ಗ್ರಾಮೀಣಾಭಿವೃದ್ಧಿಯಲ್ಲಿ ಅರಕೇರಿ ಸೇವೆ ಅಪಾರ
ಕನ್ನಡಪ್ರಭ ವಾರ್ತೆ, ಧಾರವಾಡ, ಆ. 6
ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಸೇರಿದಂತೆ ನಾಡು ಕಟ್ಟುವಲ್ಲಿ ಕುಗ್ರಾಮಗಳ ಅನೇಕ ದಿವ್ಯಚೇತನಗಳು ಶ್ರಮಿಸಿವೆ. ಅವರ ಸಾಲಿನಲ್ಲಿ ಪ್ರಮುಖವಾಗಿ ನಿಲ್ಲುವವರು ಡಾ. ಎಚ್.ಆರ್. ಅರಕೇರಿ ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀನಿವಾಸ ವಾಡಪ್ಪಿ ಹೇಳಿದರು.
ಡಾ. ಎಚ್.ಆರ್. ಅರಕೇರಿ ಸ್ಮಾರಕ ಪ್ರತಿಷ್ಠಾನ ಸಮಿತಿ, ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಅಧ್ಯಯನ ಸಂಸ್ಥೆ ಏರ್ಪಡಿಸಿದ್ದ ಅರಕೇರಿ 9ನೇ ಸ್ಮರಣ ಭಾಷಣ ಮಾಲಿಕೆಯಲ್ಲಿ ಅವರು ಮಾತನಾಡಿದರು.
ನಮ್ಮಲ್ಲಿ ಇತಿಹಾಸ ಪ್ರಜ್ಞೆಯ ಕೊರತೆಯಿದ್ದು, ಹಿಂದೆ ನಡೆದ ಘಟನಾವಳಿಗಳನ್ನು ಕರಾರುವಕ್ಕಾಗಿ ಶೋಧಿಸುವ ಹಾಗೂ ದಾಖಲಿಸುವ ಪರಿಪಾಠ ಭಾರತೀಯ ಪರಂಪರೆಯಲ್ಲಿ ಅಷ್ಟಾಗಿ ಕಂಡು ಬರುವುದಿಲ್ಲ. ಹವಾಮಾನ ಬದಲಾವಣೆ ಅರ್ವಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಅಂಥ ಸವಾಲನ್ನು ಎದುರಿಸಲು ನಾವು ಸನ್ನದ್ಧರಾಗಿರಬೇಕು. ಇದರಲ್ಲಿ ಮುಖ್ಯವಾಗಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ 3-4 ದಶಕಗಳ ಸೇವೆ ಸಲ್ಲಿಸಿ ನಿವೃತ್ತಿಯಾದ ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನಿಗಳಾಗಿ, ತಜ್ಞರಾಗಿ ಅಪಾರ ಅನುಭವ ಪಡೆದ ಪ್ರತಿಭೆಗಳ ಪಾತ್ರ ಬಹಳ ಮುಖ್ಯ ಎಂದರು.
ಸಮಾಜದಲ್ಲಿರುವ ವಿವಿಧ ಕ್ಷೇತ್ರಗಳ ತಜ್ಞರ ನಡುವೆ ಸರಿಯಾದ ಸಂವಹನ ಇಲ್ಲ. ಅನೇಕ ಸಂಘ ಸಂಸ್ಥೆಗಳು ನಾಡಿನ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದರೂ ವಿಭಿನ್ನ ನೆಲೆಗಳಲ್ಲಿ ನಡೆಯುತ್ತಿರುವ ಪ್ರಯತ್ನಗಳ ನಡುವೆ ಸಂಯೋಜನೆ ಇಲ್ಲದ್ದರಿಂದ ಯಾವ ಮಟ್ಟದ ಪ್ರತಿಫಲ ನಮಗೆ ದೊರೆಯಬೇಕಾಗಿತ್ತೋ ಆ ಪ್ರಮಾಣದಲ್ಲಿ ಸಿಗುತ್ತಿಲ್ಲ. ಆದ್ದರಿಂದ ಅಭಿವೃದ್ಧಿಯ ಇತಿಹಾಸದ ಅರಿವನ್ನು ಇಂದಿನ ಪೀಳಿಗೆಯವರಲ್ಲಿ ಹುಟ್ಟು ಹಾಕಬೇಕಾದ್ದು ಹಿರಿಯರ ಕರ್ತವ್ಯ. ಜ್ಞಾನದ ಪರಂಪರೆಯಲ್ಲಿ ನಿರಂತರ ಇರಬೇಕು. ತಲೆಮಾರುಗಳ ನಡುವೆ ಸಂಪರ್ಕ ಇರಬೇಕು. ವಿಜ್ಞಾನಿಗಳು, ತಜ್ಞರು, ಅಧಿಕಾರಿಗಳು ಸಾಮಾನ್ಯ ಕಾರ್ಯಕರ್ತರಂತೆ, ಸ್ವಯಂ ಸೇವಕರಂತೆ ದುಡಿಯಬೇಕು ಮತ್ತು ಸಂಘಟಿತ ಪ್ರಯತ್ನದಿಂದ ಇರಬೇಕು ಎಂದು ಶ್ರೀನಿವಾಸ ವಾಡಪ್ಪಿ ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಸ್.ಎಂ. ಗಡಾದ ಮಾತನಾಡಿದರು. ಡಾ. ಯು.ಜಿ. ನಲವಡಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಅಧಿಕಾರಿ ಚನ್ನಪ್ಪ ಅಂಗಡಿ ಸ್ವಾಗತಿಸಿದರು. ಮಲ್ಲಮ್ಮ ಹುಬ್ಬಳ್ಳಿ ನಿರೂಪಿಸಿದರು. ಡಾ. ಪಿ.ಸಿ. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು.
ಡಾ. ವಿ.ಎಸ್. ದೊಡ್ಡಮನಿ ವಂದಿಸಿದರು. ನಿವೃತ್ತ ಐಪಿಎಸ್ ಅಧಿಕಾರಿ ವಿ.ಬಿ. ನಾಗನೂರ, ಎಸ್.ವಿ. ಹೂಲಿ, ಡಾ. ಎಂ.ಬಿ. ತಿಪ್ಪಣ್ಣವರ, ಡಾ. ಸಿ.ಬಿ. ಪುರಾಣಿಕ, ವಿ.ಎಸ್. ದಾಸರಡ್ಡಿ ಇದ್ದರು.