ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನನಗಿಲ್ಲವೇ 'ಸುವರ್ಣ' ಭಾಗ್ಯ...?

Lingaraj Badiger
Updated On : 6 Aug 2013, 11:58 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 5
ನಿಗದಿತ ಸಮಯಕ್ಕೆ ಕಾರ್ಯನಿರ್ವಹಿಸುವುದಕ್ಕೆ ಪಡೆದಿರುವ ಐಎಸ್‌ಓ 9001:2008 ಪ್ರಮಾಣ ಪತ್ರ ವ್ಯರ್ಥವಾಯಿತೇನೋ?
ನಾನು ಸ್ಥಾಪನೆಗೊಂಡು 50 ವರ್ಷ ಗತಿಸಿದರೂ ಒಂದೇ ಒಂದು ಸುವರ್ಣ ಮಹೋತ್ಸವ ಕಾರ್ಯಕ್ರಮ ಮಾಡದಿರುವುದಕ್ಕೆ ಇಂಥದೊಂದು ಆಕ್ರೋಶ ಭರಿತ ಸಂಶಯ ನನ್ನ ಮನದಲ್ಲಿ ಮೂಡಲು ಪ್ರಮುಖ ಕಾರಣ. ಸುವರ್ಣ ಮಹೊತ್ಸವ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಬರೀ ಆಕಾಶದೆತ್ತರದಂತ ದೊಡ್ಡ ದೊಡ್ಡ ಮಾತುಗಳು ಕೇಳಿಬಂದವೆ ಹೊರತು, ಅನುಷ್ಠಾನದಲ್ಲಿ ಮಾತ್ರ ಶೂನ್ಯ ಸಾಧನೆ.
ಈಗಲೂ ನಾನಾರೆಂಬ ಊಹೆ ಮೂಡಲಿಲ್ಲವೆ? ನಾನು, ಕಳೆದ 51 ವರ್ಷಗಳಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಸುತ್ತಲಿನ ಕೆಲ ಹಳ್ಳಿಗಳಲ್ಲಿನ ಜನಸಾಮಾನ್ಯರಿಗೆ ಮೂಲಸೌಕರ್ಯ ಒದಗಿಸಲು ಹಾಗೂ ಅವಳಿ ನಗರವನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಹಗಲು-ರಾತ್ರಿ ಎನ್ನದೇ ಚಿಂತಿಸುತ್ತಿರುವ 'ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ'.
ನನ್ನ ಸ್ಥಾಪನೆಯಾದದ್ದು 1962ರ ಮಾರ್ಚ್ 1. 2012ರ ಮಾ. 1ಕ್ಕೆ ನನಗೆ 50 ವರ್ಷದ ಸಂಭ್ರಮ. ನನ್ನ ಸಂಭ್ರಮದಲ್ಲಿ ಅವಳಿ ನಗರದ ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳುವ ಮೂಲಕ ಸಾರ್ವಜನಿಕರಿಗೆ ಹೊಸತನದ ಯೋಜನೆಗಳನ್ನೇನಾದರೂ ಪ್ರಕಟಿಸುತ್ತಾರೋ ಎಂದು ಕಾಯುತ್ತಿದ್ದೆ. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಸುವರ್ಣ ಮಹೋತ್ಸವ ಸಂಭ್ರಮ ನನ್ನಲ್ಲಷ್ಟೇ ಇತ್ತೇ ಹೊರತು, ಚುನಾಯಿತ ಪ್ರತಿನಿಧಿಗಳಿಗಾಗಲಿ ಅಥವಾ ಅಧಿಕಾರಿಗಳಿಗಾಗಲಿ ಇರಲಿಲ್ಲ ಎಂಬ ಭಾವನೆ ನನ್ನದು. ಸುವರ್ಣ ಮಹೋತ್ಸವದ ಕಾರ್ಯಕ್ರಮ ಮಾಡಲೇಬೇಕೆಂಬ ದೃಢ ನಿರ್ಧಾರ ಇವರಲ್ಲಿದ್ದಿದ್ದರೆ ನನಗೆ 50 ವರ್ಷ ಪೂರ್ಣಗೊಂಡು ಒಂದು ವರ್ಷವಾದರೂ ಬರೀ ಯೋಜನೆ ರೂಪಿಸುವಲ್ಲಿಯೇ ಕಾಲ ಕಳೆಯುತ್ತಿರಲಿಲ್ಲ.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸುವರ್ಣ ಮಹೋತ್ಸವ ಸಮಿತಿಯನ್ನು ರಚಿಸಲಾಗಿತ್ತು. ಆದರೆ, ಈ ಸಮಿತಿ ಕೇವಲ ಸಭೆ ಮಾಡುವುದರಲ್ಲಿಯೇ ಕಾಲ ಕಳೆಯಿತು. ನೆಪಮಾತ್ರಕ್ಕೆ ಎನ್ನುವಂತೆ ಈ ಸಮಿತಿ ಸಂಗೀತ ಕಾರ್ಯಕ್ರಮ ಹಾಗೂ ಇನ್ನೊಂದೆರೆಡು ಕಾರ್ಯಕ್ರಮಗಳನ್ನು ನಡೆಸಿ, ಕೈ ತೊಳೆದುಕೊಂಡಿತು. ಈ ಸಮಿತಿ ಸನ್ಮಾನ, ಗ್ರಂಥಾಲಯ, ಅಲಂಕಾರ ಸೇರಿದಂತೆ ವಿವಿಧ ಹೆಸರುಗಳಲ್ಲಿ ಏಳೆಂಟು ಉಪ ಸಮಿತಿಗಳನ್ನೂ ರಚಿಸಿತ್ತು.
ಸಮಿತಿ ಈ ಎಲ್ಲ ಕಾರ್ಯಗಳನ್ನು ನೋಡಿ ಒಂದು ವರ್ಷ ತಡವಾದರೂ ಸರಿ, ನನಗೆ ಸುವರ್ಣ ಮಹೋತ್ಸವದ ಅಭಿನಂದನೆ ಲಭಿಸುತ್ತದೆಂದು ಸಂತಸ ಪಟ್ಟಿದ್ದೆ. ಅಷ್ಟೇ ಅಲ್ಲ, ಈ ಸಮಿತಿ ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಸಭೆಗಳನ್ನೂ ನಡೆಸಿತ್ತು. ಈ ಸಭೆಗಳಲ್ಲಿ ಸುವರ್ಣ ಮಹೋತ್ಸವಕ್ಕೆ ರಾಷ್ಟ್ರಪತಿ, ಪ್ರಧಾನಿ ಅವರನ್ನು ಆಹ್ವಾನಿಸುವ ಬಗ್ಗೆ ಚರ್ಚೆಗಳೂ ನಡೆದವು. ಇದನ್ನೆಲ್ಲ ಗಮನಿಸಿ, ನನ್ನ ಸುವರ್ಣ ಮಹೋತ್ಸವದ ಆಚರಣೆ ಭರ್ಜರಿಯಾಗಿಯೆ ನಡೆಯುತ್ತದೆಂದು ನಂಬಿದ್ದೆ. ಆದರೆ ಈ ಸಂತಸ ಬಹಳ ದಿನ ಉಳಿಯಲೇ ಇಲ್ಲ.
ಭಗ್ನಗೊಂಡ ಕನಸು: ಮುಂದಿನ ಕೆಲವೇ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿದ್ದರಿಂದ ನನ್ನ ಸಂತಸಕ್ಕೆ ತಣ್ಣೀರೆರಚಿದಂತಾಯಿತು. ಮಹಾನಗರ ಪಾಲಿಕೆ ಆಡಳಿತಾವಧಿ ಪೂರ್ಣಗೊಳ್ಳುತ್ತದೆಂಬ ಪರಿಜ್ಞಾನ ಈ ಸಮಿತಿಗೆ ಇದ್ದರೂ, ಮಹೋತ್ಸವ ಆಚರಿಸುವಲ್ಲಿ ಯಾವುದೇ ರೀತಿಯ ಅವಸರ ಕಾಣಲಿಲ್ಲ.
ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿದ್ದರಿಂದ ಸುವರ್ಣ ಮಹೋತ್ಸವ ಸಮಿತಿ ಇದುವರೆಗೆ ಮಾಡಿದ್ದ ಬೆರಳೆಣಿಕೆಯ ಕಾರ್ಯಗಳು ಹಾಗೂ ಉಪ ಸಮಿತಿಗಳ ರಚನೆಗಳೆಲ್ಲ ನೀರಿನಲ್ಲಿ ಎಳ್ಳುನೀರು ಬಿಟ್ಟಂತಾದವು.
ಅಂದ ಹಾಗೆ ಇನ್ನೊಂದು ಮಾತು, ಸುವರ್ಣ ಮಹೋತ್ಸವದ ಅಂಗವಾಗಿ ಅವಳಿ ನಗರದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರಲು ಈ ಸಮಿತಿ ರಾಜ್ಯ ಸರ್ಕಾರಕ್ಕೆ ರು. 620 ಕೋಟಿಗಳ ಪ್ರಸ್ತಾವನೆಯನ್ನೂ ಸಲ್ಲಿಸಿತ್ತು. ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರಿಂದ ಈ ಪ್ರಸ್ತಾವನೆಯೂ ಮೂಲೆ ಗುಂಪಾಗಿರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ಣಗೊಂಡು 5 ತಿಂಗಳು ಗತಿಸಿದರೂ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಜಾರಿಗೊಂಡಿಲ್ಲ. ವಿಧಾನಸಭೆ ಚುನಾವಣೆ, ಬಜೆಟ್ ಮಂಡನೆ, ಅಧಿವೇಶನಗಳ ನೆಪದಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮೇಯರ್- ಉಪ ಮೇಯರ್ ಚುನಾವಣೆ ನಡೆಯಲೇ ಇಲ್ಲ. ಇದೀಗ ವಿಧಾನಪರಿಷತ್‌ಗೆ ಉಪ ಚುನಾವಣೆ ಘೋಷಣೆಯಾಗಿರುವುದರಿಂದ ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆಯಲ್ಲಿ ಸದ್ಯಕ್ಕಂತೂ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಅಸ್ತಿತ್ವಕ್ಕೆ ಬರುವುದಿಲ್ಲ. ಹೀಗಾಗಿ ಇನ್ನೂ ಕೆಲ ತಿಂಗಳವರೆಗಂತೂ ನನಗೆ ಸುವರ್ಣ ಮಹೋತ್ಸವದ ಸಂತಸ ಲಭಿಸುವ ಸಾಧ್ಯತೆಗಳು ಇಲ್ಲ.
ಮಹಾನಗರ ಪಾಲಿಕೆಯಲ್ಲಿ ಹೊಸ ಆಡಳಿತ ಅಸ್ತಿತ್ವಕ್ಕೆ ಬಂದ ನಂತರ ಮತ್ತೊಮ್ಮೆ ಸಮಿತಿ ಹಾಗೂ ಉಪ ಸಮಿತಿಗಳು ರಚನೆಗೊಳ್ಳುತ್ತವೆ. ಈ ಸಮಿತಿಗಳು ಕಾರ್ಯಾರಂಭ ಮಾಡುವ ಹೊತ್ತಿಗೆ ಲೋಕಸಭೆ ಚುನಾವಣೆ ಘೋಷಣೆಗೊಂಡಲ್ಲಿ ಮತ್ತೆ ಕೆಲ ತಿಂಗಳು ನಾನು ಸುವರ್ಣ ಮಹೋತ್ಸವದ ನಿರೀಕ್ಷೆಯಲ್ಲಿಯೇ ದಿನ ದೂಡಬೇಕಾಗುತ್ತದೆ.
ಸುವರ್ಣ ಮಹೋತ್ಸವದ ಸಂತಸ ಕೇವಲ ನನಗಾಗಿ ಅಲ್ಲ. ನನ್ನ ಜತೆಗೆ ಅವಳಿ ನಗರದಲ್ಲಿರುವ 12 ಲಕ್ಷಕ್ಕೂ ಹೆಚ್ಚಿನ ಜನರು ಈ ಸಂತಸ ಪಡೆಯುತ್ತಾರೆ. ಆದರೆ ಸದ್ಯಕ್ಕಂತೂ ಈ ಸಂತಸದ ಆಶಯ ದಿನದಿಂದ ದಿನಕ್ಕೆ ದೂರಾಗುತ್ತಿದೆ.
ಹೀಗಾಗಿ ನನಗೆ ಸುವರ್ಣ ಮಹೋತ್ಸವ ನಡೆಯುತ್ತದೆಂಬ ಆಶಯವನ್ನೇ ಬಿಟ್ಟುಬಿಟ್ಟಿದ್ದೇನೆ. ಸುವರ್ಣ ಮಹೋತ್ಸವ ಒಂದು ಕನಸು. ಆ ಕನಸು ನನಸಾಗುವ ಸಾಧ್ಯತೆ ಕಡಿಮೆ. ಈ ಕನಸಿನಲ್ಲೇ ಸಂತಸ ಪಟ್ಟಿದ್ದೇನೆ. ನನ್ನ ಕನಸು ಕನಸಾಗಿಯೇ ಉಳಿಯುತ್ತದೆಯೋ ಅಥವಾ ನನಸಾಗುತ್ತದೋ, ಗೊತ್ತಿಲ್ಲ.
ಇಂತಿ ತಮ್ಮ ವಿಶ್ವಾಸಿ
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ
(ಸುವರ್ಣ ಮಹೋತ್ಸವದ ಆಚರಣೆಯ ನಿರೀಕ್ಷೆಯಲ್ಲಿ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement