ಹೈಕೋರ್ಟ್ ಕಾಯಂ ಪೀಠ: ನನಸು
ಕನ್ನಡಪ್ರಭ ವಾರ್ತೆ, ಧಾರವಾಡ, ಆ. 9
ಧಾರವಾಡ ಹಾಗೂ ಗುಲ್ಬರ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠಗಳು ಆರಂಭವಾಗಿ ಐದು ವರ್ಷಗಳ ಸಮಾಧಾನದ ಹಾದಿ ಸವೆದ ಸಂಭ್ರಮಕ್ಕೆ ಈಗ ಮತ್ತೊಂದು ಗರಿ.
ಹಲವು ದಶಕಗಳ ಉತ್ತರ ಕರ್ನಾಟಕದ ಜನತೆಯ ಆಶಯದಂತೆ 2008ರ ಜುಲೈ ತಿಂಗಳಲ್ಲಿ ಆರಂಭವಾಗಿದ್ದ ಈ ಹೈಕೋರ್ಟ್ ಸಂಚಾರಿ ಪೀಠಗಳು, ಈಗ ಕಾಯಂ ಪೀಠಗಳಾಗಿದ್ದು, ಉದ್ಘಾಟನೆಗೂ ಮುಹೂರ್ತ ನಿಗದಿಯಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಗುರುವಾರ ಬೆಂಗಳೂರಿನಲ್ಲಿ ನಡೆದ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗುಲ್ಬರ್ಗ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನ ಕುಮಾರ ಹಾಗೂ ಧಾರವಾಡ ಜಿಲ್ಲಾಧಿಕಾರಿ ಸಮೀರ ಶುಕ್ಲಾ ಭಾಗವಹಿಸಿದ್ದರು. ಕಾಯಂ ಪೀಠದ ಉದ್ಘಾಟನೆ ಧಾರವಾಡದಲ್ಲಿ ಆ. 24ರಂದು ಹಾಗೂ ಗುಲ್ಬರ್ಗದಲ್ಲಿ ಆ. 31ರಂದು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಉದ್ಘಾಟನೆ ಸಮಾರಂಭದಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ, ಕರ್ನಾಟಕದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಾಘೇಲಾ, ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಎರಡೂ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಮೂರು ತಿಂಗಳೊಳಗೆ ಕಾಯಂ: ಕಳೆದ ಜೂ. 4ರಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಧಾರವಾಡ ಮತ್ತು ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠಗಳನ್ನು ಕಾಯಂಗೊಳಿಸಲು ತೀರ್ಮಾನಿಸಲಾಗಿತ್ತು. ಈ ತೀರ್ಮಾನದ ಮೂರು ತಿಂಗಳೊಳಗೆ ಕಾಯಂ ಪೀಠದ ಉದ್ಘಾಟನೆ ನಡೆಯುತ್ತಿರುವುದು ಈ ಭಾಗದ ಜನತೆಗೆ ಸಂತಸದ ವಿಷಯ.
ಈ ಕುರಿತಂತೆ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯೆ ನೀಡಿರುವ ಧಾರವಾಡ ಜಿಲ್ಲಾಧಿಕಾರಿ ಸಮೀರ ಶುಕ್ಲಾ, ಕಾಯಂ ಪೀಠಗಳ ಉದ್ಘಾಟನೆ ಕುರಿತು ಸರ್ಕಾರದ ಮಟ್ಟದಲ್ಲಿ ಗುರುವಾರ ಸಭೆ ನಡೆದಿದೆ. ದಿನಾಂಕವೂ ನಿಗದಿಯಾಗಿದೆ. ಶೀಘ್ರವೇ ಆಮಂತ್ರಣ ಪತ್ರಿಕೆ, ಸಮಾರಂಭದಲ್ಲಿ ಪಾಲ್ಗೊಳ್ಳುವ ಅತಿಥಿಗಳನ್ನು ನ್ಯಾಯಮೂರ್ತಿಗಳು ನಿರ್ಣಯಿಸಲಿದ್ದಾರೆ. ಕಾರ್ಯಕ್ರಮ ಏರ್ಪಡಿಸುವುದು ಹಾಗೂ ಅದಕ್ಕೆ ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಮಗೆ ಸೂಚಿಸಲಾಗಿದೆ ಎಂದರು.
ಧಾರವಾಡ ಸೇರಿದಂತೆ ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠಗಳು ಕಾಯಂ ಪೀಠವಾಗಿ ಕಾರ್ಯ ನಿರ್ವಹಿಸಲು ಎಲ್ಲ ಮೂಲ ಸೌಕರ್ಯಗಳನ್ನು ಹೊಂದಿವೆ. ಇಲ್ಲಿ ಹತ್ತು ಸುಸಜ್ಜಿತ ಕೋರ್ಟ್ ಹಾಲ್ಗಳಿದ್ದು, ಸದ್ಯ ಐದು ಹಾಲ್ಗಳಲ್ಲಿ ನ್ಯಾಯಮೂರ್ತಿಗಳು ನ್ಯಾಯದಾನ ಮಾಡುತ್ತಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳು ಆಗಮಿಸಿದಾಗ ಕೂಡ ಕಲಾಪ ನಡೆಸಲು ಮುಖ್ಯ ನ್ಯಾಯಾಂಗ ಕೊಠಡಿಯೂ ಇದೆ. ಜತೆಗೆ ಸುಸಜ್ಜಿತ ಗ್ರಂಥಾಲಯ, ನ್ಯಾಯಮೂರ್ತಿಗಳಿಗೆ ವಾಸ್ತವ್ಯದ ಮನೆಗಳು, ಪೊಲೀಸ್ ಚೌಕಿ ಸೇರಿದಂತೆ ಎಲ್ಲ ಅಗತ್ಯ ಸೌಕರ್ಯಗಳಿವೆ.
ಹೋರಾಟಕ್ಕೆ ಸಿಕ್ಕಿತು ಫಲ: ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಕುರಿತಂತೆ ಪ್ರಸ್ತುತ ಹೈಕೋರ್ಟ್ ಸಂಚಾರಿ ಪೀಠದ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಅವರ ನೇತೃತ್ವದಲ್ಲಿ ಸುಮಾರು ಮೂರು ದಶಕಗಳಿಂದ ಹೋರಾಟ ನಡೆದು ಚಳವಳಿ ತೀವ್ರತೆ ಪಡೆದ ಹಿನ್ನೆಲೆಯಲ್ಲಿ 2000ನೇ ಇಸ್ವಿಯಲ್ಲಿ ಇಲ್ಲೊಂದು ಪೀಠ ಸ್ಥಾಪನೆಯ ಆಸೆಗೆ ಗರಿ ಮೂಡಿದ್ದವು. ಪೀಠ ಸ್ಥಾಪನೆಯಾದರೆ ನಿರೀಕ್ಷಿತ ಮಟ್ಟದ ಪ್ರಕರಣಗಳು ದಾಖಲಾಗುತ್ತವೆಯೇ, ದಾಖಲಾದರೂ ಆ ಪ್ರಕರಣಗಳನ್ನು ನಡೆಸುವಷ್ಟು ಇಲ್ಲಿನ ವಕೀಲರು ಪರಿಣಿತರೆ ಎನ್ನುವ ಹಲವು ಪ್ರಶ್ನೆಗಳು ಹರಿದಾಡುತ್ತಿದ್ದವು. ಇದಕ್ಕೆಲ್ಲಾ ಉತ್ತರ ಎಂಬಂತೆ 2008ರಲ್ಲಿ ಆರಂಭಗೊಂಡ ಈ ಹೈಕೋರ್ಟ್ ಸಂಚಾರಿ ಪೀಠಗಳು ಸಮರ್ಥವಾಗಿ ಐದು ವರ್ಷ ಪೂರೈಸಿದ್ದು, ಈಗ ಕಾಯಂ ಪೀಠ ಸಹ ಆಗಿದ್ದು ಈ ಭಾಗದ ಜನರಿಗೆ ಮತ್ತಷ್ಟು ಖುಷಿ ತಂದಿದೆ.
ಗುಲ್ಬರ್ಗ-ಧಾರವಾಡದ ಸಂಚಾರಿ ಪೀಠಗಳನ್ನು ಕಾಯಂ ಪೀಠವಾಗಿಸಲು ಪ್ರಯತ್ನಿಸಿದ ಎಲ್ಲರಿಗೂ ಅಭಿನಂದನೆ. ಕೇಂದ್ರದ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಹೈಕೋರ್ಟ್ ಮುಖ್ಯ, ಇತರ ನ್ಯಾಯಮೂರ್ತಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ವಿಶೇಷ ಅಭಿನಂದನೆಗಳು. ಕಾಯಂ ಪೀಠವಾಗಿ ಪರಿವರ್ತನೆ ಹೊಂದುವುದರಿಂದ ನ್ಯಾಯಮೂರ್ತಿಗಳು ಪೂರ್ಣ ಪ್ರಮಾಣದಲ್ಲಿ ನ್ಯಾಯದಾನ ನಡೆಸಲು ಸಾಧ್ಯ. ಇದರಿಂದ ಪ್ರಕರಣಗಳ ಶೀಘ್ರ ವಿಲೇವಾರಿ ಸಾಧ್ಯವಾಗಲಿದೆ. ಜತೆಗೆ ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳು ಕೂಡ ದಾಖಲಾಗಲು ಸಾಧ್ಯವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಈ ಭಾಗದ ಸಾಮರ್ಥ್ಯವುಳ್ಳ ತಜ್ಞ ವಕೀಲರನ್ನು ಪರಿಗಣಿಸಬೇಕಿದೆ.
- ಬಿ.ಡಿ. ಹಿರೇಮಠ, ಹೈಕೋರ್ಟ್ ಸಂಚಾರಿ ಪೀಠದ ವಕೀಲರ ಸಂಘದ ಅಧ್ಯಕ್ಷ
-ಬಸವರಾಜ ಹಿರೇಮಠ