ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹಾವೇರಿ ಮತದಾರರೇ ನಿರ್ಣಾಯಕ

Vishwanath S
Updated On : 10 Aug 2013, 11:59 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 9
ವಿಧಾನ ಪರಿಷತ್ ಉಪಚುನಾವಣೆಯ ನಾಮಪತ್ರ ಸಲ್ಲಿಕೆ, ಹಿಂಪಡೆಯುವ ಪ್ರಕ್ರಿಯೆ ಮುಗಿದಿದೆ. ಇದೀಗ ಮತಬೇಟೆ ಶುರುವಾಗಿದೆ.
ಹೌದು.., ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಯಲ್ಲಿ ಉಪಚುನಾವಣೆಯ ಮೂಲಕ ಮತ್ತೆ ರಾಜಕೀಯ ರಂಗು ನೋಡುವಂತಾಗಿದೆ. ಕೆಜೆಪಿ ಕಣದಿಂದ ಹಿಂದೆ ಸರಿದ ಪರಿಣಾಮ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾ ನೇರ ಹಣಾಹಣಿ ನಡೆಯಲಿದೆ.
ಲೆಕ್ಕಾಚಾರವೂ ಶುರು: ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಅಂತಿಮಗೊಂಡಿರುವ ಪರಿಣಾಮ ಚುನಾವಣಾ ಕಣದ ಸ್ಪಷ್ಟ ಚಿತ್ರಣ ಹೊರಬಿದ್ದಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಮತಗಳಿಕೆಗೆ ಏನೆಲ್ಲ ತಂತ್ರಗಾರಿಕೆ ಮಾಡಬೇಕೆಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಪ್ರಮುಖವಾಗಿ ಗ್ರಾಪಂನಲ್ಲಿ ಯಾರೆಲ್ಲ ಪ್ರಬಲರಾಗಿದ್ದಾರೆ? ಈ ಸದಸ್ಯರು ಯಾವ ಪಕ್ಷದ ಬೆಂಬಲಿತರು? ಯಾರಿಂದ ಒತ್ತಡ ಹಾಕಿದರೆ ಇವರು ತಮ್ಮ ಪರವಾಗಿ ಮತ ಹಾಕಬಹುದು ಎಂದು ಕೂಡಿಸಿ ಕಳೆಯುವಲ್ಲಿ ಅಭ್ಯರ್ಥಿಗಳು ನಿರತರಾಗಿದ್ದಾರೆ.
ಹಾವೇರಿ ಮೇಲೆ ಕಣ್ಣು: ಏತನ್ಮಧ್ಯೆ ಪ್ರಸ್ತುತ ಚುನಾವಣೆಗೆ ಸ್ಥಳೀಯ ಸಂಸ್ಥೆಯಿಂದ ಆಯ್ಕೆಯಾದ ಸದಸ್ಯರು ಮತದಾರರಾಗಿರುತ್ತಾರೆ. ಈ ಚುನಾವಣೆಯಲ್ಲಿ ಮೂರು ಜಿಲ್ಲೆಯಿಂದ 7297 ಸದಸ್ಯರು ಮತ ಚಲಾಯಿಸುವ ಅಧಿಕಾರ ಪಡೆದಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 2101 ಮತದಾರರಿದ್ದರೆ, ಗದಗ ಜಿಲ್ಲೆಯಲ್ಲಿ 1903 ಮತದಾರರು ಹಾಗೂ ಹಾವೇರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 3293 ಮತದಾರರಿದ್ದಾರೆ. ಹೀಗಾಗಿ ಕಣದಲ್ಲಿರುವ ಅಭ್ಯರ್ಥಿಗಳು ಹಾವೇರಿ ಜಿಲ್ಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಹಾವೇರಿ ಜಿಲ್ಲೆಯೊಂದರ ಮತ ಓರ್ವ ಅಭ್ಯರ್ಥಿಯ ಪರವಾಗಿ ಬಿದ್ದರೆ ಗೆಲುವಿನ ನಗೆ ಬೀರಬಹುದು. ಇನ್ನು ಹಾವೇರಿಯಲ್ಲಿ ಯಾವ ಅಭ್ಯರ್ಥಿ ಹೆಚ್ಚಿನ ಮತ ಗಳಿಸುತ್ತಾರೋ ಅವರೇ ಗೆಲ್ಲುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಅಭ್ಯರ್ಥಿಗಳ ಚಿತ್ತ ಹಾವೇರಿಯತ್ತ ಹೆಚ್ಚಾಗಿ ಹೊರಳಿದೆ. ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ಕಳೆದ ಬಾರಿ ಇದೇ ಸ್ಥಾನದಿಂದ ಗೆಲುವು ಸಾಧಿಸಿದ್ದ ಶಿವರಾಜ ಸಜ್ಜನರು ಕೂಡ ಹಾವೇರಿಯವರು. ಸಜ್ಜನರು ಹಾವೇರಿಯವರೇ ಆಗಿದ್ದರಿಂದ ಅವರು ಆ ಜಿಲ್ಲೆಯಲ್ಲಿಯೇ ಹೆಚ್ಚಿನ ಮತ ಗಳಿಸಿ ಗೆಲುವಿನ ದಡ ಸೇರಿದ್ದರು. ಆದರೆ, ಸಜ್ಜನರ ಕಣದಿಂದ ಹಿಂದೆ ಸರಿದಿರುವುದರಿಂದ ಹಾವೇರಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಮತ ಗಳಿಕೆ ಮಾಡುವ ಪ್ರಶ್ನೆಯೇ ಉದ್ಭವಿಸದು. ಇದರಿಂದಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಕೊಂಚ ನಿರಾಳರಾಗಿದ್ದಾರೆ. ಈಗೇನಿದ್ದರೂ ತಮ್ಮ ವೈಯಕ್ತಿಕ ಹಾಗೂ ಪಕ್ಷದ ವರ್ಚಸ್ಸಿನ ಮೇಲೆ ಹಾವೇರಿ ಜಿಲ್ಲೆಯಿಂದ ಮತ ಸೆಳೆಯಲಿದ್ದಾರೆ.
