ನರಗುಂದ ಮೃತ ಯೋಧನ ತಂದೆ-ತಾಯಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ, ಧಾರವಾಡ, ಆ. 3
ಸೈನಿಕರು ತಮ್ಮ ಕುಟುಂಬದ ಸದಸ್ಯರಿಂದ ದೂರ ಉಳಿದು ಭಾರತದ ರಕ್ಷಣೆಗಾಗಿ ಅಹೋರಾತ್ರಿ ಶ್ರಮಿಸುತ್ತಿರುತ್ತಾರೆ. ಅವರ ಕುಟುಂಬದ ಯೋಗಕ್ಷೇವು ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರ ಮತ್ತು ಸಮಾಜದ್ದಾಗಿದೆ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಹೇಳಿದರು.
ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದ ಕಾರ್ಗಿಲ್ ಸ್ತೂಪದ ಬಳಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸೈನಿಕರು ಇತ್ತೀಚೆಗೆ ನಡೆದ ಉತ್ತರಾಖಂಡದ ಜಲಪ್ರಳಯದಲ್ಲಿ ಸಿಕ್ಕಿಹಾಕಿಕೊಂಡ ಜನರ ಪ್ರಾಣ ಉಳಿಸಲು ಹೋಗಿ ಅನೇಕ ಯೋಧರು ಪ್ರಾಣ ಕಳೆದುಕೊಂಡರು. ಅದರಲ್ಲಿ ನರಗುಂದದ ಜಗಾಪುರದ ಯೋಧ ಬಸವರಾಜ ಯರಗಟ್ಟಿ ಕೂಡ ಒಬ್ಬರು. ಅವರ ಸಾಹಸ ನಿಜಕ್ಕೂ ಸ್ಮರಣೀಯವಾಗಿದ್ದು, ಯುವಕರಿಗೆ ಮಾದರಿಯಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ಸೈನಿಕ ಕಲ್ಯಾಣ ಸಮಿತಿ ವತಿಯಿಂದ ಮೃತ ಯೋಧ ಬಸವರಾಜ ಯರಗಟ್ಟಿ ಅವರ ಕುಟುಂಬದ ಸದಸ್ಯರಿಗೆ ಜಿಲ್ಲಾಧಿಕಾರಿಗಳು ಸನ್ಮಾನಿಸಿದರು.
ಸಮಿತಿ ಅಧ್ಯಕ್ಷ ಚಂದ್ರಶೇಖರ ಅಮೀನಗಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೃಷ್ಣ ಜೋಶಿ, ಶಿವಯೋಗಿ ಅಮೀನಗಡ, ಕೆ.ಬಿ. ಕುಲಕರ್ಣಿ, ಎಂ.ಬಿ. ಬೇನಪ್ಪನವರ, ಡಾ. ಉಮೇಶ ನಲವಡಿ, ಎಸ್.ವಿ. ಶಿರಗುಪ್ಪಿ, ಪಂಡಿತ ಮುಂಜಿ, ಈಶ್ವರ ಕಡೋಲಿ ಮುಂತಾದವರು ಉಪಸ್ಥಿತರಿದ್ದರು.