31ನೇ ರಾಜ್ಯಮಟ್ಟದ ಟೇಕ್ವಾಂಡೊ ಪಂದ್ಯಾವಳಿ
ಧಾರವಾಡ: ವಿದ್ಯಾರ್ಥಿಗಳು ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದ್ದರಿಂದ ಶಾರೀರಿಕ ಬೆಳವಣಿಗೆಯಾಗುವ ಜೊತೆಗೆ ಮನಸ್ಸು ಪ್ರಫುಲ್ಲಗೊಂಡು ಓದಿನತ್ತ ಹೆಚ್ಚು ಆಸಕ್ತಿ ಮೂಡಿಸುತ್ತದೆ ಎಂದು ಶಾಸಕ ಎನ್.ಎಚ್. ಕೋನರೆಡ್ಡಿ ಹೇಳಿದರು. ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ 31ನೇ ರಾಜ್ಯಮಟ್ಟದ ಜೂನಿಯರ್ ಮತ್ತು ಸೀನಿಯರ್ ಟೇಕ್ವಾಂಡೋ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡಾ ಚಟುವಟಿಕೆಗಳಲ್ಲಿ ಗೆಲ್ಲಲೇಬೇಕೆಂದು ಸ್ಪರ್ಧಿಸಬೇಕು. ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯವಾಗಿರುತ್ತದೆ. ಸೋತವರು ಜೀವನದಲ್ಲಿ ಜಿಗುಪ್ಸೆಗೊಳ್ಳದೇ, ಸತತ ಪ್ರಯತ್ನಗಳ ಮೂಲಕ ಗುರಿ ತಲುಪಬೇಕು ಎಂದು ಸಲಹೆ ನೀಡಿದರು. ಪ್ರವೀಣ ಕುಮಾರ, ಆನಂದ ಕುಲಕರ್ಣಿ, ಬಸವರಾಜ ತಾಳಿಕೋಟಿ ಮತ್ತಿತರರು ಇದ್ದರು.
ಟ್ರಾಲಿಯಿಂದ ಬಿದ್ದು ಮಹಿಳೆ ಸಾವು
ಭಟ್ಕಳ: ಇಲ್ಲಿನ ಮೂಸಾ ನಗರದ ಹಸನ್ ಸ್ಟ್ರೀಟ್ನ ಕಟ್ಟಡ ಕಾಮಗಾರಿಯಲ್ಲಿ ತೊಡಗಿದ್ದ ಮಹಿಳೆ ಟ್ರಾಲಿಯಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ಜರುಗಿದೆ. ಮಾಸ್ತಮ್ಮ ಮಾದೇವ ನಾಯ್ಕ(55) ಬರ್ನಗದ್ದೆ ಮನೆ, ಮುಟ್ಟಳ್ಳಿ ಮೃತಪಟ್ಟ ಮಹಿಳೆ. ಮಹಿಳೆ ಶನಿವಾರ ಮೂಸಾನಗರದ ಹಸನ್ ಸ್ಟ್ರೀಟ್ನ ಕಟ್ಟಡ ಕಾಮಗಾರಿಯಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ಟ್ರಾಲಿಯಿಂದ ಕೆಳಗೆ ಬಿದ್ದಿದ್ದಾಳೆ. ಪರಿಣಾಮ ತಲೆ ಹಾಗೂ ಇತರ ಭಾಗಗಳಿಗೆ ತೀವ್ರ ಗಾಯವಾಗಿ ಮಣಿಪಾಲ ಅಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾಳೆ. ನಗರ ಠಾಣೆ ಪಿಎಸ್ಐ ಜಾನ್ಸನ್ ಡಿಸೋಜಾ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಜೂಜಾಟ: ನಾಲ್ವರ ಬಂಧನ
ಧಾರವಾಡ: ಇಲ್ಲಿನ ಹೊಸ ಎಪಿಎಂಸಿ ಬಳಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಉಪನಗರ ಠಾಣೆ ಪೊಲೀಸರು ಶನಿವಾರ ತಡರಾತ್ರಿ ಬಂಧಿಸಿದ್ದಾರೆ. ನಗರದ ಹೊರವಲಯದಲ್ಲಿರುವ ಹೊಸ ಎಪಿಎಂಸಿಯಲ್ಲಿ ಜೂಜಾಟವಾಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಶಹನಷಾ ಶೇಖಸನದಿ, ನೂರಅಹ್ಮದ ಶೇಖಸನದಿ, ಸಾಜಿದಲಿ ನದಾಫ್ ಹಾಗೂ ಮೆಹಬೂಬ ನದಾಫ್ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರಿಂದ ರು. 4300 ನಗದು ಹಾಗೂ ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಕೆರೆಯಲ್ಲಿ ಮುಳುಗಿ ಸಾವು
ಧಾರವಾಡ: ಈಜಲು ಹೋಗಿದ್ದ ಬಾಲಕನೋರ್ವ ಕೆರೆಯಲ್ಲಿ ಮುಳಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅನಿಲ ಭಂಗಿ (16) ಮೃತಪಟ್ಟ ದುರ್ದೈವಿ. ಶನಿವಾರ ಮಧ್ಯಾಹ್ನ ತನ್ನ ಗೆಳೆಯರೊಂದಿಗೆ ಈಜಲು ಧುಮುಕಿದ ಅನಿಲ ಈಜು ಬಾರದ ಕಾರಣ ಮುಳಗಿ ಸಾವನ್ನಪ್ಪಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಪೊಲೀಸರು ಪತ್ರಿಕೆಗೆ ತಿಳಿಸಿದ್ದಾರೆ.