ಭಾವನಾತ್ಮಕ ಚಿತ್ರದ ಹಾಸ್ಯ ಪ್ರೇಕ್ಷಕನಿಗೆ ಇಷ್ಟ: ನಟ ಶರಣ ಅಭಿಪ್ರಾಯ
ಹುಬ್ಬಳ್ಳಿ: ಹಾಸ್ಯ ಚಲನಚಿತ್ರಗಳಿಗೆ ಅಶ್ಲೀಲ ಪದ ಹಾಗೂ ಡಬಲ್ ಮೀನಿಂಗ್ ಅನಿವಾರ್ಯ ಅಲ್ಲ. ಸಂಬಂಧಗಳ ಮೌಲ್ಯಕ್ಕೆ ಪ್ರಾಧಾನ್ಯ ನೀಡುವ ಭಾವನಾತ್ಮಕ ಚಿತ್ರಗಳಲ್ಲಿನ ಹಾಸ್ಯವನ್ನೂ ಪ್ರೇಕ್ಷಕರು ಇಷ್ಟಪಡುತ್ತಾರೆ ಎಂದು ಕನ್ನಡ ಚಲನ ಚಿತ್ರದ ಹಾಸ್ಯ ನಾಯಕನಟ ಶರಣ್ ಅಭಿಪ್ರಾಯಪಟ್ಟಿದ್ದಾರೆ. ತಾವು ನಾಯಕ ನಟರಾಗಿ ನಟಿಸಿದ್ದ 'ವಿಕ್ಟರಿ' ಚಿತ್ರದ ಪ್ರಚಾರಕ್ಕಾಗಿ ಹುಬ್ಬಳ್ಳಿಗೆ ಭಾನುವಾರ ಆಗಮಿಸಿದ್ದ ಶರಣ್, ಮಾಧ್ಯಮ ಪ್ರತಿನಿಧಿಗಳೊಂದಿಗೆ ಚಿತ್ರದ ಕುರಿತ ತಮ್ಮ ಅಭಿಪ್ರಾಯ ಹಂಚಿಕೊಂಡರು. ಆ. 23ರಂದು ರಾಜ್ಯಾದ್ಯಂತ ವಿಕ್ಟರಿ ಚಿತ್ರ ಬಿಡುಗಡೆಗೊಳ್ಳಲಿದೆ. ಚಿತ್ರಕ್ಕೆ ಹಾಡುಗಳೇ ಜೀವಾಳ. ಯೋಗರಾಜ ಭಟ್ ಅವರು ರಚಿಸಿರುವ 'ಖಾಲಿ ಕ್ವಾಟರ್ ಬಾಟಲು...' ಗೀತೆಯಂತೂ ಚಿತ್ರ ಬಿಡುಗಡೆ ಮುನ್ನವೇ ಜನಪ್ರಿಯತೆ ಗಳಿಸಿದೆ. ಇದು ನಾಯಕ ನಟನಾಗಿ ನಟಿಸುತ್ತಿರುವುದು ಎರಡನೇ ಚಿತ್ರ. ಮೊದಲ ಚಿತ್ರ ರ್ಯಾಂಬೋ ಸಹ ಯಶಸ್ವಿಯಾಗಿದ್ದು, ವಿಕ್ಟರಿ ಚಿತ್ರವೂ ಜಯ ಗಳಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಕ್ಟರಿ ಚಿತ್ರದಲ್ಲಿ ಕೇವಲ ಹಾಸ್ಯಕ್ಕೆ ಪ್ರಾಮುಖ್ಯ ನೀಡಿಲ್ಲ. ಚಿತ್ರದ ಕಥೆಯೂ ಉತ್ತಮವಾಗಿದ್ದು, ಪ್ರೇಕ್ಷರನ್ನು ನಿರಾಸೆಗೊಳಿಸುವುದಿಲ್ಲ ಎಂದರು. ಚಿತ್ರದ ನಿರ್ದೇಶಕ ನಂದಕಿಶೋರ್ ಮಾತನಾಡಿ, ರಾಜ್ಯದ ಹೊರಗಡೆಯೂ ವಿಕ್ಟರಿ ಚಿತ್ರದ ಹಾಡುಗಳು ಜನಪ್ರಿಯಗೊಂಡಿದ್ದಾಗಿ ತಿಳಿಸಿದರು. ರಾಜ್ಯದ 100ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ವಿಕ್ಟರಿ ತೆರೆ ಕಾಣಲಿದೆ ಎಂದು ನಿರ್ಮಾಪಕ ಶ್ಯಾಮ್ ಚಾಬ್ರಿಯಾ ಹೇಳಿದರು. ನಾಯಕ ನಟಿ ಅಸ್ಮೀತಾ ಸೂದ್ ಮಾತನಾಡಿ, ಕನ್ನಡದಲ್ಲಿ ಇದು ತಮ್ಮ ಮೊದಲ ಚಿತ್ರ ಎಂದರು.