ಸರಗಳ್ಳರ ಬಂಧನ: ರು. 8.5 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಹುಬ್ಬಳ್ಳಿ: ಕಳೆದ ಒಂದು ವರ್ಷದಿಂದ ಗೋಕುಲ್ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿದ್ದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಗೋಕುಲ ರಸ್ತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹು-ಧಾ ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್ ಎಂದು ಕೆಲಸ ಮಾಡುತ್ತಿದ್ದ ಕೃಷ್ಣ ಯಮನಪ್ಪ ಬೀಳಗಿ (26), ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತೊಂಬಿಟ್ಟು ಗ್ರಾಮದ ಮಹೇಶ ಭಾಸ್ಕರ್ ಹೆಗಡೆ ಮತ್ತು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಅಖಿಲೇಶ ಮಹೇಶಕುಮಾರ್ ಪಾರೀಖ್ ಇವರನ್ನು ಕಳ್ಳರು ಎಂದು ಗುರುತಿಸಲಾಗಿದ್ದು, ಕಳ್ಳತನದ ಚಿನ್ನಾಭರಣಗಳನ್ನು ಖರೀದಿಸುತ್ತಿದ್ದ ಯಲ್ಲಾಪುರ ಓಣಿಯ ದೇಶಬಂಧು ಅಲಿಯಾಸ್ ದೇಶಮುಖ್ ಸನಾತನ ಹೈತ್ (27) ಚಿನ್ನದ ವ್ಯಾಪಾರಿಯನ್ನು ಬಂಧಿಸಲಾಗಿದೆ.
ಬಂಧಿತರಿಂದ ಒಟ್ಟು ಹತ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ರು. 8.5 ಲಕ್ಷ ಮೌಲ್ಯದ 300 ಗ್ರಾಂ ತೂಕದ ಒಟ್ಟು 10 ಚಿನ್ನದ ಮಂಗಳಸೂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಗೋಕುಲ ಪೊಲೀಸ್ ಠಾಣೆಯ 8, ಕೇಶ್ವಾಪುರ ಮತ್ತು ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ತಲಾ ಒಂದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ 10 ಮಂಗಳಸೂತ್ರ ಮತ್ತು ಕಳ್ಳತನಕ್ಕೆ ಬಳಸುತ್ತಿದ್ದ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬೈಕ್ ಬಳಸಿ ಕಳ್ಳತನ: ಗೋಕುಲ ರಸ್ತೆಯ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸರಗಳ್ಳತನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಮಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಗುರುವಾರ ಮಧ್ಯಾಹ್ನ ಆರೋಪಿಗಳ ಪೈಕಿ ಇಬ್ಬರು ಪದೇ ಪದೇ ಈ ರಸ್ತೆಯಲ್ಲಿ ಬೈಕ್‌ನಲ್ಲಿ ಸಂಚರಿಸುವುದನ್ನು ಗಮನಿಸಿದ ಮಫ್ತಿಯಲ್ಲಿದ್ದ ಕೃಷ್ಣಾ ಮೋಟೆಬೆನ್ನೂರ ಎಂಬ ಪೊಲೀಸ್ ಸಿಬ್ಬಂದಿ ತಕ್ಷಣ ಬೈಕ್ ನೋಂದಣಿ ಸಂಖ್ಯೆ ನೋಡಿ ಗೋಕುಲ್ ಪೊಲೀಸ್ ಇನ್‌ಸ್ಪೆಪೆಕ್ಟರ್ ಅಸುಂಡಿ ಅವರಿಗೆ ಮಾಹಿತಿ ರವಾನಿಸಿದ್ದಾರೆ.
ಮಾಹಿತಿಯನ್ನಾಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಹೀರೊ ಹೋಂಡಾ ಸಿಬಿಝೆಡ್ ಎಕ್ಸ್‌ಟ್ರಿಂ ಬೈಕ್ ಹಿಂಬಾಲಿಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ಸರಗಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದರು.
ಆರೋಪಿಗಳ ಪೈಕಿ ಕೃಷ್ಣ ಮತ್ತು ಅಖಿಲೇಶ ಸ್ನೇಹಿತರು. ಇವರೊಂದಿಗೆ ನಿಪ್ಪಾಣಿಯ ಮಹೇಶ ಮತ್ತು ಚಿನ್ನದ ವ್ಯಾಪಾರಿ ದೇಶಮುಖ್ ನಂತರ ಸೇರಿಕೊಂಡು ವ್ಯವಸ್ಥಿತವಾಗಿ ಒಂಟಿ ಮಹಿಳೆಯರ ಕೊರಳಲ್ಲಿದ್ದ ಚಿನ್ನದ ಸರ ಮತ್ತು ಮಂಗಳಸೂತ್ರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದರು.
ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೆ ಒಟ್ಟು 31 ಸರಗಳ್ಳತನ ಪ್ರಕರಣಗಳು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಅವುಗಳ ಪೈಕಿ 19 ಪ್ರಕರಣಗಳನ್ನು ಬೇಧಿಸಲಾಗಿದೆ. ಕಳೆದ ವರ್ಷ ಒಟ್ಟು 56 ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 19 ಪ್ರಕರಣಗಳನ್ನು ಬೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಗತಿಯಲ್ಲಿ ಆ್ಯಸಿಡ್ ದಾಳಿ ಪ್ರಕರಣ: ನಗರದಲ್ಲಿ ಸಂಭವಿಸಿದ ನಾಲ್ಕು ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಪ್ರಕರಣ ಬೇಧಿಸಲಾಗಿದೆ. ಇನ್ನುಳಿದ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಸಣ್ಣ ಪ್ರಮಾಣದ ಸುಳಿವು ಸಿಕ್ಕಿದ್ದು, ದೊರೆತಿರುವ ಸುಳಿವುಗಳ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಲಿಂಗರಾಜ ನಗರದಲ್ಲಿ ನಡೆದ ಧಾರವಾಡ ಕೆಸಿಡಿ ಕಾಲೇಜು ಉಪನ್ಯಾಸಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ತೆ ಆಗಿಲ್ಲ ಎಂದು ಹೇಳಿದ ಅವರು, ಪತಿ ಕೊಲೆ ಮಾಡಿರುವುದು ನಿಶ್ಚಿತವಾಗಿದ್ದು, ಕೆಲವು ದಿನಗಳ ಹಿಂದೆ ಆರೋಪಿ ಕೇರಳದಲ್ಲಿ ಎಟಿಎಂನಿಂದ ಹಣ ತೆಗೆದಿರುವ ಮಾಹಿತಿ ಲಭ್ಯವಾಗಿತ್ತು.
ಅದರ ಆಧಾರದ ಮೇಲೆ ತನಿಖೆ ಮುಂದುವರಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆರೋಪಿಯ ಖಾತೆಯಲ್ಲಿ ಹಣ ಇಲ್ಲದ ಕಾರಣ ಎಟಿಎಂನಿಂದ ಹಣ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಆರೋಪಿ ಪತ್ತೆಯಲ್ಲಿ ಹಿನ್ನಡೆಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.