಡಿದರು. ಗ್ರಾಮದ ವಿಠ್ಠಲ ನಿಂಬೋಜಿ, ಮಂಜುನಾಥ ಬೆಂಡಿಗೇರಿ, ಮಡಿವಾಳಪ್ಪ ದೊಂಡೆನ್ನವರ, ಅಲ್ಲಿಸಾಬ ನದಾಫ, ಉಳವಪ್ಪ ತುರಮರಿ, ಯಲ್ಲಪ್ಪ ಬೆಂಡಿಗೇರಿ, ಗೋವಿಂದ ಮೊಕಾಶಿ, ಮಡಿವಾಳ ನೇಕಾರ, ಮಹದೇವಪ್ಪ ಹಂಚಿಮನಿ, ಪ್ರಕಾಶ ಮನಗೂಳಿ, ಮಲ್ಲಯ್ಯ ಹಿರೇಮಠ ಇದ್ದರು.