ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ ವಿಪ ಕ್ಷೇತ್ರ: ತ್ರಿಕೋನ ಸ್ಪರ್ಧೆ

Lingaraj Badiger
Updated On : 6 Aug 2013, 11:49 am

ಧಾರವಾಡ: ವಿಧಾನ ಪರಿಷತ್ತಿಗೆ ಧಾರವಾಡ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ಆ.22ರಂದು ನಡೆಯಲಿರುವ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸೋಮವಾರ ಮುಗಿದ್ದಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ನಿರೀಕ್ಷೆಯಂತೆ ಕಾಂಗ್ರೆಸ್ಸ್‌ನಿಂದ ನಾಗರಾಜ ಛಬ್ಬಿ, ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್, ಕೆಜೆಪಿಯಿಂದ ಶಿವರಾಜ ಸಜ್ಜನ ನಾಮಪತ್ರ ಸಲ್ಲಿಸಿದರು.
ಹಾನಗಲ್ ತಾಲೂಕಿನ ಬಿಂಗಾಪುರದ ಬಸವರಾಜ ಹಾದಿ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ಈ ಚುನಾವಣೆಯಲ್ಲಿ ಜೆಡಿಎಸ್ ಹಿಂದೆ ಸರಿದಿದೆ. ಒಟ್ಟು 4 ಜನ ಏಳು ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್: ನಗರದ ಉಳವಿ ಬಸವೇಶ್ವರ ದೇವಸ್ಥಾನದಿಂದ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಸಚಿವರು, ಶಾಸಕರು, ಮುಖಂಡರು ಸೇರಿದಂತೆ ಅಪಾರ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ, ಕ್ಷೇತ್ರವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿ ಪಕ್ಷಕ್ಕೆ ಶೇ. 60ರಷ್ಟು ಕಾಂಗ್ರೆಸ್ ಪಕ್ಷದ ಮೇಲೆ ಒಲವು, ವಿಶ್ವಾಸ ಹೊಂದಿರುವ ಸದಸ್ಯರಿದ್ದಾರೆ. ಜೊತೆಗೆ ಸರ್ಕಾರದ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಎಲ್ಲ ಮುಖಂಡರು ಸಜ್ಜಾಗಿದ್ದಾರೆ. ಹೀಗಾಗಿ ಛಬ್ಬಿ ಅವರು ಪ್ರಚಂಡ ಬಹುಮತದಿಂದ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಬಿಜೆಪಿಯೇ ಪ್ರತಿಸ್ಪರ್ಧಿಯಾಗಿದ್ದು, ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಿರುವುದು ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇರುವ ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲಕರವಾಗಲಿದೆ ಎಂದು ಎಚ್‌ಕೆ ವಿಶ್ಲೇಷಿಸಿದರು.
ಪಕ್ಷದ ವರಿಷ್ಠರು ಮೂರು ಜಿಲ್ಲೆಗಳ ಮುಖಂಡರು, ಶಾಸಕರು, ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ಸಜ್ಜನ ಮತ್ತು ಸುಶಿಕ್ಷಿತ ನಾಗರಾಜ ಛಬ್ಬಿ ಅವರನ್ನು ಅಂತಿಮವಾಗಿ ಅಭ್ಯರ್ಥಿಯಾಗಿ ಘೋಷಿಸಿದೆ. ಹೀಗಾಗಿ ಛಬ್ಬಿ ಅವರ ಮೇಲೆ ಚುನಾವಣೆ ಒತ್ತಡ ಹಾಕದೆ ಎಲ್ಲರೂ ಕೂಡಿ ಚುನಾವಣೆಯಲ್ಲಿ ಗೆಲ್ಲಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಕಾಂಗ್ರೆಸ್ಸಿನಿಂದ ಶ್ರೀನಿವಾಸ ಮಾನೆ ಸಹ ಆಯ್ಕೆಯಾಗಿದ್ದರು. ಈ ಬಾರಿ ಇನ್ನೊಂದು ಸ್ಥಾನವನ್ನು ಸಹ ಕಾಂಗ್ರೆಸ್ ಪಡೆದುಕೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಮತ್ತು ಜನಪರ ಯೋಜನೆಗಳು ನಾಗರಾಜ ಛಬ್ಬಿ ಅವರ ಗೆಲವಿಗೆ ಸಹಕಾರಿಯಾಗಲಿವೆ ಎಂದರು.
