ವಸತಿ ಸ್ಕೀಂ ಅನುದಾನ ಬಿಡುಗಡೆಗೆಒತ್ತಾಯ
ಕುಂದಗೋಳ: ತಾಲೂಕಿನಲ್ಲಿ ಆಶ್ರಯ, ಇಂದಿರಾ ಆವಾಸ, ಬಸವ ವಸತಿ ಯೋಜನೆಗಳ ಅನುದಾನ ಬಿಡುಗಡೆ ವಿಳಂಬವಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಎನ್‌ಆರ್‌ಇಜಿ ಕಾಮಗಾರಿ ಆರಂಭಿಸಬೇಕೆಂದು ತಾಲೂಕು ರಕ್ಷಣಾ ವೇದಿಕೆ ಮುಖಂಡರು ತಾಪಂ ಅಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ತಾಲೂಕಿನ 22 ಗ್ರಾಪಂಗಳಲ್ಲಿ ವಸತಿ ಯೋಜನೆಯ ಹಣ ಬಿಡುಗಡೆ ವಿಳಂಬವಾಗುತ್ತಿದ್ದು, ಕೆಲ ಫಲಾನುಭವಿಗಳು ಸಾಲ ಸೋಲ ಮಾಡಿ ಮನೆ ನಿರ್ಮಿಸಿಕೊಂಡಿದ್ದು, ಆದರೂ ಹಣ ಬಿಡುಗಡೆ ಮಾಡುತ್ತಿಲ್ಲ. ಅಲ್ಲದೆ ಕೆಲವರು ಮನೆ ನಿರ್ಮಿಸಿಕೊಳ್ಳದಿದ್ದರೂ ಅವರಿಗೆ ವಸತಿ ಯೋಜನೆಯಡಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಯಾವುದೆ ಹೊಸ ಕಾಮಗಾರಿಗಳನ್ನು ಆರಂಭಿಸಿಲ್ಲ. ಇವೆಲ್ಲ ಕಾಮಗಾರಿಗಳನ್ನು ಕೂಡಲೇ ಆರಂಭಿಸಬೇಕು ಹಾಗೂ ವಸತಿ ಯೋಜನಾ ಹಣವನ್ನು ತಕ್ಷಣ ಬಿಡುಗಡೆಗೊಳಿಸಬೇಕು, ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ.
ತಾಲೂಕು ಕರವೇ ಅಧ್ಯಕ್ಷ ಅಮೃತ ಇಜಾರಿ, ಧಾರವಾಡ ಕರವೇ ಸಂಘಟನಾ ಕಾರ್ಯದರ್ಶಿ ಹನಮಂತಪ್ಪ ಮೇಟಿ, ತಾಲೂಕು ಅಧ್ಯಕ್ಷ ಕಲ್ಲಪ್ಪ ಹರಕುಣಿ, ಅಡಿವೆವ್ವ ಹೆಬಸೂರ, ಪ್ರಭುಗೌಡ ಸಂಕಾಗೌಡಶ್ಯಾನಿ, ಮಂಜುನಾಥ ಹಡಪದ, ಯಲ್ಲವ್ವ ಕಾಲಿ, ಹನುಮಂತಪ್ಪ ದೊಡಮನಿ, ಮಾಲತೇಶ ದೇವನೂರ ಪಾಲ್ಗೊಂಡಿದ್ದರು.