ಬಿಜೆಪಿ ವಿರುದ್ಧ ಸೇಡಿಗೆ ಕೆಜೆಪಿ ಸಜ್ಜು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 5
ವಿಧಾನ ಪರಿಷತ್ ಉಪ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಆಡಳಿತಾರೂಢ ಪಕ್ಷ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿಗೆ ಈ ಚುನಾವಣೆ ಸವಾಲಾಗಿ ಪರಿಣಮಿಸಿರುವುದರಿಂದ ಚುನಾವಣಾ ಕಣ ರಂಗೇರಿದೆ.
ಚುನಾವಣೆ ಘೋಷಣೆಯಾದ ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ಏಕಕಾಲಕ್ಕೆ ತನ್ನ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಬಿಜೆಪಿಗೆ ಮಗ್ಗುಲ ಮುಳ್ಳು ಎಂದೆನಿಸಿಕೊಂಡಿರುವ ಕೆಜೆಪಿ ಕೊನೆ ಕ್ಷಣದಲ್ಲಿ ರಂಗಪ್ರವೇಶ ಮಾಡಿದೆ.
ಕಾಂಗ್ರೆಸ್ನಿಂದ ಯುವ ಮುಖಂಡ ನಾಗರಾಜ ಛಬ್ಬಿ ಕಣಕ್ಕಿಳಿಯುತ್ತಿದ್ದರೆ ಅತ್ತ ಬಿಜೆಪಿಯಿಂದ ಪ್ರದೀಪ್ ಶೆಟ್ಟರನ್ನು ಕಣಕ್ಕಿಳಿಸಲಾಗಿದೆ. ಇಬ್ಬರಿಗೂ ಇದು ಮೊದಲ ಚುನಾವಣೆ. ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶಿವರಾಜ ಸಜ್ಜನರ ಬಿಜೆಪಿ ಅಭ್ಯರ್ಥಿಯಾಗಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.
ಕಾಂಗ್ರೆಸ್ ಹಾದಿ ಸುಲಭ: ಹಾವೇರಿ, ಧಾರವಾಡ ಹಾಗೂ ಗದಗ ಜಿಲ್ಲೆಯ ವ್ಯಾಪ್ತಿಗೆ ನಡೆಯುತ್ತಿರುವ ಚುನಾವಣೆ ಇದಾಗಿದೆ. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿರುವುದರಿಂದ ಸಹಜವಾಗಿ ಸ್ಥಳೀಯ ಸಂಸ್ಥೆಗಳ ಮತದಾರರೂ ಆಡಳಿತಾರೂಢ ಪಕ್ಷದ ಪರವಾಗಿ ಮತದಾನ ಮಾಡಬಹುದು. ಜತೆಗೆ ಇತ್ತೀಚೆಗಷ್ಟೇ ನಡೆದ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪಪಂ, ಪುರಸಭೆಯಲ್ಲಿ ಕಾಂಗ್ರೆಸ್ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವುದರಿಂದ ಸಹಜವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲವಾಗಲಿದೆ. ಈ ಮಧ್ಯೆ ನೂತನ ಸದಸ್ಯರಿಗೆ ಮತದಾನದ ಹಕ್ಕಿದೆಯೇ ಇಲ್ಲವೋ ಎನ್ನುವ ಗೊಂದಲಕ್ಕೆ ಭಾರತೀಯ ಚುನಾವಣಾ ಆಯೋಗ ನೂತನ ಸದಸ್ಯರು ಮತದಾನ ಮಾಡಬಹುದು ಎನ್ನುವ ಸಂಗತಿ ಸ್ಪಷ್ಟಪಡಿಸಿ ತೆರೆ ಎಳೆದಿದೆ.
ಇನ್ನು ರಾಜ್ಯದಲ್ಲಿ ನಡೆದ ಬಹುತೇಕ ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷದ ಅಭ್ಯರ್ಥಿಯೇ ಆಯ್ಕೆಯಾದ ಉದಾಹರಣೆಗಳಿವೆ. ಹೀಗಾಗಿ ಈ ಚುನಾವಣೆಯಲ್ಲಿಯೂ ಕಾಂಗ್ರೆಸ್ ಹಾದಿ ಸುಗಮವಾಗಬಹುದು ಎನ್ನಲಾಗಿದೆ. ಇದೇ ವೇಳೆ ಪ್ರಸ್ತುತ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಲಿದೆ. ಏಕೆಂದರೆ ರಾಜ್ಯದಲ್ಲಿ ಅಧಿಕಾರಕ್ಕಿರುವ ಕಾಂಗ್ರೆಸ್ ಒಂದು ವೇಳೆ ಚುನಾವಣೆಯಲ್ಲಿ ಸೋತರೆ ಮುಖಭಂಗ ಅನುಭವಿಸಿದಂತಾಗುತ್ತದೆ. ಆದರೆ, ಈ ರೀತಿಯಾಗದಿರುವ ನಿಟ್ಟಿನಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಲು ಶಕ್ತಿ ಮೀರಿ ಶ್ರಮ ಹಾಕಲಿದೆ.
ಎಲ್ಲರ ಬೆಂಬಲ: ಇನ್ನೊಂದು ಗಮನಾರ್ಹ ಸಂಗತಿಯೆಂದರೆ ನಾಗರಾಜ ಛಬ್ಬಿ ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಹು-ಧಾ ಪಶ್ಚಿಮ ಮತಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದರೆ, ಅಂತಿಮ ವೇಳೆಯಲ್ಲಿ ಟಿಕೆಟ್ ಕೈತಪ್ಪಿತ್ತು. ಈ ಬೆಳವಣಿಗೆಯ ಬಗ್ಗೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಬೇಸರ ವ್ಯಕ್ತಪಡಿಸಿದ್ದರು. ಏಕೆಂದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ ಬಲಗೊಳಿಸುವಲ್ಲಿ ನಾಗರಾಜ ಛಬ್ಬಿ ಮಹತ್ವದ್ದಾಗಿದೆ. ಅದರಲ್ಲೂ ಅಪಾರ ಸಂಖ್ಯೆಯ ಯುವ ಪಡೆ ಹೊಂದಿರುವ ನಾಗರಾಜ ಪ್ರಸಂಗ ಬಂದಾಗ ತಮ್ಮ ಸ್ಥಾನವನ್ನೂ ತ್ಯಜಿಸಿ ಅನ್ಯ ನಾಯಕರಿಗೆ ಬಿಟ್ಟುಕೊಟ್ಟ ಉದಾಹರಣೆಯಿದೆ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿಯೇ ನಾಗರಾಜ್ಗೆ ಟಿಕೆಟ್ ಕೊಡಬೇಕೆಂದು ಅಪಾರ ಬೆಂಬಲ ವ್ಯಕ್ತವಾಗಿತ್ತು. ಏತನ್ಮಧ್ಯೆ ವಿಧಾನಸಭೆ ಉಪಚುನಾವಣೆ ಎದುರಾಗಿ ಪಕ್ಷದ ಅಭ್ಯರ್ಥಿ ಯಾರೂ ಎಂಬ ಪ್ರಶ್ನೆ ಎದುರಾಗಿದ್ದೇ ತಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಶಾಸಕ ಪ್ರಸಾದ ಅಬ್ಬಯ್ಯ, ಎಸ್.ಆರ್. ಮೋರೆ, ಸಿ. ಎಸ್. ಶಿವಳ್ಳಿ, ನಾಗರಾಜ ಛಬ್ಬಿ ಹೆಸರು ಪ್ರಸ್ತಾಪಿಸಿದ್ದರು. ಇದಲ್ಲದೇ ಪಕ್ಕದ ಹಾವೇರಿ ಹಾಗೂ ಗದಗ ಜಿಲ್ಲೆಯಿಂದಲೂ ನಾಗರಾಜ ಛಬ್ಬಿ ಸೂಕ್ತ ಅಭ್ಯರ್ಥಿ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಸಚಿವ ಎಚ್.ಕೆ. ಪಾಟೀಲ, ಹಿರಿಯರಿಗೆ ಆದ್ಯತೆ ನೀಡಬೇಕೆಂದಾದಲ್ಲಿ ಡಿ.ಆರ್. ಪಾಟೀಲ ಹಾಗೂ ಎ. ಎಂ. ಹಿಂಡಸಗೇರಿ ಪೈಕಿ ಒಬ್ಬರಿಗೆ ಅವಕಾಶ ನೀಡಿ, ಯುವಕರಿಗೆ ಆದ್ಯತೆ ನೀಡಬೇಕೆಂದಲ್ಲಿ ನಾಗರಾಜ ಛಬ್ಬಿಯೇ ಸೂಕ್ತ ಎಂಬ ಅಭಿಪ್ರಾಯವನ್ನು ಪಕ್ಷದ ಚೌಕಟ್ಟಿನಲ್ಲಿ ವ್ಯಕ್ತಪಡಿಸಿದ್ದರು. ಹೀಗಿರುವಾಗ ಎಚ್.ಕೆ. ಪಾಟೀಲ ಅವರು ನಾಗರಾಜ್ ಬೆಂಬಲಿಕ್ಕೆ ನಿಲ್ಲುತ್ತಾರೆ ಎನ್ನುವ ವಿಷಯದಲ್ಲಿ ಸಂದೇಹವೇ ಇಲ್ಲ. ಎಲ್ಲರೊಂದಿಗೂ ಬೆರೆಯುವ ನಾಗರಾಜ್ ಅವರ ಸ್ವಭಾವವೇ ಅವರನ್ನು ಗೆಲುವಿನ ದಡ ಸೇರಿಸಲಿದೆ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.
ಬಿಜೆಪಿ ಹಾದಿ ದುರ್ಗಮ: ಈ ಚುನಾವಣೆ ಹಾದಿ ಬಿಜೆಪಿ ಪಾಲಿಗೆ ದುರ್ಗಮವೇ ಆಗಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವುದು ಬಿಜೆಪಿಗೆ ಮೊದಲ ಮೈನಸ್ ಪಾಯಿಂಟ್. ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಇಂದಿಗೂ ಜೀವಂತವಾಗಿದೆ.
ಹೀಗಿರುವಾಗ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತದಾರರು ಮತ ಚಲಾಯಿಸುವುದು ಕಷ್ಟ ಸಾಧ್ಯ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರೆಲ್ಲರೂ ಬಿಜೆಪಿಗೆ ಮತ ಹಾಕುವುದು ಸುಲಭದ ಮಾತಲ್ಲ.
ಈ ಸಂಗತಿ ಬಿಜೆಪಿ ಮುಖಂಡರಿಗೂ ಅರಿವಾದಂತಿದೆ. ಸೋಜಿಗದ ಸಂಗತಿಯೆಂದರೆ ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ನಡೆದಿದ್ದಂತಹ ಪೈಪೋಟಿ ಬಿಜೆಪಿಯಲ್ಲಿ ವಾಸ್ತವವಾಗಿ ಕಂಡು ಬಂದಿರಲಿಲ್ಲ.
ಬಿಜೆಪಿಯಲ್ಲಿ ಟಿಕೆಟ್ ನೀಡುತ್ತೇನೆಂದರೂ ಯಾರೂ ಮುಂದೆ ಬಂದಿರಲಿಲ್ಲ. ಈ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಶಂಕರಪಾಟೀಲ ಮುನೇನಕೊಪ್ಪ ಅವರನ್ನು ಕಣಕ್ಕಿಳಿಸಲು ಪಕ್ಷದ ಮುಖಂಡರು ನಿರ್ಧರಿಸಿದ್ದರು.
ಆದರೆ, ಇದಕ್ಕೆ ಮುನೇನಕೊಪ್ಪ ಸುತಾರಾಂ ಒಪ್ಪಲಿಲ್ಲ. ಆಗ ಆಯ್ಕೆ ಹೊರಳಿದ್ದು ಗದಗನತ್ತ. ಮಾಜಿ ಸಚಿವ ಕಳಕಪ್ಪ ಬಂಡಿಯವರಿಗೆ ಚುನಾವಣೆಗೆ ನಿಲ್ಲುವಂತೆ ಆಹ್ವಾನ ಬಂತು. ಬಂಡಿ ಸಹ ಯಾವುದೇ ಕಾರಣಕ್ಕೂ ಟಿಕೆಟ್ ಬೇಡ ಎಂದು ನಿರಾಕರಿಸಿದರು. ಈ ಮಧ್ಯೆ ಯಾರಿಗೆ ಟಿಕೆಟ್ ನೀಡಬೇಕು? ಯಾರನ್ನು ಆಹ್ವಾನಿಸಿದರೂ ಟಿಕೆಟ್ ಬೇಡವೆನ್ನುತ್ತಿದ್ದಾರಲ್ಲ ಎನ್ನುವ ಚಿಂತೆ ಕಾಡಿತು. ಕೊನೆಗೆ ಕಾಡಿಸಿ ಪೀಡಿಸಿ ಪ್ರದೀಪ್ ಶೆಟ್ಟರ್ ಅವರಿಗೆ ಪಕ್ಷದ ಟಿಕೆಟ್ ನೀಡಲಾಯಿತು. ಪಕ್ಷದಲ್ಲಿಯೇ ಇದು ಹರಕೆಯ ಕುರಿ ಎಂದು ವ್ಯಂಗವಾಡಿದ್ದೂ ಆಯಿತು.
ಯಡಿಯೂರಪ್ಪ ಸೇಡು ತೋರಿಸಿಕೊಳ್ಳುವರೇ?: ಬಿಜೆಪಿ ತೊರೆದು ಕೆಜೆಪಿ ಸೇರಿರುವ ಶಿವರಾಜ ಸಜ್ಜನರ ಸಹ ಅಭ್ಯರ್ಥಿ. ಕಳೆದ ಬಾರಿ ಬಿಜೆಪಿ ಹವಾ ಸಜ್ಜನರ ಅವರನ್ನು ಗೆಲುವಿನ ದಡ ಸೇರಿಸಿತ್ತೇ ವಿನಃ ವೈಯಕ್ತಿಕ ವರ್ಚಸ್ಸಲ್ಲ. ಸ್ಥಳೀಯ ಸಂಸ್ಥೆಯಲ್ಲಿಯೇ ಕೆಜೆಪಿಯ ಚರಿಷ್ಮಾ ಏನೆಂಬುದು ಅರಿವಾಗಿದೆ.
ಹೀಗಾಗಿ ಈ ಚುನಾವಣೆಯಲ್ಲಿಯೂ ಜನ ಅದೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೆಜೆಪಿ ಅಭ್ಯರ್ಥಿ ಒಂದಿಷ್ಟು ಮತ ಸೆಳೆದುಕೊಳ್ಳುತ್ತಾರೆಂದಾದರೆ ಅದು ಬಿಜೆಪಿಯದ್ದೇ. ಜಗದೀಶ್ ಶೆಟ್ಟರ್ ಹಾಗೂ ಬಿ.ಎಸ್. ಯಡಿಯೂರಪ್ಪ ಮಧ್ಯೆ ವೈಮನಸ್ಸು ಇದ್ದೇ ಇದೆ. ಶೆಟ್ಟರ್ ವಿರುದ್ಧ ಸೇಡು ತೀರಿಸಿಕೊಳ್ಳಲೆಂದೇ ಯಡಿಯೂರಪ್ಪನವರು ಶಿವರಾಜ ಸಜ್ಜನ ಅವರನ್ನು ಕಣಕ್ಕಿಳಿಸಿದ್ದಾರೆಂಬ ಸಂಗತಿ ಗುಟ್ಟೇನಲ್ಲ.ಇನ್ನು ಜೆಡಿಎಸ್ ಚುನಾವಣೆ ಬೇಡವೆಂದು ತಟಸ್ಥವಾಗಿದೆ.
ಒಂದು ವೇಳೆ ಬೆಂಬಲ ವ್ಯಕ್ತ ಪಡಿಸುವುದು ಬಂದರೆ ಜೆಡಿಎಸ್ ತನ್ನ ಒಲವು ಕಾಂಗ್ರೆಸ್ನತ್ತವೇ ತೋರಲಿದೆ. ಇಲ್ಲಿಯೂ ಬಿಜೆಪಿಗೆ ಬಲವಾದ ಏಟು ಬೀಳಲಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಅನಾಯಾಸವಾಗಿ ಗೆಲುವಿನ ದಡ ಸೇರುತ್ತಾರೆನ್ನುತ್ತವೆ ವಿಶ್ಲೇಷಣೆಗಳು.
ಪ್ರದೀಪಗೆ ಮಾಜಿ ಸಿಎಂ ತಮ್ಮ ಅನ್ನುವ ಅರ್ಹತೆ...!
ಇದೀಗ ಪಕ್ಷದ ಮುಖಂಡರ ಒತ್ತಾಸೆ ಮೇರೆಗೆ ಪ್ರದೀಪ್ ಶೆಟ್ಟರ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಆದರೆ, ಚುನಾವಣೆಗೆ ಅಭ್ಯರ್ಥಿ ಎಂದುಕೊಳ್ಳುವ ಯಾವುದೇ ವಿಶೇಷ ಅರ್ಹತೆ ಪ್ರದೀಪ್ ಹೊಂದಿಲ್ಲ. ಮಾಜಿ ಸಿಎಂ ಶೆಟ್ಟರ್ ಅವರ ಸಹೋದರ ಎನ್ನುವ ಚರಿಷ್ಮಾ ಮಾತ್ರ ಹೊಂದಿದ್ದಾರೆಂಬುದು ಅಸಲಿ ಸಂಗತಿ. ಪಕ್ಷ ಸಂಘಟನೆ, ಪ್ರಮುಖ ಹುದ್ದೆಯಂತ ಯಾವುದೇ ಜವಾಬ್ದಾರಿಯನ್ನು ಇವರು ಈವರೆಗೆ ನಿಭಾಯಿಸಿಲ್ಲ. ಪಕ್ಷದ ಕಾರ್ಯಕರ್ತರೊಂದಿಗಿನ ಸಂಬಂಧವೂ ಅಷ್ಟಕಷ್ಟೇ. ಅವರಿಗೆ ಪಕ್ಷದಲ್ಲಿ ಒಂದಿಷ್ಟು ಸ್ಥಾನಮಾನ ಸಿಕ್ಕಿದ್ದೇ ಆದರೆ ಅದು ಜಗದೀಶ ಶೆಟ್ಟರ್ ಅವರ ಕೃಪೆಯಿಂದ. ಪ್ರದೀಪ ವ್ಯಕ್ತಿಗತವಾಗಿಯೂ ನಾಲ್ಕಾರು ಗೆಳೆಯರನ್ನು ಬಿಟ್ಟರೆ ಮತ್ಯಾರೊಂದಿಗೂ ಬೆರೆತವರಲ್ಲ. ಈ ಕಾರಣದಿಂದಲೇ ಪಕ್ಷದಲ್ಲಿಯೂ ಪ್ರದೀಪ್ ಎಂದರೆ ಬೇಸರ. ಹೀಗಿರುವ ಪ್ರದೀಪ್ಗೆ ಟಿಕೆಟ್ ಸಿಕ್ಕಿದೆಯಾದರೂ ಗೆಲುವು ಸಿಗದು ಎಂದು ಪಕ್ಷದವರೇ ಆಡಿಕೊಳ್ಳುತ್ತಿದ್ದಾರೆ.
ಬಿಜೆಪಿ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆ
ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಅವರನ್ನು ಗೆಲ್ಲಿಸುವುದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಶೆಟ್ಟರ್ಗೆ ಪ್ರತಿಷ್ಠೆ ಪ್ರಶ್ನೆಯಾಗಿದೆ. ಒಂದೆಡೆ ಇದು ರಾಜ್ಯಾಧ್ಯಕ್ಷ ಜೋಶಿಯವರ ತವರು ಜಿಲ್ಲೆಯ ಚುನಾವಣೆಯಾಗಿದ್ದರೆ, ಮತ್ತೊಂದೆಡೆ ಜಗದೀಶ ಶೆಟ್ಟರ್ಗೆ ಸಹೋದರರನ್ನು ಗೆಲ್ಲಿಸಬೇಕಿದೆ. ಪ್ರದೀಪ್ ಶೆಟ್ಟರ್ ಅವರನ್ನು ಗೆಲ್ಲಿಸಿಕೊಂಡು ಬರಲಾಗದಿದ್ದರೆ ರಾಜ್ಯಾದ್ಯಂತ ಇದು ಬಹು ಚರ್ಚಿತ ವಿಷಯವಾಗಲಿದೆ. ಹೀಗಾಗಿ ಶತಾಯಗತಾಯ ಪ್ರದೀಪ್ ಶೆಟ್ಟರ್ ಅವರನ್ನು ಗೆಲ್ಲಿಸಿಕೊಂಡು ಇವರಿಬ್ಬರು ಪ್ರಯತ್ನಿಸಲಿದ್ದಾರೆಯಾದರೂ ಗೆಲುವಿನ ನಿರೀಕ್ಷೆ ಅಷ್ಟು ಸರಳವಾಗಿಲ್ಲ.
ಧಾರವಾಡ ವಿಧಾನ ಪರಿಷತ್ ತ್ರಿಕೋನ ಸ್ಪರ್ಧೆ
ಧಾರವಾಡ: ವಿಧಾನ ಪರಿಷತ್ತಿಗೆ ಧಾರವಾಡ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ಆ. 22ರಂದು ನಡೆಯಲಿರುವ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸೋಮವಾರ ಮುಗಿದಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ನಿರೀಕ್ಷೆಯಂತೆ ಕಾಂಗ್ರೆಸ್ನಿಂದ ನಾಗರಾಜ ಛಬ್ಬಿ, ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಹಾಗೂ ಕೆಜೆಪಿಯಿಂದ ಶಿವರಾಜ ಸಜ್ಜನ ನಾಮಪತ್ರ ಸಲ್ಲಿಸಿದರು. ಹಾನಗಲ್ ತಾಲೂಕಿನ ಬಿಂಗಾಪುರ ಗ್ರಾಮದ ಬಸವರಾಜ ಹಾದಿ ಎಂಬುವರು ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ಆದರೆ, ಈ ಚುನಾವಣೆಯಿಂದ ಜೆಡಿಎಸ್ ಮಾತ್ರ ಹಿಂದೆ ಸರಿದಿದೆ. ಒಟ್ಟು 4 ಜನ ಏಳು ನಾಮಪತ್ರ ಸಲ್ಲಿಸಿದ್ದಾರೆ.