24ಕ್ಕೆ ಧಾರವಾಡ, 31ಕ್ಕೆ ಗುಲ್ಬರ್ಗ ಕಾಯಂ ಪೀಠ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಧಾರವಾಡ, ಆ. 9
ಹಲವು ದಶಕಗಳ ಬೇಡಿಕೆಯಂತೆ 2008ರ ಜುಲೈನಲ್ಲಿ ಆರಂಭವಾಗಿದ್ದ ಧಾರವಾಡ ಮತ್ತು ಗುಲ್ಬರ್ಗ ಹೈಕೋರ್ಟ್ ಕಾಯಂ ಪೀಠಗಳ ಉದ್ಘಾಟನೆಗೆ ಮಹೂರ್ತ ನಿಗದಿಯಾಗಿದೆ.
ಗುರುವಾರ ಬೆಂಗಳೂರಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಧಾರವಾಡದಲ್ಲಿ ಆ.24 ಹಾಗೂ ಗುಲ್ಬರ್ಗದಲ್ಲಿ ಆ.31ರಂದು ಪೀಠ ಉದ್ಘಾಟನೆಗೆ ದಿನ ನಿಗದಿಗೊಳಿಸಲಾಗಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ, ಕರ್ನಾಟಕದ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಾಘೇಲಾ, ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಎರಡೂ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸಕಲ ತಯಾರಿ ಮಾಡಿಕೊಳ್ಳಲು ಸಭೆಯಲ್ಲಿ ಪಾಲ್ಗೊಂಡಿದ್ದ ಗುಲ್ಬರ್ಗ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನ ಕುಮಾರ ಹಾಗೂ ಧಾರವಾಡ ಜಿಲ್ಲಾಧಿಕಾರಿ ಸಮೀರ ಶುಕ್ಲಾರಿಗೆ ಸೂಚಿಸಲಾಗಿದೆ.