ಪರಿಹಾರ ಧನ ಚೆಕ್ ವಿತರಣೆ
ಹುಬ್ಬಳ್ಳಿ: ಇಲ್ಲಿನ ಜೈಂಟ್ಸ್ ಇಂಟರ್‌ನ್ಯಾಷನಲ್ ಸಂಘದ ಪದಾಧಿಕಾರಿಗಳು ಈಚೆಗೆ ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಜಲಪ್ರಳಯದಲ್ಲಿ ನಿರಾಶ್ರಿತರಾದ ಜನರಿಗೆ ಸಂಗ್ರಹಿಸಿದ ಪರಿಹಾರದ ಧನದ ಚೆಕ್‌ನ್ನ್ನು ತಹಸೀಲ್ದಾರ್ ವಿ.ಆರ್. ಬಾಗೋಜಿ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಪದ್ಮಜಾ ಉಮರ್ಜಿ, ವಿ.ಜಿ. ಪಾಟೀಲ, ಆರ್.ವಿ. ಕವಿಶೆಟ್ಟಿ, ಡಾ.ವಿ.ಆರ್. ಗಲಗಲಿ, ಸಿ.ಜಿ. ಧಾರವಾಡಶೆಟ್ಟರ, ಡಿ.ಬಿ. ಜವಳಿ, ಎಸ್.ಎ. ಮಠದ, ಡಿ.ಸಿ. ಪಾಟೀಲ, ಓ.ಎಸ್. ಶಿವಳ್ಳಿ, ರಾಜು ಅನಗೊಡಿಮಠ, ಬಸವರಾಜ ಸುಳ್ಳದ, ವೀರೇಶ ಕವಿಶೆಟ್ಟಿ ಇದ್ದರು.
ದೆಹಲಿ ಪ್ರವಾಸಕ್ಕೆ ಆಯ್ಕೆ
ಧಾರವಾಡ: ಶಿಕ್ಷಣ ಫೌಂಡೇಶನ್ ವತಿಯಿಂದ ಪ್ರಾಥಮಿಕ ಶಾಲೆಯ ಸೃಜನಶೀಲ ವಿದ್ಯಾರ್ಥಿಗಳಿಗಾಗಿ ದೆಹಲಿ ಪ್ರವಾಸ ನಿಮಿತ್ತ ಏರ್ಪಡಿಸಿದ್ದ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹುಬ್ಬಳ್ಳಿ ತಾಲೂಕಿನ ಮಂಟೂರ ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ವಿದ್ಯಾರ್ಥಿ ಫರೀದಾ ಲಾಡ್ ಖಾನವರ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ಫರೀದಾಗೆ ಇಲ್ಲಿನ ಪಂ. ಪುಟ್ಟರಾಜ ಗವಾಯಿ ಕಲಾ ಪ್ರತಿಷ್ಠಾನ ಅಭಿನಂದನೆ ಸಲ್ಲಿಸಿದೆ. ಅಲ್ಲದೆ, ಶಾಲೆಯ ಗುರುಗಳು ಹಾಗೂ ಎಸ್‌ಡಿಎಂಸಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಂಥಾಲಯ ಸ್ಥಾಪನೆಯಾಗಲಿ
ಧಾರವಾಡ: ದೇಶದ ಪ್ರತಿಯೊಂದು ಹಳ್ಳಿಗಳಲ್ಲಿ ಗ್ರಂಥಾಲಯ ಸ್ಥಾಪನೆ ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಪಾಲಕ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವಸ್ಥಾನ ಹೀಗೆ ಅನೇಕ ಕಾಮಗಾರಿಗಳಿಗೆ ಹಣ ವ್ಯಯಿಸುವ ಬದಲು ಗ್ರಂಥಾಲಯ ಸ್ಥಾಪನೆ ಗೊಳಿಸಬೇಕು. ಗ್ರಂಥಾಲಯದಿಂದ ಅನೇಕರು ಶಿಕ್ಷತರಾಗಿ ಸಮಾಜ ಸುಧಾರಣೆಯಾಗುತ್ತದೆ ಎಂದರು. ಕಾಲೇಜಿನ ಗ್ರಂಥಪಾಲಕ ಮಂಜುನಾಥ ಲಮಾಣಿ ಮಾತನಾಡಿದರು. ಪ್ರೊ. ಎಸ್.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಜಿ.ಬಿ. ಮುರಗೋಡ, ಪ್ರೊ. ವಿಜಯಶ್ರೀ ಪಾಟೀಲ, ರಾಜೇಶ್ವರಿ ಕೆರಿಮಠ, ಶಿವಾಜಿ, ಶಿಲ್ಪಾ ಅಂಗಡಿ ಇದ್ದರು.
ನಿಂಗಣ್ಣ ಕುಂಟಿ ಆಯ್ಕೆ
ಹುಬ್ಬಳ್ಳಿ: ಸೆಪ್ಟೆಂಬರ್ 8ರಂದು ನಡೆಯಲಿರುವ ಅವಿಭಜಿತ ಧಾರವಾಡ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಂಗಣ್ಣ ಕುಂಟಿ ಆಯ್ಕೆಯಾಗಿದ್ದಾರೆ. ಭಾರತ ಸೇವಾದಳ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಕುಂಟಿ, ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ದಾಸ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ನಾರಾಯಣ ದೂಳಖೇಡ ಅವರು ಸಮ್ಮೇಳನದ ಸಮಾರೋಪದ ಅಧ್ಯಕ್ಷ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಚುಟುಕು ಸಾಹಿತ್ಯ ಪರಿಷತ್ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.