ಪ್ರದೀಪಗೆ ಅನಾಯಾಸವಾಗಿ ಒಲಿದ ಟಿಕೆಟ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 3
ವಿಧಾನಪರಿಷತ್ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಸಿದ್ಧತೆ ಬಿರುಸುಗೊಂಡಿದೆ. ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಉಪಚುನಾವಣೆಯಾದರೂ ಕಣ ರಂಗೇರಿದೆ. ಅತ್ತ ಕಾಂಗ್ರೆಸ್ ಗೆಲುವಿನ ದಾಪುಗಾಲು ಹಾಕಲು ಮುನ್ನುಗ್ಗುತ್ತಿದ್ದರೆ, ಬಿಜೆಪಿಯೂ ಹೇಗಾದರೂ ಮಾಡಿ ಹಳೆಯ ಅವಧಿಯಲ್ಲಿ ತನ್ನದೇ ಪಕ್ಷದ ಪಾಲಾಗಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಸಾಹಸ ಮಾಡುತ್ತಿದೆ.
ಪ್ರದೀಪಗೆ ಒಲಿದ ಲಕ್: ಅಸಲಿಗೆ ಪ್ರದೀಪ ಶೆಟ್ಟರ್ ಅವರಿಗೆ ಟಿಕೆಟ್ ಒಲಿದಿದ್ದೇ ಸ್ವಾರಸ್ಯಕರ. ಆರಂಭದಲ್ಲಿ ಮಾಜಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಮಾಜಿ ಸಚಿವ ಕಳಕಪ್ಪ ಬಂಡಿ ಹೆಸರು ಪಕ್ಷದಿಂದ ತೇಲಿ ಬಂದಿತ್ತೇ ವಿನಃ ಪ್ರದೀಶ ಶೆಟ್ಟರ್ ಹೆಸರು ಎಲ್ಲಿಯೂ ಪ್ರಸ್ತಾಪವಾಗಿರಲಿಲ್ಲ. ಎಲ್ಲರೂ ಮುನೇನಕೊಪ್ಪ ಅವರೇ ಅಭ್ಯರ್ಥಿಯಾಗುತ್ತಾರೆಂಬ ನಿರೀಕ್ಷೆಯಲ್ಲಿದ್ದರು. ಪಕ್ಷವೂ ಮುನೇನಕೊಪ್ಪ ಅವರಿಗೆ ಟಿಕೆಟ್ ನೀಡಲು ಮುಂದಾಗಿತ್ತು. ಆದರೆ ಟಿಕೆಟ್ ನೀಡುವ ವಿಷಯ ಅಂತಿಮ ಹಂತ ತಲುಪಿದಾಗ ಸ್ವತಃ ಶಂಕರಪಾಟೀಲ ಅವರ ಅಭಿಪ್ರಾಯದ ಮೇರೆಗೆ ಪ್ರದೀಶ ಶೆಟ್ಟರ್ಗೆ ಟಿಕೆಟ್ ಒಲಿಯಿತು.
ಈ ಹಿಂದೇ ಆಕಾಂಕ್ಷಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಸಹೋದರರಾಗಿರುವ ಪ್ರದೀಪ ಶೆಟ್ಟರ್ ಇಲ್ಲಿವರೆಗೆ ಯಾವುದೇ ಚುನಾವಣೆ ಸ್ಪರ್ಧಿಸಿರಲಿಲ್ಲ. ಈ ಹಿಂದೆ ವಿಧಾನಪರಿಷತ್ತಿನ ಇದೇ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿದ್ದ ಸಂದರ್ಭದಲ್ಲಿ ಪ್ರದೀಪ ಶೆಟ್ಟರ್ ಟಿಕೆಟ್ ಬಯಸಿದ್ದರು. ಟಿಕೆಟ್ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನವನ್ನೂ ಮಾಡಿದ್ದರು. ಆದರೆ, ಅಂತಿಮ ಹಂತದಲ್ಲಿ ಶಿವರಾಜ ಸಜ್ಜನ ಅವರಿಗೆ ಬಿಜೆಪಿ ಟಿಕೆಟ್ ದಕ್ಕಿತು. ಹೀಗಿದ್ದಾಗ ಪ್ರದೀಪ ಕಣದಿಂದ ಹಿಂದೆ ಸರಿದರು.
ಈಗ ನನಸಾಯಿತು: ವಿಧಾನಪರಿಷತ್ಗೆ ಸ್ಪರ್ಧೆಯೊಡ್ಡಬೇಕೆಂದು ಕನಸು ಕಂಡಿದ್ದ ಪ್ರದೀಪ ಶೆಟ್ಟರ್ ಅವರ ಆಸೆ ಈಗ ನನಸಾಗಿದೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಯ ಹೆಸರು ಅಂತಿಮಗೊಳಿಸುವ ಹಂತ ತಲುಪಿದಾಗ ಸ್ವತಃ ಶಂಕರಪಾಟೀಲ ಮುನೇನಕೊಪ್ಪ ತಾವು ಈಗಾಗಲೇ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಸೋತಿದ್ದೇವೆ. ಹೀಗಿರುವಾಗ ಇದೇ ವಿಧಾನಪರಿಷತ್ ಕ್ಷೇತ್ರಕ್ಕೆ ಪ್ರದೀಪ ಶೆಟ್ಟರ್ ಅವರು ಈ ಹಿಂದೆ ಆಕಾಂಕ್ಷಿಯಾಗಿದ್ದರು. ಆದರೆ ಆಗಿನ ಸಂದರ್ಭದಲ್ಲಿ ಪ್ರದೀಪಗೆ ಅವಕಾಶ ನೀಡಲಾಗಲಿಲ್ಲ. ಈ ಕಾರಣಕ್ಕೆ ಈಗ ಪ್ರದೀಪಗೆ ಅವಕಾಶ ನೀಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಅಭ್ಯರ್ಥಿ ರೇಸ್ನಲ್ಲಿರುವ ಮುನೇನಕೊಪ್ಪ ಅವರೇ ಪ್ರದೀಪಗೆ ಟಿಕೆಟ್ ನೀಡಬೇಕೆಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದೇ ಟಿಕೆಟ್ ದೊರಕಲು ಕಾರಣವಾಯಿತು. ಇದೀಗ ಟಿಕೆಟ್ ಪಡೆದುಕೊಂಡಿರುವ ಪ್ರದೀಪ ಆ. 5ರಂದು ಮಧ್ನಾಹ್ನ 12ಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.