ಇಲ್ಲಿ ರೋಗಿ ಸಂಬಂಧಿಕರು ಊಟ ಮಾಡುವಂತಿಲ್ಲ!
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 6
ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಾಗುವ ರೋಗಿಗಳ ಸಂಬಂಧಿಕರು ಆ. 15ರಿಂದ ಆಸ್ಪತ್ರೆಯಲ್ಲಿ ಊಟ ಮಾಡುವಂತಿಲ್ಲ.
ಧಾರವಾಡ ಜಿಲ್ಲಾ ಉಸ್ತುವಾರಿ, ವಾರ್ತಾ ಮತ್ತು ಮೂಲ ಸೌಕರ್ಯ ಇಲಾಖೆ ಸಚಿವ ಸಂತೋಷ ಲಾಡ್ ಮಂಗಳವಾರ ನಗರದ ಕಿಮ್ಸ್ ಹಿರಿಯ ವೈದ್ಯಾಧಿಕಾರಿಗಳಿಗೆ ಈ ಸೂಚನೆ ನೀಡಿದರು.
ರೋಗಿಗಳಿಗೆ ಆಸ್ಪತ್ರೆಯಲ್ಲಿಯೇ ಊಟ ನೀಡುತ್ತಾರೆ. ರೋಗಿಗಳ ಸಂಬಂಧಿಕರು ಗುಂಪು ಗುಂಪಾಗಿ ಊಟ ತೆಗೆದುಕೊಂಡು ಆಸ್ಪತ್ರೆಯಲ್ಲಿ ಊಟ ಮಾಡುವುದರಿಂದ ಸ್ವಚ್ಛತೆ ಉಳಿಯುವುದಿಲ್ಲ. ರೋಗಿಗಳ ಸಂಬಂಧಿಕರಿಗೆ ಊಟ ಮಾಡುವುದಕ್ಕಾಗಿ ಕಿಮ್ಸ್ ಆವರಣದಲ್ಲಿ ಪ್ರತ್ಯೇಕ ಕಟ್ಟಡ ನಿರ್ಮಿಸಲಾಗುವುದು. ಅಲ್ಲಿವರೆಗೆ ಆಸ್ಪತ್ರೆಯ ಆವರಣದಲ್ಲಿರುವ ಹುಲ್ಲುಹಾಸಿನ ಮೇಲೆ ಊಟ ಮಾಡುವಂತೆ ಸಚಿವರು ತಿಳಿಸಿದರು.
ಇದೇ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಸಂತೋಷ ಲಾಡ್, ಕಿಮ್ಸ್‌ನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದರು.
ರು. 5 ಲಕ್ಷ ವೆಚ್ಚದಲ್ಲಿ ವಾರ್ಡ್ ನಂ. 205ನ್ನು ನವೀಕರಿಸಲಾಗಿದೆ. ಇಡಿ ವಾರ್ಡ್‌ಗೆ ಬಣ್ಣ ಬಳಿಯಲಾಗಿದ್ದು, 28 ಮಲ್ಟಿಸ್ಪೆಷಲ್ ಕಾಟ್ ಹಾಗೂ ಗುಣಮಟ್ಟದ 28 ಗಾದಿಗಳನ್ನು ವಾರ್ಡ್‌ಗೆ ಒದಗಿಸಲಾಗಿದೆ. ರೋಗಿಗಳಿಗೆ ತೊಂದರೆಯಾಗದಂತೆ ಹಂತ ಹಂತವಾಗಿ ಎಲ್ಲ ವಾರ್ಡ್‌ಗಳಿಗೂ ಈ ಸೌಲಭ್ಯ ಒದಗಿಸಲಾಗುವುದು. 20 ವರ್ಷಗಳಿಂದ ವಾರ್ಡ್‌ಗಳಲ್ಲಿ ಯಾವುದೇ ಸೌಲಭ್ಯ ಒದಗಿಸಿರಲಿಲ್ಲ. ಇದೀಗ ಎಲ್ಲೆಡೆ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ ಎಂದರು.
ವೈದ್ಯರು ತಮ್ಮ ಕರ್ತವ್ಯದ ಪೂರ್ಣ ಸಮಯವನ್ನು ಕಿಮ್ಸ್‌ನಲ್ಲಿಯೇ ಕಳೆಯುವುದಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಸಚಿವರು ಶೀಘ್ರದಲ್ಲಿ ಕಿಮ್ಸ್‌ಗೆ ಭೇಟಿ ನೀಡಿ, ಇಲ್ಲಿನ ಲೋಪದೋಷ ಸರಿಪಡಿಸುವರು ಎಂದು ಹೇಳಿದರು.
ಇದಕ್ಕೂ ಮೊದಲು ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿದ ಸಚಿವ ಲಾಡ್, ರೋಗಿಗಳೊಂದಿಗೆ ಮಾತುಕತೆ ನಡೆಸಿದರು. ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯ, ತೊಂದರೆಗಳ ಕುರಿತು ಮಾಹಿತಿ ಪಡೆದರು. ಸಮೀಪದ ಛಬ್ಬಿ ಕ್ರಾಸ್ ಬಳಿ ಅಪಘಾತಕ್ಕೊಳಗಾದ ಸೋಲಾರಕೊಪ್ಪದ ರೇಣುಕಾ ಬಳಿಗೇರ ಅವರ ಪತಿ ಸಂಗಪ್ಪ ಎಂಬುವವರಿಗೆ ವಾರ್ಡ್‌ನಲ್ಲಿ ರು. 5 ಸಾವಿರ ನೀಡಿದ ಸಚಿವ ಲಾಡ್, ಚಿಕಿತ್ಸೆಗೆ ಬೇಕಾದ ವೆಚ್ಚಕ್ಕಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಅನಂತರ ಮಕ್ಕಳ ವಾರ್ಡ್‌ಗೆ ಭೇಟಿ ನೀಡಿದ ಸಚಿವ ಲಾಡ್, ವಾರ್ಡ್‌ನಲ್ಲಿ ಚಪ್ಪಲಿ ಧರಿಸಿಕೊಂಡಿದ್ದ ಕಿರಿಯ ವೈದ್ಯರು ಹಾಗೂ ನರ್ಸ್‌ಗಳನ್ನು ತರಾಟೆಗೆ ತೆಗೆದುಕೊಂಡರು.
ರೋಗದಿಂದ ಬಳಲುತ್ತಿದ್ದ 11 ವರ್ಷದ ಸನ್ನಿ ಗೋಪಾಲಿ ಎಂಬ ಬಾಲಕನಿಗೆ ಹೆಚ್ಚಿನ ಚಿಕಿತ್ಸೆ ನೀಡುವುದಕ್ಕಾಗಿ ರು. 50 ಸಾವಿರಗಳ ಧನಸಹಾಯ ನೀಡುವುದಾಗಿ ಬಾಲಕನ ತಂದೆ ರಾಬರ್ಟ್‌ಗೆ ಭರವಸೆ ನೀಡಿದ ಸಚಿವ ಸಂತೋಷ ಲಾಡ್, ಆತನ ಬ್ಯಾಂಕ್ ಖಾತೆ ವಿವರ ಪಡೆದರು.
ಇದೇ ಸಂದರ್ಭದಲ್ಲಿ ಕಿಮ್ಸ್ ಪ್ರಾಚಾರ್ಯ ಡಾ. ಬಿ.ಎಸ್. ಹಂಗರಗಾ, ಹಿರಿಯ ವೈದ್ಯರೊಂದಿಗೆ ಸಭೆ ನಡೆಸಿದರು.
ರೋಗಿಗಳಿಗೆ ಆಸ್ಪತ್ರೆಯಲ್ಲಿ ಊಟ ನೀಡುತ್ತಾರೆ. ರೋಗಿಗಳ ಸಂಬಂಧಿಕರು ಗುಂಪಾಗಿ ಊಟ ತೆಗೆದುಕೊಂಡು ಆಸ್ಪತ್ರೆಯಲ್ಲಿ ಊಟ ಮಾಡುವುದರಿಂದ ಸ್ವಚ್ಛತೆ ಉಳಿಯಲ್ಲ. ರೋಗಿಗಳ ಸಂಬಂಧಿಕರು ಊಟ ಮಾಡುವುದಕ್ಕೆ ಕಿಮ್ಸ್ ಆವರಣದಲ್ಲಿ ಪ್ರತ್ಯೇಕ ಕಟ್ಟಡ ನಿರ್ಮಿಸಲಾಗುವುದು. ಅದುವರೆಗೆ ಆಸ್ಪತ್ರೆ ಆವರಣದ ಹುಲ್ಲುಹಾಸಿಗೆ ಮೇಲೆ ಊಟ ಮಾಡಬೇಕು.
- ಸಂತೋಷ ಲಾಡ್, ಸಚಿವ