ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಒಳಚರಂಡಿ ಇದ್ದರೂ ನಿರ್ವಹಣೆ ಇಲ್ಲ

Lingaraj Badiger
Updated On : 6 Aug 2013, 11:49 am

ಧಾರವಾಡ: ಒಳಚರಂಡಿ ವ್ಯವಸ್ಥೆ ಇಲ್ಲವೆಂದು ನಗರದ ಕೆಲ ಬಡಾವಣೆ ನಿವಾಸಿಗಳು ಕೊರಗುತ್ತಿದ್ದರೆ ಇಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆಯಿದ್ದರೂ ಸಮರ್ಪಕ ನಿರ್ವಹಣೆ ಕೊರತೆ, ಪಾಲಿಕೆಯ ದಿವ್ಯ ನಿರ್ಲಕ್ಷ್ಯದಿಂದ ಒಳಚರಂಡಿ ನೀರು ನಿತ್ಯ ಮನೆಗಳಿಗೆ ಎಗ್ಗಿಲ್ಲದೇ ನುಗ್ಗುತ್ತಿದೆ.
ಇಲ್ಲಿನ ಗುಲಗಂಜಿಕೊಪ್ಪದ 13ನೇ ನಂಬರ್ ಸರ್ಕಾರಿ ಶಾಲೆ ಬಳಿ ಹಾಗೂ ಸುತ್ತಲಿನ ಮನೆಗಳಿಗೆ ಒಳಚರಂಡಿ ನೀರು ಬರುತ್ತಿದ್ದು, ಸಾರ್ವಜನಿಕರಿಗೆ ತೀರಾ ಕಿರಿಕಿರಿಯಾಗಿದೆ. ಒಳಚರಂಡಿಗಳನ್ನು ಸರಿಯಾಗಿ ಶುಚಿಗೊಳಿಸದ ಕಾರಣದಿಂದ ಕೊಳಚೆ ನೀರು ಮನೆ ಒಳಗೆ ನುಗ್ಗುತ್ತಿದೆ. ಹಾಗಾಗಿ, ಅಲ್ಲಿನ ನಿವಾಸಿಗಳು ಈ ಸಮಸ್ಯೆಯಿಂದ ಪಾರು ಮಾಡಿ ಎಂದು ಬರೋಬ್ಬರಿ 15 ಬಾರಿ ಪಾಲಿಕೆಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೇ, ಅಲ್ಲಿನ ಪಾಲಿಕೆ ಸದಸ್ಯರಾದ ಅನುಸೂಯಾ ಚೋಳಪ್ಪನವರ ಸಹ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳ ಆರೋಪ.
ಆಮೆಗತಿ ಜೋಡಣೆ ಕಾರ್ಯ: ನಿತ್ಯ ಬಳಕೆಯ ನೀರು ಒಳಚರಂಡಿಯಲ್ಲಿ ಬೀಳುತ್ತಿದೆ. ಆದರೆ, ಒಳಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ಇದರಿಂಗಾಗಿ ಒಳಚರಂಡಿ ನೀರು ಎಲ್ಲೆಂದರಲ್ಲಿ ಸಾಗುತ್ತಿದೆ. ಈಗಾಗಲೇ ಪಾಲಿಕೆ ಮತ್ತು ಜಿಲ್ಲಾಡಳಿತ ನಗರದಲ್ಲಿ ನೂತನ ಒಳಚರಂಡಿ ವ್ಯವಸ್ಥೆ ಜೋಡಣೆಗೆ ಮುಂದಾಗಿದೆ. ಆದರೆ, ಈ ಜೋಡಣೆ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ. ಅಲ್ಲದೇ, ಪ್ರಸ್ತುತ ಮಳೆಗಾಲವಾದ್ದರಿಂದ ಒಳಚರಂಡಿ ಕಾಮಗಾರಿಗೆ ಕೊಂಚ ಅಡತಡೆ ಉಂಟಾಗಿದೆ. ಅಲ್ಲದೇ, ನಗರದಲ್ಲಿನ ಪ್ರಮುಖ ರಸ್ತೆಗಳನ್ನು ಬೇಕಾಬಿಟ್ಟಿ ಅಗೆಯಲಾಗಿದೆ. ಇದರಿಂದಾಗಿ ಒಳಚರಂಡಿ ನೀರು ಮತ್ತು ಮಳೆ ನೀರು ರಸ್ತೆಯ ಮೇಲೆ ಸಾಗುತ್ತಿದ್ದು, ನಗರದ ನಿವಾಸಿ ಹಾಗೂ ವಾಹನ ಸಂಚಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಗುಲಗಂಜಿಕೊಪ್ಪದ ಹಳೆ ಒಳಚರಂಡಿ ಸಹ ಇದಕ್ಕೆ ಹೊರತಾಗಿಲ್ಲ. ರಸ್ತೆಯಲ್ಲಿ ಒಳಚರಂಡಿ ನೀರು ನಿಲ್ಲುತ್ತಿದ್ದು, ಅನೇಕ ಸಾಂಕ್ರಾಮಿಕ ರೋಗ ಹುಟ್ಟಿಕೊಳ್ಳುವ ಕೇಂದ್ರವಾಗಿ ಪರಿಣಮಿಸಿದೆ. ಅಲ್ಲಿನ ನಿವಾಸಿಗಳು ಮೂಗು ಮುಚ್ಚಿಕೊಂಡೆ ನಿತ್ಯ ಕಾರ್ಯ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಪಾಲಿಕೆ ಸದಸ್ಯರಿಗೆ ನಿವಾಸಿಗಳ ಈ ಸಮಸ್ಯೆ ಆಲಿಸದಷ್ಟು ಸೌಜನ್ಯವಿಲ್ಲವಾಗಿದೆ ಎನ್ನುತ್ತಾರೆ ಸ್ಥಳೀಯರಾದ ಅರುಣ್ ಯಾವಗಲ್.
ಸದ್ಯ ಅಲ್ಲಿ 2 ಒಳಚರಂಡಿ ಪೈಪ್‌ಲೈನ್‌ಗಳಿವೆ. ಯಾವುದಕ್ಕೂ ಉಪಯೋಗವಿಲ್ಲ. ಪಾಲಿಕೆ ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕು. ಅಲ್ಲದೇ, ಈ ವ್ಯವಸ್ಥೆಗೆ ಸಮರ್ಪಕ ನಿರ್ವಹಣೆ ನೀಡಿದರೆ, ಸಾಕು ಎನ್ನುವ ನಿವಾಸಿಗಳಿಗೆ ಪಾಲಕೆಯ ಸದಸ್ಯರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಯಾವ ರೀತಿ ಸ್ಪಂದನೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement