ವ್ಯವಹಾರವಾಗಿದೆ ಶಿಕ್ಷಣ
ಧಾರವಾಡ: ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣವು ಜಾಗತಿಕ ಮಟ್ಟದಲ್ಲಿ ವ್ಯವಹಾರವಾಗಿ ಪರಿಗಣಿಸಲ್ಪಟ್ಟಿದ್ದು, ವಾರ್ಷಿಕ 600 ಬಿಲಿಯನ್ ಆದಾಯ ಶಿಕ್ಷಣ ಕ್ಷೇತ್ರದಿಂದ ಉತ್ಪತ್ತಿಯಾಗುತ್ತಿದೆ ಎಂದು ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಅಧ್ಯಕ್ಷ ಡಾ. ಗುರುರಾಜ ಕರ್ಜಗಿ ಹೇಳಿದರು. ಕರ್ನಾಟಕ ವಿವಿಯಲ್ಲಿ ಶುಕ್ರವಾರ ಪದ್ಮಭೂಷಣ ಡಾ. ಡಿ.ಸಿ. ಪಾವಟೆ ಸ್ಮಾರಕ ಮೂಲತತ್ವ ಉಪನ್ಯಾಸದಲ್ಲಿ ಜಾಗತೀಕರಣ ಮತ್ತು ಶಿಕ್ಷಣ ಕುರಿತು ಮಾತನಾಡಿದ ಅವರು, ಈಗ ಶಿಕ್ಷಣ ಸಂಸ್ಥೆಗಳು ಹಾಗೂ ಅದರ ಮ್ಯಾನೇಜ್ಮೆಂಟ್ಗಳು ವಿದ್ಯಾರ್ಥಿಗಳನ್ನು ಆಕರ್ಷಿಸಲು ಆಧುನಿಕ ಸೌಲಭ್ಯ ನೀಡುತ್ತಿದ್ದಾರೆಯೇ ಹೊರತು ಅವರಿಗೆ ಸಮರ್ಪಕ ಜ್ಞಾನ ನೀಡುತ್ತಿಲ್ಲ. ಪ್ರಾಚಾರ್ಯರ ಜಾಗದಲ್ಲಿ ಸಿಇಓ, ವಿತ್ತಾಧಿಕಾರಿಗಳು ಬಂದು ಕೂತಿದ್ದಾರೆ. ಕಾರ್ಮಿಕ ಪದ್ಧತಿಯಿಂದ ಸೇವಾ ಪದ್ಧತಿಗೆ ಜಗತ್ತು ಪರಿವರ್ತನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಬಂದಿದ್ದು, ಬರೀ ಅಂಕಪಟ್ಟಿ ಕೊಡಿಸಲು ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿರುವುದು ದುರದುಷ್ಟಕರ ಎಂದರು. ಜಗತ್ತಿನ 200 ಉತ್ಕೃಷ್ಟ ವಿವಿಗಳಲ್ಲಿ ಭಾರತದ ವಿವಿಗಳಿಗೆ ಸ್ಥಾನವಿಲ್ಲ. ಈ ಹಿನ್ನೆಲೆಯಲ್ಲಿ ಮೌಲ್ಯಾಧಾರಿತ ಶಿಕ್ಷಣ ಇಂದಿನ ಅಗತ್ಯವಾಗಬೇಕು. ಇತಿಹಾಸಕ್ಕಿಂತ ಹೊಸ ಉತ್ಪಾದನೆ ಕುರಿತು ಶಿಕ್ಷಣ ದೊರೆಯಬೇಕು. ಶ್ರೀಸಾಮಾನ್ಯನಿಗೆ ಜ್ಞಾನವನ್ನು ತಲುಪಿಸುವುದು ಹಾಗೂ ಶಿಕ್ಷಣವನ್ನು ಉತ್ಪಾದಿಸುವುದು ಶಿಕ್ಷಣ ಸಂಸ್ಥೆಗಳ ಕಾರ್ಯವಾಗಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ವಿವಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಚಿಂತನೆ ನಡೆಸಬೇಕು. ಶಿಕ್ಷಣ ಸಂಸ್ಥೆಗಳು ಮೌಲ್ಯ, ಜ್ಞಾನದ ಕಣಜಗಳಾಗಬೇಕು. ಅಂದಾಗ ಜಾಗತಿಕ ಶೈಕ್ಷಣಿಕ ಮಟ್ಟದಲ್ಲಿ ಭಾರತ ಸ್ಥಾನ ಗಳಿಸಲು ಸಾಧ್ಯ ಎಂದು ಡಾ. ಕರ್ಜಗಿ ಅಭಿಪ್ರಾಯಿಸಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿವಿ ಕುಲಪತಿ ಡಾ. ಎಚ್.ಬಿ. ವಾಲೀಕಾರ, ವಿವಿಗಳಂತಹ ಶಿಕ್ಷಣ ಸಂಸ್ಥೆಗಳ ಮೇಲೆ ಯಾರ ಪ್ರಭಾವ ಬೀಳದೆ ಅವು ಸ್ವತಂತ್ರವಾಗಿ ಕೆಲಸ ನಿರ್ವಹಿಸುವಂತಾಗಬೇಕು. ಅರ್ಹತೆಗೆ ತಕ್ಕಂತೆ ಕುಲಪತಿ ಹಾಗೂ ಕುಲಸಚಿವರ ನೇಮಕವಾಗಬೇಕು. ಆದರೆ, ಪ್ರಸ್ತುತ ರಾಜಕೀಯದ ನೆರಳು ಬೀಳುತ್ತಿದ್ದು, ವಿವಿಗಳು ಸಮರ್ಥವಾಗಿ ನಡೆಸಲು ಕಷ್ಟವಾಗಿದೆ. ವಿವಿಗಳು ತತ್ವಗಳನ್ನು ಬೋಧಿಸುತ್ತಿವೆಯೇ ಹೊರತು ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕುಲಸಚಿವ ಡಾ. ಜಿ.ಬಿ. ನಂದನ ಸ್ವಾಗತಿಸಿದರು. ಮೌಲ್ಯಮಾಪನ ಕುಲಸಚಿವ ಡಾ. ಕೆ.ಆರ್. ದುರ್ಗಾದಾಸ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹರೀಶ ರಾಮಸ್ವಾಮಿ ಇದ್ದರು.
ದಾಳಿ: 12 ಜನರ ಬಂಧನ
ಗಂಗಾವತಿ: ರಿಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಜೂಜಾಟ ನಡೆಸುತ್ತಿದ್ದ ಕೇಂದ್ರದ ಮೇಲೆ ಪೊಲೀಸರು ದಾಳಿ ನಡೆಸಿ 12 ಜನರನ್ನು ಬಂಧಿಸಿದ್ದಾರೆ. ಕೊಪ್ಪಳ ರಸ್ತೆಯಲ್ಲಿ ಡಿಸ್ನಿ ರಿಕ್ರಿಯೇಷನ್ ಕ್ಲಬ್ ಇದ್ದು, ಇಲ್ಲಿ ಇಸ್ಪೀಟ್ ಆಡುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ವಿಚಕ್ಷಕ ತಂಡ ದಾಳಿ ನಡೆಸಿ 12 ಜನರನ್ನು ಬಂಧಿಸಿದೆ. ಅವರಲ್ಲಿದ್ದ ರು. 1,16, 500 ಮತ್ತು 11 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ನಗರ ಪೊಲೀಸ್ ಠಾಣೆ ಪಿ.ಐ. ಜ್ಯೋತಿ ನಿಕಂ, ಸುರೇಶ ತಳವಾರ, ದೇವಪ್ಪ ಕಟ್ಟಿಮನಿ, ವೈ.ಕೆ. ಕಾಶಪ್ಪನವರ್ ದಾಳಿ ನೇತೃತ್ವ ವಹಿಸಿದ್ದರು.
ಸನವಳ್ಳಿ ಜಲಾಶಯದ ಜಾಕ್ವೆಲ್ ಬಳಿ ರಂಧ್ರ: ಆತಂಕ
ಮುಂಡಗೋಡ: ಪಟ್ಟಣಕ್ಕೆ ಕುಡಿಯುವ ನೀರು ಹಾಗೂ ಸುತ್ತಮುತ್ತಲಿನ ನೂರಾರು ರೈತರ ಭೂಮಿಗೆ ನೀರು ಪೂರೈಸುವ ಸನವಳ್ಳಿ ಜಲಾಶಯದ ಎಡದಂಡೆ ಕಾಲುವೆ ಜಾಕ್ವೆಲ್ ಬಳಿ ಮಣ್ಣು ಕುಸಿದು ಡೊಂಬು (ರಂಧ್ರ) ಬಿದ್ದಿದ್ದರಿಂದ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಶಾಸಕ ಶಿವರಾಮ ಹೆಬ್ಬಾರ, ಚಿಕ್ಕನೀರಾವರಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜಲಾಶಯದ ಸ್ಥಿತಿಗತಿ ಪರಿಶೀಲಿಸಿದರು.
ತದನಂತರ ಜಲಾಶಯಕ್ಕೆ ನೀರು ಹರಿದು ಬರುವ ಕಾಲುವೆ ಹಿಡಿದುಕೊಂಡು ಹೋದಾಗ ಕಾಲುವೆಗಳು ಹೂಳು ತುಂಬಿಕೊಂಡಿದ್ದವು ಹಾಗೂ ದೋಣಿ ಹಳ್ಳದಿಂದ ಬಂದಿರುವ ಕಾಲುವೆ ಹಲವು ಕಡೆಗಳಲ್ಲಿ ಒಡೆದು ನೀರು ಅರಣ್ಯ ಪ್ರದೇಶದ ಹಳ್ಳ ಸೇರುತ್ತಿರುವುದು ಕೂಡ ಗಮನಕ್ಕೆ ಬಂತು. ಜಲಾಶಯ ಭದ್ರತೆ ಹಾಗೂ ನೀರು ಹರಿದು ಬರಲು ಸುಸಜ್ಜಿತ ಕಾಲುವೆ ನಿರ್ಮಾಣ ಸೇರಿದಂತೆ ಜಲಾಶಯದ ಅಭಿವೃದ್ಧಿ ಬಗ್ಗೆ ರೂಪುರೇಷೆಯನ್ನು ತಯಾರಿಸಿ ಎಂದು ಚಿಕ್ಕನೀರಾವರಿ ಇಲಾಖೆ ಅಧಿಕಾರಿಗೆ ಶಾಸಕರು ಸೂಚಿಸಿದರು.
ಅಲ್ಲದೆ, ಸರ್ಕಾರ ಮಟ್ಟದಲ್ಲಿ ಈ ಬಗ್ಗೆ ಪ್ರಸ್ತಾವನೆ ಇಟ್ಟು ಅಗತ್ಯ ಹಣವನ್ನು ಬಿಡುಗಡೆ ಮಾಡಿಸುವುದಾಗಿ ತಿಳಿಸಿದರು.