ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಗೆಲುವಿಗೆ ಕುಂದಗೋಳ ಕ್ಷೇತ್ರವೂ ಮುಖ್ಯ

Lingaraj Badiger
Updated On : 12 Aug 2013, 11:16 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 11
ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಉಪಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವಲ್ಲಿ ಕುಂದಗೋಳ ವಿಧಾನಸಭಾ ಕ್ಷೇತ್ರ ಪ್ರಮುಖ ಪಾತ್ರ ವಹಿಸಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಹೇಳಿದರು.
ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಭಾನುವಾರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುವುದಕ್ಕೆ ಶಾಸಕ ಸಿ.ಎಸ್. ಶಿವಳ್ಳಿ ಕಾರಣ ಎಂದು ಹೇಳಿದ ಅವರು, ಗ್ರಾಪಂ ಸದಸ್ಯರ ಅನರ್ಹತೆ ಮಸೂದೆಯನ್ನು ಸರ್ಕಾರ ಜಾರಿಗೆ ತರುತ್ತಿಲ್ಲ. ಇದರ ಸಾಧಕ ಬಾಧಕಗಳ ಕುರಿತು ವಿಚಾರ ನಡೆದಿದ್ದು, ಈ ಮಸೂದೆ ಜಾರಿಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ನೆರೆದಿದ್ದ ವಿವಿಧ ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರಿಗೆ ಭರವಸೆ ನೀಡಿದರು.
ಶಾಸಕ ಸಿ.ಎಸ್. ಶಿವಳ್ಳಿ ಮಾತನಾಡಿ, ಬಿಜೆಪಿ, ಕೆಜೆಪಿ ಅಧಿಕಾರ ದಾಹದ ಪರಿಣಾಮವಾಗಿ ಇಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಉಪಚುನಾವಣೆ ನಡೆಯುತ್ತಿದ್ದು, ಇದು ಜನರ ಮೇಲೆ ಹೇರಿದ ಒತ್ತಾಯದ ಚುನಾವಣೆ, ಅಧಿಕಾರ ಉಳಿಸಿಕೊಳ್ಳುವುದಕ್ಕೆ ಆಯ್ಕೆಯಾದವರಿಂದ ರಾಜಿನಾಮೆ ಕೊಡಿಸಿ ಹಣ ನೀಡಿ ಮತ್ತೆ ಚುನಾವಣೆ ಎದುರಿಸುವಂತೆ ಮಾಡುವ ಮೂಲಕ ಮತದಾರರನ್ನು ಮಾರಾಟದ ಸರಕು ಮಾಡಿತ್ತು. ಆದರೆ ರಾಜ್ಯದ ಮತದಾರ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ ಬಿಜೆಪಿಗೆ ವಿರೋಧ ಪಕ್ಷ ಸ್ಥಾನ ನೀಡಿಲ್ಲ ಎಂದು ಹೇಳಿದರು.
ಜೈಲಿಗೆ ಹೋಗಿದ್ದೆ ಸಾಧನೆ: ಕಳೆದ ಅರವತ್ತಕ್ಕೂ ಹೆಚ್ಚು ವರ್ಷಗಳಿಂದ ರಾಜ್ಯವನ್ನು ಆಳಿದ ಕಾಂಗ್ರೆಸ್ ಏನೂ ಮಾಡಿಲ್ಲ ಎನ್ನುವುದು ಬಿಜೆಪಿಯ ಆರೋಪ, ಹಾಗಿದ್ದರೆ ದೇಶದಲ್ಲಿ ಅಣೆಕಟ್ಟುಗಳನ್ನು ಕಟ್ಟಿದ್ದು ಯಾರು?  ಬಿಜೆಪಿಯವರಂತೂ ಅಲ್ಲ ರಾಜ್ಯದಲ್ಲಿ ಐದು ವರ್ಷದಲ್ಲಿ ಆಡಳಿತ ಮಾಡಿದ ಬಿಜೆಪಿಯ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋಗುವ ಮೂಲಕ ಸಾಧನೆ ಮಾಡಿದ್ದಾರೆ. ಬಿಜೆಪಿ ಎಂದಿಗೂ ರೈತರ ಪರವಾಗಿಲ್ಲ, ಅದಕ್ಕೆ ಯಾವುದೇ ಸಿದ್ಧಾಂತವಿಲ್ಲ, ಸಿದ್ಧಾಂತ ಎನ್ನುವುದು ಇದ್ದರೆ ಲೂಟಿ ಸಿದ್ಧಾಂತ ಮಾತ್ರ ಎಂದು ಹೇಳಿದರು.
ಆಡಳಿತಕ್ಕೆ ಬರುತ್ತಿದ್ದಂತೆಯೇ ಕಾಂಗ್ರೆಸ್ ರು. 1ಗೆ ಕೆಜಿಯಂತೆ ಬಡ ಕುಟುಂಬವೊಂದಕ್ಕೆ 30 ಕೆಜಿ ಅಕ್ಕಿ ವಿತರಿಸುವ ಯೋಜನೆ ಜಾರಿಗೆ ತಂದಿದ್ದು, ತಮಿಳುನಾಡು ಹೊರತು ಪಡಿಸಿದರೆ ಯಾವುದೇ ರಾಜ್ಯದಲ್ಲಿ ಇಂತಹ ಯೋಜನೆ ಜಾರಿಗೆ ಬಂದಿಲ್ಲ. ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರ ಸಾಲ ಮನ್ನಾ ಮಾಡಿದ ಬಿಜೆಪಿ ಸರ್ಕಾರ, ಸಹಕಾರಿ ಬ್ಯಾಂಕುಗಳಿಗೆ ನೀಡಬೇಕಾದ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಾವತಿಸಿದೆ. ಭಾಗ್ಯಜ್ಯೋತಿ ಫಲಾನುಭವಿಗಳ ಬಿಲ್ ಮನ್ನಾ ಮಾಡಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿವಿಧ ಅಭಿವೃದ್ಧಿ ನಿಗಮಗಳಿಂದ ಈ ವರ್ಗದ ಫಲಾನುಭವಿಗಳು ತೆಗೆದುಕೊಂಡಿದ್ದ ಒಟ್ಟು ರು. 4700 ಕೋಟಿ  ಸಾಲವನ್ನು ಕಾಂಗ್ರೆಸ್ ಅಡಳಿತಕ್ಕೆ ಬಂದ ನಂತರ ಮನ್ನಾ ಮಾಡಲಾಗಿದ್ದು, ಈ ಮೂಲಕ ಬಡವರು ಕೂಡ ನೆಮ್ಮದಿಯಿಂದ ಬದುಕುವಂತೆ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ರೈತರಿಗೆ ಬಡ್ಡಿರಹಿತ ಮತ್ತು ಕಡಿಮೆ ಬಡ್ಡಿದರದ ಸಾಲವನ್ನು ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಮುಖಾಂತರ ವಿತರಿಸುವ ಮಹತ್ತರ ಯೋಜನೆಯನ್ನು ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಕಾರಣ: ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಅವರು, ಬಿಜೆಪಿಯ ಅಧಿಕಾರ ಲಾಲಸೆಯಿಂದಾಗಿ ಈ ಉಪಚುನಾವಣೆಯನ್ನು ಜನರ ಮೇಲೆ ಒತ್ತಾಯದಿಂದ ಹೇರಲಾಗಿದೆ. ಗೋದ್ರಾ ಹತ್ಯಾಕಾಂಡದಲ್ಲಿ ಪ್ರಮುಖ ಎನ್ನಿಸಿಕೊಂಡಿರುವ ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ. ಆದರೆ ಸೋನಿಯಾ ಗಾಂಧಿ ಮಾತ್ರ ಎರಡು ಬಾರಿ ಪ್ರಧಾನಿ ಹುದ್ದೆಯನ್ನು ಮತ್ತು ರಾಹುಲ್ ಗಾಂಧಿ ಕೇಂದ್ರ ಸಚಿವ ಸ್ಥಾನವನ್ನು ನಿರಾಕರಿಸಿದ್ದಾರೆ. ರಾಜೀವ ಗಾಂಧಿ ಅವರ ಕಲ್ಪನೆಯಂತೆ ಹಳ್ಳಿಯ ಮಾತನ್ನು ದೆಹಲಿ ಕೇಳುವಂತೆ ಮಾಡುವುದಕ್ಕೆ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿತು. ಇಂದು ಪಂಚಾಯತ್ ರಾಜ್ ವ್ಯವಸ್ಥೆ ದೇಶದಲ್ಲಿ ಭದ್ರಗೊಳ್ಳಲು ಕಾರಣ ಕಾಂಗ್ರೆಸ್ ಎಂದು ಹೇಳಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಎಲ್ಲಿ ಬೇಕಾದಲ್ಲಿ ಲೂಟಿ ಮಾಡಿದೆ. ಇದಕ್ಕೆ ತಾಜಾ ಉದಾಹರಣೆ ಹುಬ್ಬಳ್ಳಿಯ ರಿಕ್ರಿಯೇಷನ್ ಕ್ಲಬ್, ಸಾರ್ವಜನಿಕರು ಉಪಯೋಗಿಸುತ್ತಿದ್ದ ಜಿಮ್‌ಖಾನ್ ಜಾಗವನ್ನು ಬಿಜೆಪಿಯ ಕೆಲವು ಮುಖಂಡರು ಸೇರಿಕೊಂಡು ಕಬಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.  ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ ಮೆಣಸಿನಕಾಯಿ, ಅನ್ವರ್ ಮುಧೋಳ, ಮಹಾನಗರ ಕಾಂಗ್ರೆಸ್  ಮುಖಂಡ ನಾಗರಾಜ ಗೌರಿ, ಪಾಲಿಕೆ ಸದಸ್ಯರಾದ ಮೋಹನ ಹಿರೇಮನಿ, ಅರವಿಂದ ಕಟಗಿ, ರಾಜಾದೇಸಾಯಿ, ಶಂಕರ ಪಾಟೀಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement