ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಾಲುವೆಗೆ ಬಿಟ್ಟ ನೀರು ನಿಲ್ಲಿಸಿ

Lingaraj Badiger
Updated On : 13 Aug 2013, 11:05 am

ಕನ್ನಡಪ್ರಭ ವಾರ್ತೆ, ನರಗುಂದ, ಆ. 12
ನೀರಾವರಿ ಇಲಾಖೆ ಅಧಿಕಾರಿಗಳು ಕೇವಲ ಕಾಟಾಚಾರಕ್ಕೆ ಎಂಬಂತೆ ಮಲಪ್ರಭಾ ಬಲದಂಡೆ ಕಾಲುವೆಗೆ ಸದ್ಯ ನೀರು ಬಿಟ್ಟಿದ್ದು, ಇದರಿಂದ ರೈತರಿಗೆ ಯಾವುದೇ ಲಾಭವಿಲ್ಲ. ಹೀಗಾಗಿ ತಕ್ಷಣವೇ ನೀರು ಬಿಟ್ಟಿರುವುದನ್ನು ಸ್ಥಗಿತಗೊಳಿಸಿ, ಹಿಂಗಾರು ಬಿತ್ತನೆ ಸಂದರ್ಭದಲ್ಲಿ ಸಮರ್ಪಕ ರೀತಿಯಲ್ಲಿ ನೀರನ್ನು ಬಿಡಬೇಕು ಎಂದು ಆಗ್ರಹಿಸಿ ಸೋಮವಾರ ತಾಲೂಕಿನ ಚಿಕ್ಕ ನರಗುಂದ ರೈತರು ನೀರಾವರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನಂತರ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ವೀರನಗೌಡ ಚನ್ನಪ್ಪಗೌಡ್ರ, ಸತತವಾಗಿ 3 ವರ್ಷದಿಂದ ಬರಗಾಲದ ಆವರಿಸಿದೆ. ಮಲಪ್ರಭಾ ಜಲಾಶಯವೂ ಇಲ್ಲಿಯವರೆಗೂ ಭರ್ತಿಯಾಗಿಲ್ಲ. ಇಂತಹ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಕುಳಿತು ಮಲಪ್ರಭಾ ಜಲಾಶಯದಿಂದ ಕಾಲುವೆಗೆ ನೀರು ಬಿಡಬೇಕೆಂದು ನಿರ್ಣಯ ತೆಗೆದುಕೊಂಡಿರುವುದು ಖಂಡನೀಯ. ಜಿಲ್ಲೆಯ ಸಚಿವರು, ಶಾಸಕರು ಈ ಭಾಗದ ರೈತರ ಅಭಿಪ್ರಾಯ ಸಂಗ್ರಹಿಸದೇ ತಮಗೆ ತಿಳಿದ ರೀತಿ ವರ್ತಿಸುವುದನ್ನು ರೈತರು ಸಹಿಸುವುದಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ರೈತರಿಗೆ ಲಾಭವಿಲ್ಲ
ಸದ್ಯ ಜಲಾಶಯದಲ್ಲಿ ಒಂದು ಬೆಳೆಗೆ ಸಾಕಾಗುವಷ್ಟು ನೀರಿದೆ, ಕೆಲ ರಾಜಕೀಯ ನಾಯಕರು, ದೊಡ್ಡ ದೊಡ್ಡ ಗೊಬ್ಬರ, ಕ್ರಿಮಿನಾಶಕ, ಬೀಜ ಮಾರಾಟಗಾರರ ಅಂಗಡಿ ವ್ಯಾಪಾರಸ್ಥರ ಮಾತು ಕೇಳಿ ಈ ರೀತಿ ಮಾಡುತ್ತಿದ್ದಾರೆ. ಇದೇ ಆ. 14ರಂದು ನೀರು ಬಿಡುವ ಬಗ್ಗೆ ನವಿಲು ತೀರ್ಥದಲ್ಲಿ ಸಭೆ ಇದ್ದರೂ ಅದನ್ನು ಧಿಕ್ಕರಿಸಿ ಕಾಲುವೆಗೆ ನೀರು ಬಿಡಬೇಕೆಂದು ಜಲಾಶಯ ಅಧಿಕಾರಿಗಳಿಗೆ ತಿಳಿಸಿದ್ದರಿಂದ ಕಾಲುವೆಗೆ ನೀರು ಬಿಟ್ಟಿದ್ದಾರೆ. ಇದರಿಂದ ಹೆಚ್ಚು ರೈತರಿಗೆ ಲಾಭಕ್ಕಿಂತ ನಷ್ಟವೇ ಆಗಲಿದೆ ಎಂದು ತಿಳಿಸಿದರು.
ಮುಂಗಾರು ಈಗಾಗಲೇ ಮುಗಿಯವ ಹಂತಕ್ಕೆ ಬಂದಿದೆ, ಈ ಭಾಗದಲ್ಲಿ ಶೇ. 29ರಷ್ಟು ರೈತರು ಮಾತ್ರ ಬಿತ್ತನೆ ಮಾಡಿದ್ದಾರೆ. ಇನ್ನುಳಿದ ರೈತರು ಬಿತ್ತನೆ ಮಾಡಿಲ್ಲ. ಹಾಗಾಗಿ ಈಗ ಕಾಲುವೆಗೆ ನೀರು ಬಿಟ್ಟರೆ ಯಾವುದೇ ಪ್ರಯೋಜನವಿಲ್ಲ. ಜಲಾಶಯದಲ್ಲಿರುವ ನೀರನ್ನು ಹಾಳು ಮಾಡಲು ಅಧಿಕಾರಿಗಳು ಹೊರಟಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ಈ ಕುರಿತು ನೀರು ಬಳಕೆದಾರರ ಸಂಘದ ಅಧ್ಯಕ್ಷರಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ರಸ್ತೆತಡೆ ನಡೆಸಲಾಯಿತು ಎಂದು ಹೇಳಿದರು.
ಪ್ರಯಾಣಿಕರಿಗೆ ತೊಂದರೆ: ರಸ್ತೆತಡೆ, ಪ್ರತಿಭಟನೆ ಹೆಚ್ಚಾಗಿದ್ದರಿಂದ ದೂರದ ಊರುಗಳಿಗೆ, ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಯಿತು. ನಂತರ ಸಿಪಿಐ ಸಿದ್ದನಗೌಡ ಹಾಗೂ ತಹಸೀಲ್ದಾರ್ ಮಧ್ಯಸ್ಥಿಕೆಯಲ್ಲಿ ಪ್ರತಿಭಟನೆಯನ್ನು ಕೈ ಬಿಟ್ಟರು. ಪಡಿಯಪ್ಪ ಬಾಚಿ, ಶಿವಪ್ಪ ಗಣೇಶ, ಕರಿಯಪ್ಪ ಕಲಹಾಳ, ಬಸವರಾಜ ಹೊಂಗಲ, ರವಿ ಯರಗಟ್ಟಿ, ನಿಂಗಪ್ಪ ಯರಗಟ್ಟಿ, ಮೋಹನ ಬಾಚಿ, ಬಸನಗೌಡ ಮಾದಗೌಡ್ರ, ಮಲಕಾಜಿ ಸಾತಣ್ಣವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement