ಹಿರಿಯರಿಲ್ಲದ ಮನೆ ಮಸಣಕ್ಕೆ ಸಮಾನ: ಆರ್.ಕೆ. ಮುಳಗುಂದ
ಧಾರವಾಡ: ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಶಹರದ ಜೆಎಸ್ಸೆಸ್ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಥೆಯ ಹಿರಿಯ ಪ್ರಾಚಾರ್ಯ ಡಾ. ಆರ್.ಕೆ. ಮುಳಗುಂದ, ಡಾ. ಆರ್.ಟಿ. ಜಂತ್ಲಿ, ತವನಪ್ಪ ಉಪಾಧ್ಯೆ ಹಾಗೂ ಪಿ.ವಿ. ಚಿಮ್ಮಲಗಿ ಅವರನ್ನು ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸನ್ಮಾನಿಸಿದರು.
ಇಂದಿನ ಪೀಳಿಗೆಯಲ್ಲಿ ಅವಿಭಕ್ತ ಕುಟುಂಬಗಳು ಕಡಿಮೆಯಾಗುತ್ತಿರುವುದರಿಂದ ಮಕ್ಕಳು ಹಿರಿಯರ ಪ್ರೀತಿ, ಮಾರ್ಗದರ್ಶನದಿಂದ ವಂಚಿತರಾಗುತ್ತಿದ್ದಾರೆ. ದೇವರಿಲ್ಲದ ಗುಡಿ ಹಿರಿಯರಿಲ್ಲದ ಮನೆ ಮಸಣಕ್ಕೆ ಸಮಾನ. ಹಿರಿಯರ ಮನಸ್ಸನ್ನು ನೋಯಿಸದೆ ಅವರ ಮಾರ್ಗದರ್ಶನದಲ್ಲಿ ನಡೆದರೆ ಪ್ರತಿಯೊಬ್ಬರೂ ಸುಖ ಹಾಗೂ ಸಂತೋಷದ ಜೀವನ ಸಾಗಿಸಬಹುದಾಗಿದೆ ಎಂದು ಡಾ. ಆರ್.ಕೆ. ಮುಳಗುಂದ ಹೇಳಿದರು.
ಮುಖ್ಯಾಧ್ಯಾಪಕರಾದ ಪಿ.ಎಸ್. ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಟಿ. ಚಾಕಲಬ್ಬಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಜಿ. ನಾವಿ ಸ್ವಾಗತಿಸಿದರು. ಐ.ಐ ಕುದರಿ ವಂದಿಸಿದರು.