ಒಗ್ಗಟ್ಟು ಪ್ರದರ್ಶನ: ಈ ಹಿಂದಿನ ಹಲವು ಚುನಾವಣೆಗಳಲ್ಲಿ ವ್ಯಕ್ತಿ ಪ್ರತಿಷ್ಠೆ ಗುಂಪುಗಾರಿಕೆ ಸಾಮಾನ್ಯವಾಗಿತ್ತು. ಆದರೆ, ಈ ಬಾರಿ ಪಾಠ ಕಲಿತಂತಿರುವ ಕಾಂಗ್ರೆಸ್‌ನ ಎಲ್ಲ ಹಿರಿಯ-ಕಿರಿಯ ಮುಖಂಡರು ಛಬ್ಬಿ ನಾಮಪತ್ರ ಸಲ್ಲಿಸುವ ವೇಳೆ ಹಾಜರಿರುವ ಮೂಲಕ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು.
ಆಡಳಿತ ಪಕ್ಷ ಕಾಂಗ್ರೆಸ್ ಇರುವುದರಿಂದ ಸಾಮಾನ್ಯವಾಗಿ ಛಬ್ಬಿ ಅವರಿಗೆ ಅಪಾರ ಬೆಂಬಲಿಗರ ಬೆಂಬಲ ವ್ಯಕ್ತವಾಯಿತು. ಜಿಲ್ಲಾ ಅಧ್ಯಕ್ಷ ಸಿ.ಎಸ್. ಶಿವಳ್ಳಿ, ಮನೋಹರ ತಹಸೀಲ್ದಾರ್, ಜಿ.ಎಸ್. ಗಡ್ಡದೇವರಮಠ, ಎ.ಎಂ. ಹಿಂಡಸಗೇರಿ, ಮಾಜಿ ಸಚಿವ ಎಸ್.ಆರ್. ಮೋರೆ, ಶಾಸಕರಾದ ವೀರಣ್ಣ ಮತ್ತೀಕಟ್ಟಿ, ಶ್ರೀನಿವಾಸ ಮಾನೆ, ವಿನಯ ಕುಲಕರ್ಣಿ, ಬಿ.ಆರ್. ಯಾವಗಲ್ಲ, ಪ್ರಸಾದ ಅಬ್ಬಯ್ಯ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಎಫ್.ಎಚ್. ಜಕ್ಕಪ್ಪನವರ, ಮಹೇಂದ್ರ ಸಿಂಘಿ, ವಿಜಯ ಕುಲಕರ್ಣಿ, ಸದಾನಂದ ಡಂಗನವರ. ಸತೀಶ ಮೆಹರವಾಡೆ, ಎಚ್.ಸಿ. ಮೊರಬ, ನಾಗರಾಜ ಗೌರಿ, ಅನಿಲಕುಮಾರ ಪಾಟೀಲ, ಜಿ.ದೇವಕಿ, ಯಾಸೀನ್ ಹಾವೇರಿಪೇಟ, ವಸಂತ ಅರ್ಕಾಚಾರ, ಸಾವಿರಾರು ಕಾರ್ಯಕರ್ತರಿದ್ದರು.
ಕೆಜೆಪಿ: ಕೆಜೆಪಿಯ ಶಿವರಾಜ ಸಜ್ಜನ ಅವರು ಮಾಜಿ ಸಚಿವ ಸಿ.ಎಂ. ಉದಾಸಿ ನೇತೃತ್ವದಲ್ಲಿ ತಮ್ಮ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಮಾಜಿ ಸಚಿವ ಉದಾಸಿ ಮಾತನಾಡಿ, ಈ ಚುನಾವಣೆಯಲ್ಲಿ ಅನುಭವ ಇರುವ ಅಭ್ಯರ್ಥಿಗೆ ಮತದಾರರು ಒಲವು ತೋರಿಸಲಿದ್ದಾರೆ. ಅಭ್ಯರ್ಥಿ ಶಿವರಾಜ ಸಜ್ಜನ, ಮಾಜಿ ಸಿಎಂ ಬಿಎಸ್‌ವೈ ಅಧಿಕಾರಾವಧಿಯಲ್ಲಿ ಅನೇಕ ಕೆಲಸ ನಿರ್ವಹಿಸಿದ್ದು, ಗೆಲವು ಕೆಜೆಪಿಗೆ ಎಂದರು. ಮಾಜಿ ಸಚಿವ ಜಬ್ಬಾರಖಾನ್ ಹೊನ್ನಳ್ಳಿ, ಮಾಜಿ ಶಾಸಕರಾದ ಅಶೋಕ ಕಾಟವೆ, ನೆಹರೂ ಓಲೇಕಾರ ಇತರರಿದ್ದರು.
ಬಿಜೆಪಿ: ಬಿಜೆಪಿಯ ಪ್ರದೀಪ್ ಶೆಟ್ಟರ್ ನಗರದ ಅಕ್ಕನ ಬಳಗದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಸಂಸದ ಪ್ರಹ್ಲಾದ ಜೋಶಿ, ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಮೈತ್ರಿ ಮಾಡುವ ಕುರಿತು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಈ ಕುರಿತು ರಾಷ್ಟ್ರೀಯ ಮುಖಂಡರ ಜೊತೆ ಚರ್ಚಿಸಿ ನಿರ್ಣಯಕ್ಕೆ ಬರುವುದಾಗಿ ಸ್ಪಷ್ಟಪಡಿಸಿದರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕಳೆದ ಚುನಾವಣೆಯಲ್ಲಿ ಈ ಸ್ಥಾನ ಬಿಜೆಪಿಗೆ ಒಲಿದಿದ್ದು, ಈ ಬಾರಿಯು ನಮ್ಮ ಅಭ್ಯರ್ಥಿಯೇ ಗೆಲ್ಲುತ್ತಾರೆ. ಮೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಹೆಚ್ಚಿದ್ದು ಗೆಲವು ಖಾತ್ರಿ ಎಂದರು.
ಮಾಜಿ ಸಚಿವರಾದ ಬಸವರಾಜ ಬೊಮ್ಮಾಯಿ, ಕಳಕಪ್ಪ ಬಂಡಿ, ಶಾಸಕರಾದ ಅರವಿಂದ ಬೆಲ್ಲದ, ಸೋಮಣ್ಣ ಬೇವಿನಮರದ, ಮಾಜಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ವೀರಭದ್ರಪ್ಪ ಹಾಲಹರವಿ, ಜಿಲ್ಲಾಧ್ಯಕ್ಷ ಎಂ.ಆರ್. ಪಾಟೀಲ, ಲಿಂಗರಾಜ ಪಾಟೀಲ, ಈರೇಶ ಅಂಚಟಗೇರಿ, ಮಲ್ಲಿಕಾರ್ಜುನ ಸಾವುಕಾರ, ವೀರಣ್ಣ ಸವಡಿ, ಈರಣ್ಣ ಜಡಿ, ವಿಜಯ ನಾಡಜೋಶಿ, ವೀರೇಶ ಸಲಗಾರ, ಮಲ್ಲನಗೌಡ ಪಾಟೀಲ, ಮೋಹನ ರಾಮದುರ್ಗ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement