ಪವಿತ್ರ ರಂಜಾನ್: ಸಾಮೂಹಿಕ ಪ್ರಾರ್ಥನೆ
ಹುಬ್ಬಳ್ಳಿ: ಒಂದು ತಿಂಗಳಿನಿಂದ ರಂಜಾನ್ ನಿಮಿತ್ತ ರೋಜಾ ಆಚರಿಸಿದ ಮುಸ್ಲಿಂರು ಶುಕ್ರವಾರ ನಗರದ ಪ್ರಮುಖ ಮಸೀದಿ, ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನ, ಹಳೇ ಹುಬ್ಬಳ್ಳಿ, ಕಾರವಾರ ರಸ್ತೆ ಮತ್ತು ದೇವಾಂಗ ಪೇಟೆಯ ಮಸೀದಿಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನದ ಸಾಮೂಹಿಕ ಪ್ರಾರ್ಥನೆಗೆ ಬೆಳಗ್ಗೆಯಿಂದ ಕೆಲವರು ತಂಡೋಪ ತಂಡವಾಗಿ ಆಗಮಿಸಿದರೆ ಇನ್ನು ಕೆಲವರು ತಮ್ಮ ಕುಟುಂಬದೊಂದಿಗೆ ತಮ್ಮ ಹತ್ತಿರದ ಮಸೀದಿಗಳಿಗೆ ತೆರಳಿದರು. ಈ ಬಾರಿಯ ರಂಜಾನ್ ಹಬ್ಬದ ಪ್ರಾರ್ಥನೆ ಮುಸ್ಲಿಮರು ಶುಭ ಎಂದು ಭಾವಿಸುವ ಶುಕ್ರವಾರವೇ ಆಗಮಿಸಿದ್ದು ವಿಶೇಷವಾಗಿತ್ತು. ಶುಕ್ರವಾರದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಸೇರಿದ್ದರು. ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆ ನಿಮಿತ್ತ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್, ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಿತ್ತು. ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ಇರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದಕ್ಕೆ ದೇಸಾಯಿ ಸರ್ಕಲ್, ಅಂಬೇಡ್ಕರ್ ಸರ್ಕಲ್, ಕೊಪ್ಪಿಕರ್ ರಸ್ತೆ, ಕೊಯಿನ್ ರೋಡ್, ಜನತಾ ಬಜಾರ್, ಬೃಂದಾವನ ಸರ್ಕಲ್ವರೆಗೆ ಮುಸ್ಲಿಮರು ಸೇರಿದ್ದರು. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎ.ಎಂ. ಹಿಂಡಸಗೇರಿ, ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಸೇರಿದಂತೆ ಪ್ರಮುಖರು ಈದ್ಗಾ ಮೈದಾನಕ್ಕೆ ಆಗಮಿಸಿ ಮುಸ್ಲಿಮರಿಗೆ ರಂಜಾನ್ ಹಬ್ಬದ ಶುಭಾಶಯ ಹೇಳಿದರು. ಸಾಮೂಹಿಕ ಪ್ರಾರ್ಥನೆ ನಿಮಿತ್ತ ಕಿತ್ತೂರು ಚೆನ್ನಮ್ಮ ವೃತ್ತಕ್ಕೆ ಸೇರುವ ಕೋರ್ಟ್ ಸರ್ಕಲ್, ದೇಸಾಯಿ ಸರ್ಕಲ್, ಲ್ಯಾಮಿಂಗ್ಟನ್ ರಸ್ತೆ, ಜನತಾ ಬಜಾರ್ ರಸ್ತೆ ಮತ್ತು ಹಳೇ ಪಿ.ಬಿ. ರಸ್ತೆಯಲ್ಲಿ ವಾಹನ ಸಂಚಾರವನ್ನು ಬೆಳಗ್ಗೆ 9ರಿಂದ ಸಾಮೂಹಿಕ ಪ್ರಾರ್ಥನೆ ಮುಗಿಯುವವರೆಗೆ ನಿರ್ಬಂಧಿಸಲಾಗಿತ್ತು.