ಸಾಮೂಹಿಕ ಅತ್ಯಾಚಾರ: ಬೆಚ್ಚಿದ ಅವಳಿ ನಗರ
ಹುಬ್ಬಳ್ಳಿ: ಮನೆಯಲ್ಲಿದ್ದ ಒಂಟಿ ಮಹಿಳೆಯ ಮೇಲೆ ಗುಂಪೊಂದು ಅತ್ಯಾಚಾರವೆಸಗಿರುವ ಘಟನೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನತೆಯಲ್ಲಿ ತಲ್ಲಣವನ್ನುಂಟು ಮಾಡಿದೆ.
ನಿಜ, ಹುಬ್ಬಳ್ಳಿ-ಧಾರವಾಡದ ಮಟ್ಟಿಗೆ ಇದು ಬೆಚ್ಚಿ ಬೀಳಿಸುವ ಸಂಗತಿ. ಅತ್ಯಾಚಾರದಂತಹ ಪ್ರಕರಣಗಳು ಈ ಹಿಂದೆ ವರದಿಯಾಗಿದ್ದರೂ ಇಷ್ಟೊಂದು ಮಂದಿ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಇದೇ ಮೊದಲು ಎಂದು ಪೊಲೀಸ್ ಇಲಾಖೆಯ ವರದಿ ತಿಳಿಸುತ್ತದೆ. ಈ ಪೈಶಾಚಿಕ ಕೃತ್ಯದ ಹಿಂದೆ ಮಹಿಳೆಯ ಅಳಿಯನೇ ಇರುವುದು ಜನತೆಗೆ ನಿದ್ದೆಗೆಡಿಸುವ ಸಂಗತಿ. ರೇಲ್ವೆ ಇಲಾಖೆ ಉದ್ಯೋಗಿಯಾಗಿದ್ದ ಈಕೆ ಚಾಲುಕ್ಯ ನಗರದಲ್ಲಿ ಮನೆ ಮಾಡಿಕೊಂಡಿದ್ದಳು. ಆಕೆಯ ಅಳಿಯ ಕೂಡ ರೇಲ್ವೆ ಉದ್ಯೋಗಿ. ಮೂರು ಮಕ್ಕಳ ತಾಯಿಯಾಗಿದ್ದ ಮಹಿಳೆಯ ಮೇಲೆ ಈತ ತನ್ನ ಮಿತ್ರರೊಡಗೂಡಿ ಅತ್ಯಾಚಾರದಂತಹ ಹೇಯ ಕೃತ್ಯವೆಸಗಿದ್ದಾನೆ.
ವಾಂಛೆಯಲ್ಲ, ಆಸ್ತಿ ಆಸೆ?: ಈ ಪ್ರಕರಣವನ್ನು ಗಂಭೀರವಾಗಿ ಗಮನಿಸಿದಾಗ ಮಹಿಳೆ ಮೇಲೆ ಅತ್ಯಾಚಾರವೆಸಗಲು ಆಕೆಯ ಮೇಲೆದ್ದ ಆಸೆಯಲ್ಲ, ಬದಲಿಗೆ ಬೇರೆಯೇ ಕಾರಣ ಎಂಬುದು ಗಮನಕ್ಕೆ ಬರುತ್ತದೆ. ಒಂದೊಮ್ಮೆ ಮಹಿಳೆ ಮೇಲೆ ಆಸೆ ಇದ್ದಿದ್ದೇ ಆದರೆ ತಾನೊಬ್ಬನೇ ಇಂಥ ಹೀನ ಕೃತ್ಯವೆಸಗುತ್ತಿದ್ದ. ಆದರೆ, ಮಿತ್ರರೊಡಗೂಡಿ ಅತ್ಯಾಚಾರವೆಸಗಿರುವುದನ್ನು ಗಮನಿಸಿದರೆ ಮಹಿಳೆಯನ್ನು ಬೆದರಿಸುವ ಕುತಂತ್ರ ಈತನದ್ದಾಗಿತ್ತು ಎಂಬುದು ತಿಳಿದು ಬರುತ್ತದೆ.
ಮಹಿಳೆಯ ಮೇಲೆ ಅತ್ಯಾಚಾರ ವೆಸಗಿದ ವಿಡಿಯೋ ಚಿತ್ರೀಕರಣ ಮಾಡಿದ್ದಲ್ಲದೇ ಬಾಯಿ ಬಿಟ್ಟರೆ ಕೊಲೆ ಮಾಡುವುದಾಗಿ ಈತ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ. ಮಹಿಳೆ ಹಾಗೂ ಆಕೆಯ ಅಳಿಯನಿಗೆ ಸಂಬಂಧಿಸಿದ ಆಸ್ತಿಯೊಂದಿದ್ದು ಅದರ ವಿಷಯವಾಗಿ ಇವರಿಬ್ಬರ ನಡುವೆ ಮನಸ್ತಾಪವಿತ್ತು. ಅತ್ಯಾಚಾರವೆಸಗಿದ ವಿಡಿಯೋ ಚಿತ್ರವನ್ನಿಟ್ಟುಕೊಂಡು ಆಕೆಯನ್ನು ಬೆದರಿಸಿ ಆಸ್ತಿ ತನ್ನದಾಗಿಸಿಕೊಳ್ಳುವ ಉದ್ದೇಶ ಈತನದ್ದಾಗಿತ್ತು ಎನ್ನಲಾಗಿದೆ.
ಎಲ್ಲರಿಗೂ ಆಘಾತ: ಅಳಿಯನ ಉದ್ದೇಶ ಏನೇ ಆಗಿದ್ದರೂ ಇದು ಸಮಾಜ ತಲೆ ತಗ್ಗಿಸುವಂತಹ ಘಟನೆ. ಅತ್ಯಾಚಾರಕ್ಕೊಳಗಾದ ಮಹಿಳೆ ಅಥವಾ ಆಕೆಯ ಕುಟುವಂಬವಷ್ಟೇ ಈ ಘಟನೆಯಿಂದ ಆಘಾತಕ್ಕೊಳಗಾಗಿಲ್ಲ, ಬದಲಿಗೆ ಅವಳಿ ನಗರದ ಜನರೂ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಅದರಲ್ಲೂ ಮನೆಯಲ್ಲಿರುವ ಒಂಟಿ ಮಹಿಳೆಯರಂತೂ ತಮ್ಮ ಸುರಕ್ಷತೆ ಬಗ್ಗೆ ಚಿಂತಿಗೀಡಾಗಿದ್ದಾರೆ.
ಅಕ್ಕಪಕ್ಕ ತಾಗಿ ಮನೆಗಳಿದ್ದಾಗಲೂ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಹೀಗಿದ್ದಾಗ ತಾವಿರುವ ಮನೆ ಎಷ್ಟು ಸುರಕ್ಷಿತ? ಒಂದೊಮ್ಮೆ ದುಷ್ಕರ್ಮಿಗಳು ದಾಳಿಯಿಟ್ಟರೆ ಹೇಗೆ ರಕ್ಷಣೆ ಪಡೆಯಬೇಕು? ಇತ್ತೀಚಿನ ದಿನಗಳಲ್ಲಿ ಯುವಕರು ಅದೇಕೆ ಮೃಗೀಯವಾಗಿ ವರ್ತಿಸುತ್ತಿದ್ದಾರೆ? ಇಂತವರನ್ನು ಮಟ್ಟ ಹಾಕುವುದು ಹೇಗೆ? ಈ ರೀತಿ ಬಲಿಪಶುವಾಗುವ ಮಹಿಳೆಯರ ಭವಿಷ್ಯವೇನು? ಎಂದೆಲ್ಲ ಪ್ರಶ್ನೆಗಳು ಜನರಲ್ಲಿ ಸುಳಿದಾಡುತ್ತಿವೆ.
ಬುದ್ಧಿ ಕಲಿಸಲಿ: ಹುಬ್ಬಳ್ಳಿಯಲ್ಲಿ ಇದೀಗ ನಡೆದಿರುವ ಪೈಶಾಚಿಕ ಘಟನೆ ಮತ್ತೆ ಮರುಕಳಿಸಬಾರದೆಂದರೆ ಪೊಲೀಸರು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಅಪರಾಧವೆಸಗಿದವರಿಗೆ ತಕ್ಕಶಾಸ್ತಿ ಮಾಡಲೇ ಬೇಕು. ಅಂದಾಗ ಭವಿಷ್ಯದಲ್ಲಿ ಪುನಃ ಇಂತಹ ಘಟನೆಗಳು ಮರುಕಳಿಸದು.
ಮಾನವೀಯತೆಗೆ ಮಸಿ
ಸಾಮೂಹಿಕ ಅತ್ಯಾಚಾರ ಮಾನವೀಯತೆಗೆ ಎರಚಿದ ಕಪ್ಪು ಮಸಿ. ಸುದ್ದಿ ಕೇಳಿ ಆಘಾತವಾಯಿತು. ದಿಲ್ಲಿ, ಮುಂಬಯಿನಲ್ಲಿ ಇಂಥ ಘಟನೆಗಳು ನಡೆದಿದ್ದನ್ನು ಪತ್ರಿಕೆಗಳಲ್ಲಿ ಓದಿದ್ದೆವು. ಆದರೆ ಇದೀಗ ಹುಬ್ಬಳ್ಳಿಯಲ್ಲಿಯೇ ಮನೆಯಲ್ಲಿದ್ದ ಒಂಟಿ ಮಹಿಳೆ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಬೆಚ್ಚಿ ಬೀಳಿಸಿದೆ. ಮೇಲಿಂದ ಮೇಲೆ ನಡೆಯುತ್ತಿರುವ ಕಳ್ಳತನಗಳು ಇಲ್ಲಿಯ ಜನರನ್ನು ಈಗಾಗಲೇ ನಿದ್ದೆಗೆಡಿಸಿದ್ದವು. ಸಾಮೂಹಿಕ ಅತ್ಯಾಚಾರದ ಘಟನೆ ಹುಬ್ಬಳ್ಳಿ ಸುರಕ್ಷಿತವಲ್ಲವೆಂಬುದನ್ನು ಸಾಬೀತುಪಡಿಸಿದೆ.
- ಈರಣ್ಣ ಬಸವಾ, ಹುಬ್ಬಳ್ಳಿ.
ಆ ಪಾಪಿಗೆ ಕಠಿಣ ಶಿಕ್ಷೆಯಾಗಲಿ..
ಆ ಪಾಪಿಗಳನ್ನು ಎಲ್ಲಿದ್ದರೂ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ಇಂಥ ಘಟನೆಗಳು ಮರುಕಳಿಸಬಾರದೆಂದರೆ ಅತಿ ಕಠಿಣ ಶಿಕ್ಷೆಯನ್ನು ಅವರಿಗೆ ನೀಡಲೇಬೇಕು. ಇದರಿಂದ ಸಮಾಜದ ಇತರ ದುಷ್ಟ ಬುದ್ಧಿ ಜನರಿಗೂ ಎಚ್ಚರಿಕೆ ನೀಡಿದಂತಾಗುತ್ತದೆ. ಜನಸಾಮಾನ್ಯರಲ್ಲಿ ಇಂಥ ಅತ್ಯಾಚಾರ ಘಟನೆಗಳು ಭಾರಿ ಆತಂಕವನ್ನೇ ಸೃಷ್ಟಿಸುತ್ತವೆ. ಅದರಲ್ಲಿಯೂ ಮನೆಗಳಲ್ಲಿ ಒಂಟಿಯಾಗಿರುವ ಮಹಿಳೆಯರನ್ನು ಈ ಘಟನೆ ಭೀತಿ ಹುಟ್ಟಿಸಿದೆ. ಅತ್ಯಾಚಾರ ನಡೆಸಿದವರು ಎಲ್ಲೇ ಅಡಗಿದ್ದರೂ ಅವರನ್ನು ಬಂಧಿಸಿ, ಶಿಕ್ಷೆ ವಿಧಿಸಬೇಕು.