ಹಾವೇರಿ ಗಿರಕಿ: ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಹಾಗೂ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಆಗಲೇ ಹಾವೇರಿಯ ಪ್ರಚಾರ ಸುತ್ತಾಟ ಮುಗಿಸಿ ಬಂದಿದ್ದಾರೆ. ಪ್ರಚಾರಕ್ಕಿಂತ ಮುಖ್ಯವಾಗಿ ಪ್ರಮುಖರನ್ನು ಭೇಟಿಯಾಗಿ ಅವರಿಗೆ ಚುನಾವಣೆಯ ಜವಾಬ್ದಾರಿ ಹೊರಿಸಿ ಬಂದಿದ್ದಾರೆ.
ತಾವು ಹೊಸ ಮುಖವಾಗಿರುವುದರಿಂದ ಸ್ಥಳೀಯ ಮುಖಂಡರ ಆಸರೆಯಿದ್ದರೆ ಮತ ಗಳಿಕೆಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಅಭ್ಯರ್ಥಿಗಳದ್ದು. ಹೀಗಾಗಿ ಎಡಬಿಡದೇ ಹಾವೇರಿಗೆ ಹೋಗಿ ಬರುತ್ತಿದ್ದಾರೆ. ಇವೆಲ್ಲದರ ಮಧ್ಯೆ ಮತಗಳಿಕೆಗೆ ಜಾತಿವಾರು ಲೆಕ್ಕಾಚಾರವೂ ಶುರುವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಬ್ಬರೂ ಲಿಂಗಾಯಿತರೇ ಆಗಿದ್ದಾರೆ. ನಾಗರಾಜ ಛಬ್ಬಿ ಗಾಣಿಗ ಸಮುದಾಯಕ್ಕೆ ಸೇರಿದರೆ, ಪ್ರದೀಪ ಬಣಜಿಗ ಸಮುದಾಯಕ್ಕೆ ಸೇರಿದವರು. ಹೀಗಿದ್ದಾಗ ಲಿಂಗಾಯತ ಮತಗಳು ಹರಿದು ಹಂಚಿ ಹೋಗಲಿದೆ. ಇಂತಹ ಸ್ಥಿತಿಯಲ್ಲಿ ಲಿಂಗಾಯೇತರರು ಎಷ್ಟು ಸದಸ್ಯರಿದ್ದಾರೆ. ಇವರು ಯಾವ ಪಕ್ಷಕ್ಕೆ ಬೆಂಬಲಿಸುವವರು? ಇವರನ್ನು ಮನವೊಲಿಸುವುದು ಹೇಗೆ? ಎಂಬ ಜಾತಿ ಲೆಕ್ಕಾಚಾರದಲ್ಲಿಯೂ ಅಭ್ಯರ್ಥಿಗಳು ತೊಡಗಿದ್ದಾರೆ.
ಒಟ್ಟಾರೆ ಕಣದಲ್ಲಿ ಮೂವರು ಅಭ್ಯರ್ಥಿಗಳಿದ್ದರೂ ಪೈಪೋಟಿ ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆಯೇ ಏರ್ಪಡಲಿದೆ. ಹೀಗಾಗಿ ಚುನಾವಣಾ ಕಣಕ್ಕೆ ಇದೀಗ ಮೆರಗು ಬಂದಿದ್ದು ಉಪ ಕದನ ಕುತೂಹಲ ಮೂಡಿಸಿದೆ.

-ಪ್ರಕಾಶ್ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement