ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ತಾಯಿ ರೂಪದ 'ಪ್ರಕೃತಿ' ಮೇಲೆ ಅತ್ಯಾಚಾರ: ಬನ್ನಂಜೆ

Lingaraj Badiger
Updated On : 12 Aug 2013, 11:27 am

ಧಾರವಾಡ: ತಾಯಿ ರೂಪದ ಪ್ರಕೃತಿಯಲ್ಲಿ ಹೆಣ್ಣು ಗಂಡು ಎಂಬ ಲಿಂಗಭೇದ ಭಾವನೆ ಮೂಡಿಸಿಕೊಳ್ಳುವ ಮೂಲಕ ಹೆಣ್ಣೆಂಬ ಪ್ರಕೃತಿಯ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ ಎಂದು ಸಾಹಿತಿ ವೀಣಾ ಬನ್ನಂಜೆ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇಲ್ಲಿನ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಅವ್ವ ಸೇವಾ ಟ್ರಸ್ಟ್ ದತ್ತಿ ಅಂಗವಾಗಿ ಬದುಕಿನಲ್ಲಿ ತಾಯಿ ಪಾತ್ರ ವಿಷಯ ಕುರಿತ ಉಪನ್ಯಾಸದಲ್ಲಿ ಮಾತನಾಡಿದರು.
ಪ್ರಸ್ತುತ ಪ್ರಕೃತಿ ಅನುಗುಣವಾಗಿ ನಾವು ಬೆಳೆಯದೆ, ಪ್ರಕೃತಿಯನ್ನೇ ತಮ್ಮ ಇಷ್ಟಕ್ಕನುಗುಣವಾಗಿ ಬಳಸಿಕೊಳ್ಳುತ್ತಿದ್ದೇವೆ. ಪ್ರಕೃತಿಯನ್ನು ಲಿಂಗಾತೀತವಾಗಿ ನೋಡಿದರೆ ಇಂತಹ ಅಹಿತಕರ ಘಟನೆಗಳು ನಡೆಯಲು ಸಾಧ್ಯವಿಲ್ಲ. ಆದರೆ, ಸದ್ಯ ಹೆಣ್ಣು ಗಂಡು ಎಂಬ ಲಿಂಗಾತೀತ ಭಾವನೆ ನಮ್ಮಲ್ಲಿ ಮೂಡದೆ ಬೆಳೆದಿದ್ದೇವೆ. ಹಾಗಾಗಿ, ಸಂಬಂಧಗಳಿಗೆ ಅರ್ಥವೇ ಇಲ್ಲದ ರೀತಿ ಅತ್ಯಾಚಾರ ಪ್ರಕರಣಗಳ ದಾಖಲಾಗುತ್ತಿವೆ ಎಂದರು.
ಕೆಲವೊಂದು ಸಂದರ್ಭ ಪುರುಷರು ಸಹ ತಾಯಿಯಾಗಿ ಕಾರ್ಯನಿರ್ವಹಿಸುತ್ತಾರೆ. ಪುರುಷ ರೂಪದ ತಂದೆ ತನ್ನ ಮಗುವಿಗೆ ತಾಯಿ ಪ್ರೀತಿ ನೀಡಿ ತಾಯಿ ಎನ್ನಿಸಿಕೊಳ್ಳುತ್ತಾನೆ. ಅಂತೆಯೇ ತಾಯಿತನಕ್ಕೆ ಯಾವುದೇ ಲಿಂಗಭೇದ ಇರುವುದಿಲ್ಲ ಎಂದು ಸಾಬೀತು ಪಡಿಸುತ್ತಾನೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಉಮಾಶ್ರೀ ಮಾತನಾಡಿ, ತಾಯಿ ಕಳೆದುಕೊಂಡಾಗ ಆಕೆಯನ್ನು ನೆನೆಸಿಕೊಂಡು ಅಳುವ ಬದಲು, ಆಕೆ ಇದ್ದಾಗಲೇ ಮಕ್ಕಳಾದ ತಾವು ಆಕೆಯ ಇಷ್ಟಾರ್ಥಗಳಿಗೆ ಸೂಕ್ತ ರೀತಿ ಸ್ಪಂದಿಸಬೇಕು. ಜನ್ಮ ನೀಡಿದವಳು ಮಾತ್ರ ತಾಯಿಯಲ್ಲ.
ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವ ಸಂಕುಲದಲ್ಲಿಯೂ ತಾಯಿ ರೂಪವಿದೆ. ತಾಯಿ ಜಾಗೃತಳಾದಾಗ ಮಾತ್ರ ಸಮಾಜ ಸುಧಾರಣೆಯಾಗುತ್ತದೆ. ಅಲ್ಲದೆ, ತಾಯಿಯ ಪ್ರೀತಿ ವಾತ್ಸಲ್ಯ ನೀಡುವ ಪ್ರತಿಯೊಬ್ಬರೂ ತಾಯಿಯೇ ಆಗಿರುತ್ತಾಳೆ. ತಾಯಿತನಕ್ಕೆ ಯಾವುದೇ ಲಿಂಗಬೇಧವಿಲ್ಲ ಎಂದರು. ಪ್ರಸ್ತುತ ಕರ್ತವ್ಯ ಪ್ರಜ್ಞೆ ಮಧ್ಯೆ ತಾಯಿಯ ನಿರೀಕ್ಷೆ ಪೂರೈಸಲಾಗುತ್ತಿಲ್ಲ. ತಾಯಿ ನಿರೀಕ್ಷೆಗಳು ಮೇಲ್ನೋಟಕ್ಕೆ ಚಿಕ್ಕದ್ದಾಗಿದ್ದರೂ ಅವುಗಳನ್ನು ತಮಗೆ ಈಡೇರಿಸಲಾಗುತ್ತಿಲ್ಲ. ಹೆಂಡತಿಗಿಂತ ಹೆಚ್ಚು ಕಾಲ ತಾಯಿ ಜೊತೆಗೆ ಕಳೆದು ಅವರನ್ನು ಸಂತೋಷದಿಂದ ಇಡಬೇಕು ಎಂದು ಸಲಹೆ ನೀಡಿದರು. ವಿಪ ಸದಸ್ಯ, ಅವ್ವ ಸೇವಾ ಟ್ರಸ್ಟ್ ಅಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿದರು. ಶಾಸಕ ಎನ್.ಎಚ್. ಕೋನರೆಡ್ಡಿ, ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ಚನ್ನಪ್ಪ ಅಂಗಡಿ ಸೇರಿದಂತೆ ಮತ್ತಿತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement