24ಕ್ಕೆ ಶಿಶುನಾಳ ಷರೀಫರ ತತ್ವ ಪದಗಳ ಸಮಾರಂಭ
ಕನ್ನಡಪ್ರಭ ವಾರ್ತೆ, ಧಾರವಾಡ, ಆ. 3
ಸಂತ ಶಿಶುನಾಳ ಷರೀಫ ಅವರ ತತ್ವಪದಗಳ ಆಧಾರಿತ ಸಂಗೀತ ಕಾರ್ಯಕ್ರಮ ಆ. 24ರಂದು ಗದಗನ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದೂರದರ್ಶನ ಹೆಚ್ಚುವರಿ ಮಹಾ ನಿರ್ದೇಶಕ ಮಹೇಶ ಜೋಶಿ, ಈ ಕಾರ್ಯಕ್ರಮಕ್ಕೆ ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಕಲಾವಿದರು ಭಾಗವಹಿಸಬಹುದು. ಆ. 4ರಂದು ಬೆಳಗ್ಗೆ 10ಕ್ಕೆ ಗದಗಿನ ಕೆ.ಎಚ್. ಪಾಟೀಲ ಸಭಾಭವನದಲ್ಲಿಯೇ ಕಲಾವಿದರ ಆಯ್ಕೆ ನಡೆಯಲಿದೆ. ಮುಂದಿನ ಈ ಕಾರ್ಯಕ್ರಮವನ್ನು ಶಿಶುನಾಳ ಗ್ರಾಮದಲ್ಲಿಯೇ ಮಾಡಲು ಈಗಾಗಲೇ ತೀರ್ಮಾನಿಸಿದ್ದು ಸಿದ್ಧತೆ ಕೈಗೊಂಡಿದ್ದೇವೆ. 2007ರಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು ಯಶಸ್ವಿಯಾಗಿ ನಡೆಯುತ್ತಿವೆ. ದೂರದರ್ಶನ ಸಮೀಪ ದರ್ಶನವಾಗಬೇಕೆಂಬ ಉದ್ದೇಶದಿಂದ ಬೆಂಗಳೂರು ಬಿಟ್ಟು ರಾಜ್ಯದ ಎಲ್ಲ ಭಾಗಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಇದಲ್ಲದೇ, ಪ್ರತಿ ವರ್ಷದಂತೆ ಈ ಬಾರಿ ಸೆ. 1ರಂದು ರಾಜಭವನದ ಗಾಜಿನಮನೆಯಲ್ಲಿ ಸೈನಿಕ ಸ್ಮರಣಾರ್ಥ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿ ವೀರ ಮರಣವನ್ನಪ್ಪಿದ ಸೈನಿಕ ಕುಟುಂಬಗಳಿಗೆ ಮಾನಸಿಕ ಸ್ಥೈರ್ಯ ಹೇಳುವ ಕಾರ್ಯಕ್ರಮವಿದು. ಸಮಾರಂಭದಲ್ಲಿ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ರಕ್ಷಣಾ ಇಲಾಖೆ ಅಧಿಕಾರಿಗಳು ಭಾಗವಹಿಸುತ್ತಾರೆ ಎಂದು ಮಹೇಶ ಜೋಶಿ ಹೇಳಿದರು.