- ಚಿದಂಬರ ಪುರಾಣಿಕ, ಹುಬ್ಬಳ್ಳಿ
ತಕ್ಕಶಾಸ್ತಿಯಾಗಲಿ...
ಅತ್ಯಾಚಾರ ನಡೆಸಿದವರಲ್ಲಿನ ವಿಕೃತ ಭಾವನೆ ಈ ಘಟನೆಯಿಂದ ಬೆಳಕಿಗೆ ಬಂದಿದೆ. ಅತ್ಯಾಚಾರಿಗಳು ಇನ್ನೂ ಅದೆಷ್ಟು ಪಾಪಗಳಲ್ಲಿ ಭಾಗಿಯಾಗಿದ್ದಾರೋ ? ಇಂಥವರಿಗೆ ಸಾರ್ವಜನಿಕವಾಗಿ ಶಿಕ್ಷೆ ವಿಧಿಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಕೆಟ್ಟ ಕೆಲಸಗಳನ್ನು ಮಾಡಲು ಹೆದರಿಕೆ ಹುಟ್ಟಿಕೊಳ್ಳುತ್ತದೆ. ಇಲ್ಲದಿದ್ದರೆ ಇಂಥ ಹೀನ ಕೃತ್ಯಗಳು ಮರುಕಳಿಸುತ್ತಲೇ ಇರುತ್ತವೆ. ಅತ್ಯಾಚಾರಿಗಳ ರಕ್ಷಣೆಗೆ ಬರುವವರನ್ನೂ ಬಂಧಿಸಬೇಕು. ಯಾವುದೇ ಕಾರಣಕ್ಕೂ ಅತ್ಯಾಚಾರಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು.
- ಸುಧಾಕರ ಬೈರಜಿ
ಸಂಬಂಧಿಗಳೂ ನೆನಪಾಗಲಿಲ್ಲವೇ....?
ಅತ್ಯಾಚಾರಿಗಳಿಗೆ ಈ ದುಷ್ಕೃತ್ಯ ಎಸಗುವ ಮುನ್ನ ಪಾಪದ ಮನೋಭಾವನೆ ಕಾಡಲೇ ಇಲ್ಲವೇ ? ಅತ್ಯಾಚಾರಿಗಳ ಮನೋಭಾವನೆ ಎಂಥದೆಂಬುದು ಈ ಘಟನೆಯಿಂದ ಸಾಬೀತಾಗುತ್ತದೆ. ಅತ್ಯಾಚಾರ ನಡೆಸಿದ್ದಲ್ಲದೇ, ಆ ದುಷ್ಕೃತ್ಯದ ಚಿತ್ರೀಕರಣವನ್ನೂ ಮಾಡಿಕೊಂಡಿರುವ ಅತ್ಯಾಚಾರಿಗಳಿಗೆ ಅತಿ ಕಠಿಣ ಶಿಕ್ಷೆಯಾಗಬೇಕು. ಆ ಚಿತ್ರೀಕರಣ ಬೇರೆಡೆ ಸೋರಿಕೆಯಾಗುವ ಮುಂಚೆಯೇ ಅತ್ಯಾಚಾರಿಗಳನ್ನು ಬಂಧಿಸುವ ಕೆಲಸವಾಗಬೇಕು. ಅತ್ಯಾಚಾರ ನಡೆಸುವಾಗ ಸಂಬಂಧಗಳೂ ನೆನಪಿಗೆ ಬರಲಿಲ್ಲವೇ?
- ಮಂಜುನಾಥ ಕರ್ಲಹಳ್ಳಿ