ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಭಾಷಾವಾರು ಪ್ರಾಂತ ಒಡೆಯುವುದು ಅಪಾಯಕಾರಿ

Vishwanath S
Updated On : 10 Aug 2013, 11:48 am

ಕನ್ನಡಪ್ರಭ ವಾರ್ತೆ, ಧಾರವಾಡ, ಆ. 9
ಕೇಂದ್ರ ಸರ್ಕಾರ ಆಂಧ್ರಪ್ರದೇಶವನ್ನು ಒಡೆದು ತೆಲಂಗಾಣ ರಾಜ್ಯ ನಿರ್ಮಿಸಿದೆ. ಅದರ ಬೆನ್ನಲ್ಲೆ ಉತ್ತರ ಹಾಗೂ ದಕ್ಷಿಣ ಭಾರತದಲ್ಲೂ ಹೊಸ ರಾಜ್ಯಗಳಿಗೆ ಬೇಡಿಕೆ, ಒತ್ತಡ ಹೆಚ್ಚಿದೆ ಎಂದು ಅಖಿಲ ಕರ್ನಾಟಕ ಕೇಂದ್ರ ಕ್ರಿಯಾಸಮಿತಿ ಅಭಿಪ್ರಾಯಿಸಿದೆ.
ವಿಶಾಲ ದೃಷ್ಟಿಯಿಂದ ಭಾಷಾವಾರು ಪ್ರಾಂತಗಳ ರಚನೆಗೆ ಸಮಯದ ಅಗತ್ಯವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಭಾಷಾವಾರು ಪ್ರಾಂತಗಳ ಗರ್ಭ ಸೀಳಿ ಹೊಸ ರಾಜ್ಯಗಳ ನಿರ್ಮಾಣಕ್ಕೆ ಚಳವಳಿಗಳು ಧುತ್ತೆಂದು ಎದ್ದಿವೆ. ಅವಕ್ಕೆ ಯಾವುದೇ ತಾತ್ವಿಕ ಸಮರ್ಥನೆ ಇಲ್ಲ.
ಈ ಬೇಡಿಕೆಗಳು ಸ್ವಾರ್ಥ ಪ್ರೇರಿತ. ಯಾವ ಯಾವುದೋ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದು, ತಾವು ಮಂತ್ರಿಗಳು ಅಥವಾ ಮುಖ್ಯಮಂತ್ರಿಯಾಗುವ ದುರಾಸೆ ಇಂತಹ ಬೇಡಿಕೆ, ಚಳವಳಿಗಳಿಗೆ ಮೂಲ. ಹೆಚ್ಚಾಗಿ ಕೇಳಿಬರುವ ಕೂಗೆಂದರೆ ಆರ್ಥಿಕ ಅಸಮತೋಲನ, ಅದನ್ನು ಸರಿಪಡಿಸಲು ಹಲವಾರು ಹಾದಿಗಳಿವೆ ಎಂದು ಸಮಿತಿಯ ಅಧ್ಯಕ್ಷ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಉಪಾಧ್ಯಕ್ಷರಾದ ಸಾಹಿತಿಗಳಾದ ಡಾ. ಗಿರಡ್ಡಿ ಗೋವಿಂದರಾಜ, ಡಾ. ಗುರುಲಿಂಗ ಕಾಪಸೆ, ಮೋಹನ ನಾಗಮ್ಮನವರ, ಸದಾನಂದ ಕನವಳ್ಳಿ, ಪ್ರೊ. ಸುಕನ್ಯಾ ಮಾರುತಿ ಮತ್ತಿತರರು ಪತ್ರಿಕಾ ಪ್ರಕಟಣೆ ಮೂಲಕ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.
ಚುನಾವಣೆ ಉದ್ದೇಶ: ಇಷ್ಟು ವರ್ಷ ತೆಲಂಗಾಣ ರಾಜ್ಯ ನಿರ್ಮಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದ ಕೇಂದ್ರ ಸರ್ಕಾರ ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ದಿಢೀರ್ ನಿರ್ಣಯ ತೆಗೆದುಕೊಂಡಿರುವ ಉದ್ದೇಶ ಸ್ಪಷ್ಟವಿದೆ.
ಆಂಧ್ರಪ್ರದೇಶದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ಇಂಥದೊಂದು ಅಸಮರ್ಥನೀಯ ನಿರ್ಣಯ ತೆಗೆದುಕೊಂಡಿದೆ. ರಾಷ್ಟ್ರಹಿತ ಕಡೆಗಣಿಸಿ ಕೇವಲ ಚುನಾವಣೆ ಮೇಲೆ ಮಾತ್ರ ಕಣ್ಣಿಟ್ಟು ಇಂತಹ ನಿರ್ಣಯ ಕೈಗೊಳ್ಳುವುದು ರಾಷ್ಟ್ರಕ್ಕೆ ಗಂಡಾಂತರಕಾರಿ. ದೇಶಹಿತ ಕಾಪಾಡುವ ಮುತ್ಸದ್ದಿಗಳೇ ಇಲ್ಲದಿರುವ ಕಾಲವಿದು. ಎಲ್ಲೆಲ್ಲೂ ಚುನಾವಣೆ ಕೇಂದ್ರಿತ ಪುಡಿ ರಾಜಕಾರಣಿಗಳದೆ ತಾಂಡವ. ಇಂತಹ ಅನರ್ಥಕಾರಿ ಪ್ರವೃತ್ತಿಗಳ ವಿರುದ್ಧ ಸಾರ್ವಜನಿಕರು ಧ್ವನಿಯೆತ್ತಬೇಕಾದ ತುರ್ತು ಈಗಿದೆ. ಈ ವಿಚ್ಛಿದ್ರಕಾರಿ ಪ್ರವೃತ್ತಿಗಳಿಗೆ ತಡೆಯೊಡ್ಡಬೇಕಾಗಿದೆ. ಇಲ್ಲದೆ ಹೋದರೆ ರಾಷ್ಟ್ರಹಿತ ಕಡೆಗಣಿಸಿ ನಾವು ನಮ್ಮ ನಮ್ಮಲ್ಲೆ ಕಚ್ಚಾಡುತ್ತ ಕುಳಿತುಕೊಳ್ಳುವ ಅಪಾಯವಿದೆ.
ತೆಲಂಗಾಣ ರಾಜ್ಯ ನಿರ್ಮಾಣವಾಗುವುದೇ ಇಲ್ಲವೆಂದು ಸುಮ್ಮನಿದ್ದ ಸೀಮಾಂಧ್ರದ ಜನ ಈಗ ಅಖಂಡತೆಗಾಗಿ ಹೋರಾಡುತ್ತಿರುವರು.
ಒಂದು ಭಾಷೆ, ಸಂಸ್ಕೃತಿಯ ಸಮುದಾಯ ಒಂದು ರಾಜ್ಯವಾಗಿ ಒಂದಾಗುವುದು ರಾಜಕೀಯ ಆಡಳಿತಾತ್ಮಕ ಅಗತ್ಯವಾಗಿರುವಂತೆಯೇ ಭಾವನಾತ್ಮಕ ಅಗತ್ಯವೂ ಹೌದು. ಆದರೆ, ಈಗಿರುವ ಭಾಷಾವಾರು ಪ್ರಾಂತಗಳನ್ನು ಪುನಃ ಪುನಃ ಒಡೆಯುತ್ತ ಹೋಗುವುದು ರಾಷ್ಟ್ರವನ್ನು ಛಿದ್ರಗೊಳಿಸುವ ಯತ್ನವಲ್ಲದೆ ಬೇರೇನೂ ಅಲ್ಲ ಎಂದು ಸಮಿತಿ ಪ್ರತಿಪಾದಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement