ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಆಧಾರ್ ಅವಲಂಬಿತರಿಗೆ ನೇರ ನಗದು ವರ್ಗಾವಣೆ

Lingaraj Badiger
Updated On : 13 Aug 2013, 10:54 am

ಧಾರವಾಡ: ಕೇಂದ್ರ ಸರ್ಕಾರದ ನೇರ ನಗದು ವರ್ಗಾವಣೆ ಯೋಜನೆಯ ಪೂರ್ಣ ಹೊಣೆಗಾರಿಕೆಯು ಆಯಾ ಇಲಾಖೆಗಳದ್ದೇ ಆಗಿದೆ. ಜಿಲ್ಲಾಧಿಕಾರಿಗಳ ಕಚೇರಿಯು ಸಂಬಂಧಿತ ಇಲಾಖೆ ಸಂಸ್ಥೆಗಳ ನಡುವೆ ಸಮನ್ವಯತೆ ಸಾಧಿಸಲು ಮಾತ್ರ ಬದ್ಧ ಎಂದು ಜಿಲ್ಲಾಧಿಕಾರಿ ಸಮೀರ ಶುಕ್ಲ ಸ್ಪಷ್ಟಪಡಿಸಿದ್ದಾರೆ.
ಆಧಾರ್ ಅವಲಂಬಿತ ನೇರ ನಗದು, ವರ್ಗಾವಣೆ ಕುರಿತ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ಸರ್ಕಾರದ ಆದೇಶ ಮೇರೆಗೆ ಜಿಲ್ಲಾಧಿಕಾರಿ ಕಚೇರಿಯೇ ಈ ಯೋಜನೆ ಜಾರಿಗೊಳಿಸಬೇಕಾಗಿದೆ ಎನ್ನುವ ಕಲ್ಪನೆ ತೆಗೆದುಹಾಕಿ. ವಿವಿಧ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸಬೇಕಾದ ನಗದು ಸೌಲಭ್ಯಗಳನ್ನು ಇನ್ನು ಮೇಲೆ ಆಧಾರ್ ಅವಲಂಬಿಸಿದ್ದರಿಂದ ಆಯಾ ಇಲಾಖೆ ಜಿಲ್ಲಾ ಮುಖ್ಯಸ್ಥರು ಈ ಕುರಿತು ಕ್ರಿಯಾ ತಂಡ ರಚಿಸಿ ಜವಾಬ್ದಾರಿ ನೀಡಿ ಜನರಿಗೆ ಸರಿಯಾದ ಸಮಯದಲ್ಲಿ ಯೋಜನೆ ಸೌಲಭ್ಯ ದೊರಕಿಸುವಂತೆ ಕಾರ್ಯನಿರ್ವಹಿಸಲು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೇಂದ್ರೀಕೃತ ಡಾಟಾಬೇಸ್ ವ್ಯವಸ್ಥೆ ಇರುವುದಿಲ್ಲ. ಜಿಲ್ಲೆಯಲ್ಲಿ 9.82 ಲಕ್ಷ ಜನರಿಗೆ ಆಧಾರ್ ನೋಂದಣಿ ಆದರೂ ಇನ್ನೂ ಬಹಳಷ್ಟು ಜನರಿಗೆ ಆಧಾರ್ ಸಂಖ್ಯೆ ಲಭ್ಯವಾಗಿಲ್ಲ. ಫಲಾನುಭವಿಗಳಿಗೆ ಆಧಾರ್ ಸಂಖ್ಯೆ ನೀಡುವ ಪ್ರಕ್ರಿಯೆಯಲ್ಲಿ ತುಂಬ ವಿಳಂಬವಾಗುತ್ತಿದೆ. ಇಲಾಖೆಗಳಿಂದ ಬ್ಯಾಂಕುಗಳಿಗೆ ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಸೀಡಿಂಗ್ ಸಂದರ್ಭದಲ್ಲಿ ನೀಡಬೇಕಾದ ಅಗತ್ಯ ದಾಖಲೆಗಳ ಕುರಿತು ಸ್ಪಷ್ಟತೆ ಇಲ್ಲ ಎಂಬ ಅಂಶಗಳನ್ನು ಹಾಗೂ ವಿಶ್ವವಿದ್ಯಾಲಯಗಳಿಂದ ಜಾರಿಗೊಳಿಸುವ ನೇರ ನಗದು ವರ್ಗಾವಣೆ ಸಮನ್ವಯತೆಯನ್ನು ಜಿಲ್ಲಾಡಳಿತದ ಬದಲು ನೇರವಾಗಿ ರಾಜ್ಯ ಕೇಂದ್ರೀಕೃತ ವ್ಯವಸ್ಥೆಗೆ ಬದಲಾಯಿಸುವಂತೆ ಈ ಸಂದರ್ಭ ಪಾಲ್ಗೊಂಡಿದ್ದ ಪ್ರಧಾನ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ ಹಾಗೂ ಇ-ಆಡಳಿತದ ಸಿಇಒ ಡಾ೤ ರವೀಂದ್ರ ಹಾಗೂ ಆಧಾರ್ ಯೋಜನೆ ಅಧಿಕಾರಿ ಕೆ.ಕೆ. ಶರ್ಮಾ ಅವರುಗಳಿಗೆ ಯೋಜನಾ ಜಾರಿಯ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳು ವಿವರಿಸಿದರು.
ಮಾರ್ಪಾಡು ಮಾಡುತ್ತಿದೆ: ಪ್ರಧಾನ ಕಾರ್ಯದರ್ಶಿ ಪ್ರಸಾದ ಮಾತನಾಡಿ, ಕಳೆದ ವರ್ಷ ಈ ಯೋಜನಾ ಜಾರಿಯಲ್ಲಿನ ಅಡೆತಡೆಗಳನ್ನು ಕಂಡು ಅದರ ಅನುಭವ ಆಧರಿಸಿ ಹಲವಾರು ಮಾರ್ಪಾಡು ಮಾಡಲಾಗುತ್ತಿದೆ. ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಇಲಾಖೆ, ಬ್ಯಾಂಕ್ ಸಂಸ್ಥೆಗಳ ನಡುವೆ ಸಮನ್ವಯ ಹಾಗೂ ಸಹಕಾರ ಹೆಚ್ಚು ಬಲಗೊಳಿಸಲು ಕ್ರಮ ಜರುಗಿಸಲಾಗುತ್ತಿದೆ.
ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಒಂದು ತಾಂತ್ರಿಕ ತಂಡದ ನಿಯೋಜನೆ ಮಾಡಲಾಗುವುದು. ಎಲ್ಲ ಇಲಾಖೆ, ಬ್ಯಾಂಕುಗಳು ಯೋಜನೆ ಸಂಬಂಧಿತ ದತ್ತಾಂಶ ಪಡೆಯಲು ಹಾಗೂ ತಮ್ಮಲ್ಲಿ ಉತ್ಪನ್ನಗೊಳ್ಳುವ ದತ್ತಾಂಶವನ್ನು ಅಪಲೋಡ್ ಮಾಡಲು ಸೆಂಟ್ರಲೈಜಸ್ ಆದ ವೆಬ್‌ಸೈಟ್ ಪೋಲ್ಡರ್‌ನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಡಾ೤ ರವೀಂದ್ರನ್ ಜಿಲ್ಲೆ ಯೋಜನಾ ವರದಿ ಪರಿಶೀಲಿಸಿ ಮಾತನಾಡಿ, ಪ್ರಸಕ್ತವೂ ಕಳೆದ ವರ್ಷದಂತೆ ಹಣ ವರ್ಗಾವಣೆ ಎಲ್ಲವೂ ಆಧಾರ್ ಅವಲಂಬಿತ ನೇರ ನಗದು ವರ್ಗಾವಣೆ ಮೂಲಕವೇ ಆಗಬೇಕು. ಅದಕ್ಕಾಗಿ ಜಿಲ್ಲೆಯಲ್ಲಿ 16 ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಇಲಾಖೆಗಳು ಒಬ್ಬ ಸಮನ್ವಯ ಅಧಿಕಾರಿ ನೇಮಿಸಬೇಕು. ಯೋಜನಾವಾರು ಫಲಾನುಭವದ ಪಟ್ಟಿ, ಅವರುಗಳ ಕುರಿತು ಅವಶ್ಯಕ ದಾಖಲೆ ಅಂಶಗಳು ಇರುವ ದತ್ತಾಂಶ ತಯಾರಿಕೆ ಹಾಗೂ ಅಂತಿಮವಾಗಿ ಬ್ಯಾಂಕಿನೊಂದಿಗೆ ಅವರ ಆಧಾರ್ ಸಂಖ್ಯೆ ಆಧರಿಸಿ ಹಣ ವರ್ಗಾಯಿಸುವ ಎಲ್ಲ ಅಂಶಗಳನ್ನು ಹೊಣೆಗಾರಿಕೆಯಿಂದ ನಿಭಾಯಿಸಬೇಕು. ಈ ಕುರಿತಂತೆ ಮುಂದಿನ ವಾರಾಂತ್ಯದೊಳಗೆ ಅಧಿಕಾರಿಗಳ ಸಭೆಯನ್ನು ಧಾರವಾಡದಲ್ಲಿ ಜರುಗಿಸುವುದಾಗಿ ತಿಳಿಸಿದರು.
ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಗರಾಭಿವೃದ್ಧಿ ಕೋಶದ ಉಪನಿರ್ದೇಶಕ ಎಸ್.ಎಸ್. ಬಿರಾದಾರ, ಆಧಾರ್ ವಿಭಾಗದ ಸಂಯೋಜನಾಧಿಕಾರಿ ಮಲ್ಲಿಕಾರ್ಜುನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement