ಪೊಲೀಸರು ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು: ಲೋಕೇಶಕುಮಾರ
ನವಲಗುಂದ: ಜನಸಂಖ್ಯೆ ಹೆಚ್ಚಾದಂತೆ ಪೊಲೀಸರಿಗೆ ಕೆಲಸದ ಒತ್ತಡವೂ ಹೆಚ್ಚಾಗುತ್ತಿದೆ. ಒತ್ತಡದ ಮಧ್ಯೆಯೂ ಪೊಲೀಸರು ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಲೋಕೇಶಕುಮಾರ ತಿಳಿಸಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ವನಮಹೋತ್ಸವ, ರಂಜಾನ್ ಹಬ್ಬದ ನಿಮಿತ್ತ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಸರ್ಕಾರ ನಮಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ, ನಾನೇ ಪ್ರತಿ ತಿಂಗಳು ಒಮ್ಮೆಯಾದರೂ ನವಲಗುಂದಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಇಲ್ಲಿನ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಕಂಡುಬಂದಿದೆ. ಈ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಾರ್ವಜನಿಕರು ಏನೇ ಸಮಸ್ಯೆಗಳಿರಲಿ ನನ್ನ ಜತೆ ನಿಸ್ಸಂಕೋಚವಾಗಿ ನೇರವಾಗಿ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದರು.
ಪ್ರತಿವರ್ಷ ರಂಜಾನ್ ಹಬ್ಬವನ್ನು ಎಲ್ಲ ಸಮುದಾಯದವರು ಸೌಹಾರ್ದತೆಯಿಂದ ಒಗ್ಗೂಡಿ ಶಾಂತಿಯುತವಾಗಿ ಆಚರಿಸಿಕೊಂಡು ಬರುತ್ತಿರುವುದು ಸಂತೋಷ ತಂದಿದೆ. ರಂಜಾನ್ ಹಬ್ಬ ಎಲ್ಲರಿಗೂ ಶುಭ ತರಲಿ ಎಂದು ಹಾರೈಸಿದರು.
ಸಿಪಿಐ ಎಸ್.ಎಸ್. ಪಡೋಳಕರ, ರಂಜಾನ್ ಹಬ್ಬದ ಶಾಂತಿಯುತ ಆಚರಣೆಗಾಗಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಅಬ್ಬಾಸ್ ದೇವರಿಡು, ಉಸ್ಮಾನ ಬಬರ್ಜಿ, ಅಣ್ಣಪ್ಪ ಬಾಗಿ, ಸಹದೇವಪ್ಪ ಶಿರೋಳ, ಬಸಣ್ಣ ಹಳ್ಳದ, ಪರಶುರಾಮ ಹಕ್ಕರಕಿ, ಮಲ್ಲನಗೌಡ ರಾಟಿಮನಿ ಮೊದಲಾದವರು ಮಾತನಾಡಿ, ನಮ್ಮೂರಿನಲ್ಲಿ ರಂಜಾನ್ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದ ಉದಾಹರಣೆಗಳಿಲ್ಲ. ಏನೇ ಸಮಸ್ಯೆಗಳಿದ್ದರೂ ನಾವೇ ಬಗೆಹರಿಸಿಕೊಂಡು ಸೌಹಾರ್ದಯುತವಾಗಿ ಎಲ್ಲ ಹಬ್ಬಗಳನ್ನು ಆಚರಿಸುತ್ತೇವೆಂದು ಹೇಳಿದರು.
ಪ್ರೊಬೇಷನರಿ ಡಿಎಸ್ಪಿ ಕಲ್ಲಪ್ಪ ಹಂಡಿಬಾಗ ಉಪಸ್ಥಿತರಿದ್ದರು. ಶಿಕ್ಷಕ ಕೆ.ಆರ್. ಮುಲ್ಲಾ ಸ್ವಾಗತಿಸಿದರು. ಎನ್.ಎಸ್. ದೇಸಾಯಿ ನಿರೂಪಿಸಿದರು. ಪಿಎಸ್ಐ ಎನ್.ಸಿ. ಕಾಡದೇವರ ವಂದಿಸಿದರು.
ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ನಾನೇ ಪ್ರತಿ ತಿಂಗಳಿಗೊಮ್ಮೆ ನವಲಗುಂದಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಇಲ್ಲಿನ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಕಂಡುಬಂದಿದೆ. ಈ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಾರ್ವಜನಿಕರು ಏನೇ ಸಮಸ್ಯೆಗಳಿರಲಿ ನನ್ನ ಜತೆ ನಿಸ್ಸಂಕೋಚವಾಗಿ ನೇರವಾಗಿ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿರಿ.
- ಲೋಕೇಶಕುಮಾರ, ಎಸ್ಪಿ