ಉದ್ಯಮಕ್ಕೆ ಗುಣಮಟ್ಟ, ಗ್ರಾಹಕ ಸಂಬಂಧ ಮುಖ್ಯ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 11
ಹಣವೊಂದರಿಂದಲೇ ಉದ್ಯಮದಲ್ಲಿ ಯಶಸ್ಸು ಸಾಧ್ಯವಿಲ್ಲ. ಬಂಡವಾಳದ ಜತೆಗೆ ಉತ್ಪನ್ನದ ಗುಣಮಟ್ಟ, ಗ್ರಾಹಕರೊಂದಿಗೆ ಉದ್ಯಮಿಯ ಸಂಬಂಧಗಳು ಕೂಡ ಉದ್ಯಮದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜೈನ್ ವಿಶ್ವವಿದ್ಯಾಲಯದ ಡಾ ಎಂ.ಎಂ. ಬಗಲಿ ಹೇಳಿದರು.
ಉತ್ತರ ಕರ್ನಾಟಕದ ಕೈಗಾರಿಕೆಗಳ ಸಂಘ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ವ್ಯವಹಾರದಲ್ಲಿ ಸಾಮರ್ಥ್ಯ ವೃದ್ಧಿ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ತಯಾರಿಸುವ ಉತ್ಪನ್ನದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಉದ್ಯಮ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಗ್ರಾಹಕರೊಂದಿಗೆ ಉದ್ಯಮಿಯ ಸಂಬಂಧ ಹೇಗಿರಬೇಕು ಎನ್ನುವುದನ್ನು ಉದಾಹರಣೆಗಳ ಮುಖಾಂತರ ಅವರು ತಿಳಿಸಿದರು.
ಬಿ.ಡಿ. ಕಡಬಿ ಮಾತನಾಡಿ, ಸಣ್ಣ ಕೈಗಾರಿಕೊದ್ಯಮಿಗಳಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದಿಂದ ಹದಿನೈದು ದಿನಕ್ಕೊಂದು ಶಿಬಿರ ಆಯೋಜಿಸಲಾಗುತ್ತಿದ್ದು, ಇನ್ನೂ 14 ಶಿಬಿರಗಳು ನಡೆಯಲಿವೆ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ಜಂಟಿ ನಿರ್ದೇಶಕ ರಮೇಶ ಬಂಕಾಪುರ ಭಾಗವಹಿಸಿದ್ದರು. ಶಿಬಿರದಲ್ಲಿ ಸುಮಾರು 80ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು. ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎ.ಟಿ. ಪವಾರ ಸ್ವಾಗತಿಸಿದರು.