ಇಂದು ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ
ಧಾರವಾಡ: ಮಾಳಮಡ್ಡಿಯ ಕೆ.ಇ. ಬೋರ್ಡ್ ಪಿಯು ಕಾಲೇಜಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆಯು ಮಂಗಳವಾರ ಬೆಳಗ್ಗೆ 10.30ಕ್ಕೆ ಕಾಲೇಜಿನಲ್ಲಿ ನಡೆಯಲಿದೆ. ಶಾಸಕ ಅರವಿಂದ ಬೆಲ್ಲದ, ಕಾಲೇಜು ಆಡಳಿತ ಸುಧಾರಣಾ ಮಂಡಳಿಯ ಅಧ್ಯಕ್ಷ ಡಾ.ಎಸ್.ಎಚ್. ನೆಗಳೂರ ಅತಿಥಿಗಳಾಗಿ ಭಾಗವಹಿಸುತ್ತಾರೆ ಎಂದು ಪ್ರಾಚಾರ್ಯ ರಮೇಶ ಮಾಂಗ ತಿಳಿಸಿದ್ದಾರೆ.
ಸುಮಂಗಲಾಗೆ ಬೆಳ್ಳಿ ಪದಕ
ಧಾರವಾಡ: ಗೃಹರಕ್ಷಕ ಮತ್ತು ಪೌರ ರಕ್ಷಣಾ ಅಕಾಡೆಮಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ ಪ್ರಥಮ ಚಿಕಿತ್ಸೆಯ ತರಬೇತಿಯಲ್ಲಿ ಗೃಹ ರಕ್ಷಕರಾದ ಸುಮಂಗಲಾ ಹುದ್ದಾರ ದ್ವಿತೀಯ ಸ್ಥಾನ ಗಳಿಸುವ ಮೂಲಕ ಬೆಳ್ಳಿ ಪದಕ ಪಡೆದಿದ್ದಾರೆ. ಈ ಕುರಿತು ಜಿಲ್ಲೆಯಲ್ಲಿನ ಗೃಹ ರಕ್ಷಕ ದಳದ ಸಮಾದೇಷ್ಟರ ಮತ್ತು ಕಚೇರಿ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ನಾಳೆಯಿಂದ ಶ್ರಾವಣ ಮಾಸದ ಕಾರ್ಯಕ್ರಮ
ಧಾರವಾಡ: ಶ್ರಾವಣ ಮಾಸ ನಿಮಿತ್ತ ತಾಲೂಕಿನ ಮನ್ಸೂರ್ ಗ್ರಾಮದ ರೇವಣಸಿದ್ಧೇಶ್ವರ ಮಠದದಲ್ಲಿ ಆ. 7ರಿಂದ ಸೆಪ್ಟೆಂಬರ್ 6ರ ವರೆಗೆ ಪ್ರತಿದಿನ ಸಂಜೆ 7.30ಕ್ಕೆ ಬೀರೇಶ್ವರ ಪುರಾಣ-ಪ್ರವಚನ ಪಠಣ, ಅಭಿಷೇಕ, ಪೂಜೆ, ಪ್ರಾರ್ಥನೆ ನಡೆಸಲಾಗುತ್ತಿದೆ.
ಕಂಪ್ಯೂಟರ್ ಉಚಿತತರಬೇತಿ: ಅರ್ಜಿ ಆಹ್ವಾನ
ಧಾರವಾಡ: ಕಂಪ್ಯೂಟರ್ ತರಬೇತಿ ಹಾಗೂ ಸಾಫ್ಟ್ವೇರ್ ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇಲ್ಲಿನ ಎಚ್ಕೆಎನ್ಜಿ ಟೆಕ್ ಸಂಸ್ಥೆ ಧಾರವಾಡ ಭಾಗದ ಕಂಪ್ಯೂಟರ್ ಕಲಿಕಾ ಅಭ್ಯರ್ಥಿಗಳಿಗೆ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಸಂಸ್ಥೆ ಆರಂಭಗೊಂಡ ಹೊಸತರಲ್ಲಿ ನೀಡಲು ಉದ್ದೇಶಿಸಿರುವ ವಿಶೇಷ ರಿಯಾಯಿತಿಯ ಜತೆಗೆ ಪ್ರಸ್ತುತ ಯಾವುದೇ ಕೋರ್ಸ್ ಆಯ್ದುಕೊಂಡರೆ ಅದಕ್ಕೆ ಉಪಯುಕ್ತವಾಗುವ ಮತ್ತೊಂದು ಕೋರ್ಸ್ನ್ನು ಉಚಿತವಾಗಿ ಕಲಿಸಲಾಗುವುದು. ಆ. 15ರೊಳಗೆ ಪ್ರವೇಶ ಪಡೆಯುವ ಎಲ್ಲ ಅಭ್ಯರ್ಥಿಗಳಿಗೆ ಈ ಉಚಿತ ಕೊಡುಗೆ ಲಭ್ಯವಿರುತ್ತದೆ. ಜತೆಗೆ ಕಂಪ್ಯೂಟರ್ ಕಲಿಯಲು ಬಯಸುವ ಯಾವುದೇ ಬಡ ಅಭ್ಯರ್ಥಿಗಳಿಗೆ ಹದಿನೈದು ದಿನಗಳ ಉಚಿತ ತರಬೇತಿಯನ್ನೂ ಸಂಸ್ಥೆ ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗೆ ಮೊ. 87626 42159 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಡಿಕ್ಕಿ: ಅಂಬ್ಯುಲೆನ್ಸ್ ಸಹಿತ ಸಾರಿಗೆ ಸಂಸ್ಥೆ ಬಸ್ ಜಖಂ
ಧಾರವಾಡ: ಸಮೀಪದ ಸತ್ತೂರ ಬಳಿ 108 ಅಂಬ್ಯುಲೆನ್ಸ್ ಹಾಗೂ ಸಾರಿಗೆ ಸಂಸ್ಥೆಯ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡ ಘಟನೆ ಸೋಮವಾರ ನಡೆದಿದ್ದು, ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ. ಧಾರವಾಡದಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಅಂಬ್ಯುಲೆನ್ಸ್ಗೆ ಆಕಸ್ಮಿಕವಾಗಿ ಸಾರಿಗೆ ಸಂಸ್ಥೆ ಬಸ್ಸೊಂದು ಡಿಕ್ಕಿ ಹೊಡೆದಿದೆ. ವಾಹನಗಳೆರಡು ಜಖಂ ಆಗಿದ್ದು, ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.