ಪ್ಲಾಸ್ಟಿಕ್ ಬಿಸಾಕಿ ಖಾದಿ ಧ್ವಜ ಕೈಲಿರಲಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 11
ಸ್ವಾತಂತ್ರೋತ್ಸವ, ಗಣರಾಜ್ಯ ದಿನ ಬಂದರೆ ಸಾಕು ಎಲ್ಲೆಡೆ ಪ್ಲಾಸ್ಟಿಕ್ ಧ್ವಜಗಳದ್ದೇ ಕಾರುಬಾರು.
ಸ್ವಾತಂತ್ರೋತ್ಸವ ದಿನಾಚರಣೆಯ ಕಾರ್ಯಕ್ರಮ ಪೂರ್ಣಗೊಳ್ಳುತ್ತಿದ್ದಂತೆಯೇ ರಸ್ತೆ ಪಕ್ಕದಲ್ಲೇ ಪ್ಲಾಸ್ಟಿಕ್ ಧ್ವಜ ಎಸೆದು ಹೋಗುವುದರಿಂದ ಪರಿಸರಕ್ಕೂ ಹಾಳು, ಧ್ವಜಕ್ಕೂ ಅಗೌರವ. ಹೀಗಾಗಿ ಪ್ಲಾಸ್ಟಿಕ್ ಧ್ವಜ ನಿಷೇಧಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡಬೇಕಿದೆ.
ಈ ಪ್ಲಾಸ್ಟಿಕ್ ಧ್ವಜಗಳ ಬಳಕೆ ಪರಿಸರಕ್ಕೆ ಮಾರಕ ಎಂಬುದು ಪರಿಸರವಾದಿಗಳ ಕಳಕಳಿ. ಪ್ಲಾಸ್ಟಿಕ್ ಧ್ವಜ, ಧ್ವಜ ಸಂಹಿತೆಗೆ ವಿರುದ್ಧವಾಗಿದ್ದು ಅದನ್ನು ಬೇಕಾಬಿಟ್ಟಿ ಬಳಸಿ, ಎಸೆಯುವುದು ಸಲ್ಲದು.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ಲಾಸ್ಟಿಕ್ ಧ್ವಜಗಳನ್ನ್ನು ಉಪಯೋಗಿಸುತ್ತಿದ ನಂತರ ಅವುಗಳನ್ನು ರಸ್ತೆ ಬದಿ ಅಥವಾ ಕಸದ ಬುಟ್ಟಿಗೆ ಎಸೆಯುವುದು ವಿಪರ್ಯಾಸ. ಇದರಿಂದ ರಾಷ್ಟ್ರಧ್ವಜಕ್ಕೆ ಅವಮಾನ ಮಾತ್ರ ಅಲ್ಲ, ಪರಿಸರಕ್ಕೂ ಹಾನಿ. ಸಂಬಂಧಪಟ್ಟವರು ಪ್ಲಾಸ್ಟಿಕ್ ಧ್ವಜಗಳನ್ನು ನಿಷೇಧಿಸಿ, ಖಾದಿಯ ತ್ರಿವರ್ಣ ಧ್ವಜಗಳ ಬಳಕೆಯನ್ನೂ ಕಡ್ಡಾಯಗೊಳಿಸಬೇಕು.
ಸ್ವಾತಂತ್ರ್ಯ ದಿನಾಚರಣೆಯ ದಿನ ಹಾಗೂ ಮುನ್ನ್ನಾ ದಿನಗಳಂದು ಜಿಲ್ಲೆಯಲ್ಲಿ ಎಲ್ಲಿಯೂ ಪ್ಲಾಸ್ಟಿಕ್ ಧ್ವಜ್ನ ಮಾರಾಟ ಮಾಡದಂತೆ ಹಾಗೂ ಬಳಸದಂತೆ ಕಡಿವಾಣ ಹಾಕಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ಲಾಸ್ಟಿಕ್ ಧ್ವಜದ ಬಳಕೆ ಎಲ್ಲಿಯೂ ಆಗಬಾರದು. ಇದಕ್ಕಾಗಿ ಯಾವುದೇ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಧ್ವಜಗಳ ಮಾರಾಟವಾಗಬಾರದು. ಸಾರ್ವಜನಿಕರು ಮತ್ತು ಮಕ್ಕಳು ಪ್ಲಾಸ್ಟಿಕ್ ಧ್ವಜ್ನ ಬಳಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ಸ್ವಾತಂತ್ರ್ಯ ದಿನಾಚರಣೆಗೆ ಇನ್ನೂ ಮೂರು ದಿವಸಗಳಿರುವಂತೆಯೇ ಪ್ಲಾಸ್ಟಿಕ್ನಿಂದ ತಯಾರಿಸಿದ ರಾಷ್ಟ್ರ ಧ್ವಜಗಳ ಮಾರಾಟ ಜಿಲ್ಲೆಯಲ್ಲಿ ಆರಂಭವಾಗಿದೆ. ಮಾಲ್ಗಳಲ್ಲಿ, ಮಾರುಕಟ್ಟೆಗಳಲ್ಲಿ, ಮೂಲೆಯಂಗಡಿಯಲ್ಲಿ, ಮುಖ್ಯವಾಗಿ ಟ್ರಾಫಿಕ್ ಸಿಗ್ನ್ನಲ್ನಲ್ಲಿ ಬಾವುಟ ಮಾರಾಟ ಕಾಣುತ್ತಿದೆ. ಸೈಕಲ್ ಹ್ಯಾಂಡಲ್ಲಿಗೆ, ಮೋಟರ್ ಬೈಕ್ ಕನ್ನ್ನಡಿಗೆ, ಕಾರುಗಳ ಡ್ಯಾಶ್ ಬೋರ್ಡಿಗೆ, ಆಟೋರಿಕ್ಷಾ ಹೆಗಲ ಮೇಲೆ, ಲಾರಿಗಳ ತಲೆ ಮೇಲೆ ಧ್ವಜಾರೋಹಣಕ್ಕೆ ಅಣಿಯಾಗಲು ವಾಹನ ಚಾಲಕರ ಬಾವುಟ ಖರೀದಿ ನಿಧಾನವಾಗಿ ಚುರುಕುಗೊಳ್ಳುತ್ತಿದೆ.
ನಮ್ಮ ಬದುಕಿನ ಎಲ್ಲ ಮಗ್ಗಲುಗಳಿಗೂ ಪ್ಲಾಸ್ಟಿಕ್ ಬಳಕೆ ನುಗ್ಗಿರುವುದರಿಂದ ಸಹಜವಾಗಿಯೇ ಅದು ನಮ್ಮ ರಾಷ್ಟ್ರಧ್ವಜವನ್ನೂ ಆವರಿಸದೆ ಬಿಟ್ಟಿಲ್ಲ. ಪ್ಲಾಸ್ಟಿಕ್ ಬಳಕೆ ಮಿತಿ ಮೀರಿರುವುದರಿಂದ ಮತ್ತು ಬಳಸಿ ಬಿಸಾಕಿದ ಪ್ಲಾಸ್ಟಿಕ್ ವಸ್ತುಗಳ ವಿಲೇವಾರಿ ಸಮಾಜಕ್ಕೆ ತಲೆನೋವಾಗಿರುವ ಅರಿವು ನಮಗಿದ್ದೇ ಇದೆ.
ಆದರೆ, ಅದರ ಹಾವಳಿಯಿಂದ ಬಿಡುಗಡೆಯಾಗುವ ಮಾರ್ಗೋಪಾಯಗಳು ಕಾಣಿಸುತ್ತಿಲ್ಲ.
ಮನುಕುಲಕ್ಕೆ ಅಪಾಯ ಒಡ್ಡುವ ಅಣು ತ್ಯಾಜ್ಯ ನಿರ್ವಹಣೆ ಕೌಶಲ್ಯಗಳನ್ನೇ ಕಲಿಯುತ್ತಿರುವ ಮಾನವ ಜುಜೂಬಿ ಪ್ಲಾಸ್ಟಿಕ್ ಭೂತದಿಂದ ಬಿಡಿಸಿಕೊಳ್ಳಲು ಹೆಣಗುತ್ತಿರುವುದು ವಿಪರ್ಯಾಸ. ಖಾದಿ ಬಟ್ಟೆಯಿಂದ ತಯಾರಿಸಿದ ಬಾವುಟದ ಮೈಮಾಟವೇ ಚೆನ್ನ. ಅದನ್ನೇ ಖರೀದಿಸಬೇಕು ಮತ್ತು ಹಾರಿಸಬೇಕು.
ಈ ಔದ್ಯೋಗಿಕ ಕೆಲಸಗಳನ್ನು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಡಬೇಕು. ಹಾಗಾದಲ್ಲಿ ಮಾತ್ರ ರೆಕ್ಸೀನು, ಪ್ಲಾಸ್ಟಿಕ್ಕು, ಪಾಲಿಥೀನ್ನಿಂದ ತಯಾರಿಸಿದ ರಾಷ್ಟ್ರ ಧ್ವಜಗಳನ್ನು ನಿರಾಕರಿಸುವುದು ಸುಲಭ.
ಧ್ವಜ ನೀತಿಸಂಹಿತೆಗನುಗುಣವಾಗಿ ಖಾದಿ ಬಟ್ಟೆಯಿಂದ ತಯಾರಿಸಿದ ಬಾವುಟಗಳನ್ನು ವಿದ್ಯಾರ್ಥಿಗಳೂ ಬಳಸುವಂತೆ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಹಾಗೂ ಮನೆಗಳಲ್ಲಿ ಪೋಷಕರು ತಿಳಿಹೇಳಬೇಕು.