ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪಾಲಿಕೆ ಅಧಿಕಾರ ನಿರ್ಧರಿಸಲಿದೆ ಉಪಚುನಾವಣೆ

Vishwanath S
Updated On : 11 Aug 2013, 11:48 am

ಕನ್ನಡಪ್ರಭ ವಾರ್ತೆ, ಧಾರವಾಡ, ಆ. 10
ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಉಪ ಚುನಾವಣೆಯ ಫಲಿತಾಂಶ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರದ ತಕ್ಕಡಿ ವಾಲುವಿಕೆ ನಿರ್ಧರಿಸಲಿದೆ.
ರಾಜ್ಯ ಉಚ್ಚ ನ್ಯಾಯಾಲಯದಲ್ಲಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ವಿವಾದ ಬಗೆಹರಿಯುತ್ತಿದ್ದಂತೆಯೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿಯಲು ತೆರೆಮರೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಎಲ್ಲರ ಕಣ್ಣು ವಿಧಾನ ಪರಿಷತ್ ಉಪ ಚುನಾವಣೆ ಫಲಿತಾಂಶದ ಮೇಲೆ ನೆಟ್ಟಿದೆ.
ಮೀಸಲಾತಿ ಪ್ರಕಟಣೆಗೆ ಹಿನ್ನಡೆ: ವಿಧಾನ ಪರಿಷತ್ ಉಪ ಚುನಾವಣೆ ಹಿನ್ನಲೆಯಲ್ಲಿ ಆ. 22ರ ವರೆಗೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್-ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ಪ್ರಕಟಣೆ ಸದ್ಯಕ್ಕೆ ಸಾಧ್ಯವಿಲ್ಲ. ಆದರೆ ಚುನಾವಣಾ ನೀತಿ ಸಂಹಿತೆ ಪೂರ್ಣಗೊಂಡ ನಂತರದ ಕೆಲವೇ ದಿನಗಳಲ್ಲಿ ಮೀಸಲಾತಿ ಪ್ರಕಟಗೊಳ್ಳುವ ಆಶಯ ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳಲ್ಲಿ ಮತ್ತೆ ಚಿಗುರಿದೆ.
ಮತ ಚಲಾವಣೆ ಹಕ್ಕು: ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಗೆಲವು ಸಾಧಿಸುವ ಅಭ್ಯರ್ಥಿಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಆಯ್ಕೆಯಲ್ಲಿ ಮತ ಚಲಾಯಿಸುವ ಹಕ್ಕು ಇದೆ.
ಹೈಕೋರ್ಟ್ ಮೆಟ್ಟಿಲೇರಿದ್ದ ಬಿಬಿಎಂಪಿ ಮೇಯರ್-ಉಪ ಮೇಯರ್ ಚುನಾವಣೆಯ ವಿವಾದ ಪ್ರಸಕ್ತ ಉಪ ಚುನಾವಣೆ ಸಂದರ್ಭದಲ್ಲಿಯೇ ಇತ್ಯರ್ಥಕ್ಕೊಳಗಾಗಿದೆ. ಹೀಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರ ಚುಕ್ಕಾವಣೆಗಾಗಿ ನಡೆಯಲಿರುವ ಆಯ್ಕೆ ಪ್ರಕ್ರಿಯೆಯಲ್ಲಿ ಉಪ ಚುನಾವಣೆಯಲ್ಲಿ ಗೆಲವು ಸಾಧಿಸುವ ಕಾಂಗ್ರೆಸ್ ಅಥವಾ ಬಿಜೆಪಿ ಅಭ್ಯರ್ಥಿ ಮಹತ್ವದ ಪಾತ್ರ ವಹಿಸಲಿದ್ದಾರೆ.
ಸಂಖ್ಯಾಬಲ: ಕಳೆದ ಮಾರ್ಚ್ 7ರಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 33, ಕಾಂಗ್ರೆಸ್ 22, ಜೆಡಿಎಸ್ 9, ಕೆಜೆಪಿ 1 ಸ್ಥಾನ ಹಾಗೂ ಎರಡು ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.
ಅಧಿಕಾರ ಚುಕ್ಕಾಣಿ ಹಿಡಿಯಲು 34 ಸಂಖ್ಯಾಬಲದ ಅವಶ್ಯಕತೆ ಇರುವ ಪಾಲಿಕೆಯಲ್ಲಿ ಯಾವುದೇ ಪಕ್ಷ ಬಹುಮತ ಪಡೆಯದ ಕಾರಣ ಅತಂತ್ರ ಸ್ಥಿತಿ ಎದುರಾಗಿದೆ. ಈ ಅತಂತ್ರ ಸ್ಥಿತಿ ಇನ್ನೂ ಮುಂದುವರೆಯಲು ವಿಧಾನ ಪರಿಷತ್ ಉಪ ಚುನಾವಣೆ ಫಲಿತಾಂಶ ಕಾರಣವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಜರುಗಲಿರುವ ಉಪ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಮೇಲೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುಕ್ಕಾಣಿ ಹಿಡಿಯಲಿರುವ ಪಕ್ಷ ಯಾವುದೆಂಬುದು ಇತ್ಯರ್ಥಗೊಳ್ಳಲಿದೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಜಗದೀಶ ಶೆಟ್ಟರ್, ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಸಂಸದ ಪ್ರಹ್ಲಾದ ಜೋಶಿ ಅವರ ಮತಗಳು ಸೇರಿ ಬಿಜೆಪಿಯ ಸಂಖ್ಯಾಬಲ 36ಕ್ಕೆ ಏರಲಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆಯ ಬಲ 31ಕ್ಕೇರಲಿದ್ದು, ಹು-ಧಾ ಪೂರ್ವ ಕ್ಷೇತ್ರ ಶಾಸಕ ಪ್ರಸಾದ ಅಬ್ಬಯ್ಯ, ಧಾರವಾಡ ಕ್ಷೇತ್ರ ಶಾಸಕ ವಿನಯ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯರಾದ ಕಾಂಗ್ರೆಸ್‌ನ ವೀರಣ್ಣ ಮತ್ತಿಕಟ್ಟಿ, ಶ್ರೀನಿವಾಸ ಮಾನೆ ಹಾಗೂ ಜೆಡಿಎಸ್‌ನ ಬಸವರಾಜ ಹೊರಟ್ಟಿ ಸೇರಿ ಈ ಪಕ್ಷಗಳ ಸಂಖ್ಯಾಬಲವೂ 36ಕ್ಕೆ ಏರಲಿದೆ.
ಕಾಂಗ್ರೆಸ್‌ನ್ನು ಅಧಿಕಾರದಿಂದ ದೂರ ಇಡಲು ಕೆಜೆಪಿ ಅಭ್ಯರ್ಥಿ ಬಿಜೆಪಿಗೆ ಬೆಂಬಲ ನೀಡಿದರೆ ಕಾಂಗ್ರೆಸ್ ಪಕ್ಷದ ಬಲ 37ಕ್ಕೆ ತಲುಪುವುದು. ಇಬ್ಬರು ಪಕ್ಷೇತರ ಅಭ್ಯರ್ಥಿಗಳಲ್ಲಿ ಒಬ್ಬರು ಈಗಾಗಲೇ ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಸಂಖ್ಯಾಬಲ 38ಕ್ಕೆ ಏರಲಿದೆ. ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್ ಬೆಂಬಲಿಸಿದರೆ ಕೈ ಬಲ 37ಕ್ಕೆ ತಲುಪುವುದು.
ವಿಧಾನ ಪರಿಷತ್ ಉಪ ಚುನಾವಣೆ ಪೂರ್ವ ಈಗಿನ ಲೆಕ್ಕಾಚಾರದ ಪ್ರಕಾರ ಬಿಜೆಪಿ ಬಲ 38 ಇದ್ದರೆ, ಕಾಂಗ್ರೆಸ್ ಬಲ 37ರಷ್ಟಿದೆ. ವಿಪ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಜಯ ಸಾಧಿಸಿದಲ್ಲಿ ಬಿಜೆಪಿ ಸಂಖ್ಯಾಬಲ 39ಕ್ಕೇರಿ, ಕಾಂಗ್ರೆಸ್ ಬಲ 37ಕ್ಕೆ ತಟಸ್ಥಗೊಳ್ಳುವುದು. ಇದರಿಂದ ಮಹಾನಗರ ಪಾಲಿಕೆಯ ಅಧಿಕಾರದ ಚುಕ್ಕಾಣೆ ಸರಳವಾಗಿ ಬಿಜೆಪಿ ವಶವಾಗುವುದು. ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಗೆಲವು ಸಾಧಿಸಿದಲ್ಲಿ ಪಾಲಿಕೆಯಲ್ಲಿ ಕಾಂಗ್ರೆಸ್‌ನ ಬಲ 38ಕ್ಕೆ ಏರಲಿದೆ. ಈ ಸಂದರ್ಭ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡರ ಬಲಾಬಲ 38ಕ್ಕೆ ತಲುಪುವುದು.
ಪಾಲಿಕೆ ಅಧಿಕಾರ ಚುಕ್ಕಾಣೆ ಹಿಡಿಯುವಲ್ಲಿ ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಮತ್ತೆ ಅತಂತ್ರ ಸ್ಥಿತಿ ಎದುರಿಸುತ್ತವೆ. ಈ ಸಂದರ್ಭದಲ್ಲಿ ಲಾಟರಿ ಎತ್ತುವ ಅಥವಾ ಮತ್ತಿತರ ಪ್ರಯತ್ನಗಳಿಗೆ ಚುನಾವಣಾಧಿಕಾರಿಗಳು ಮುಂದಾಗಬಹುದು. ಇಲ್ಲವೆ ಕೆಜೆಪಿಯ ಒಬ್ಬ ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳನ್ನು ಸೆಳೆಯುವ ಕಸರತ್ತಿಗೆ ರಾಜಕೀಯ ಪಕ್ಷಗಳು ಮುಂದಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

-ಆನಂದ ಅಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement