ರಿಕ್ರಿಯೇಶನ್ ಕ್ಲಬ್ ಹೆಸರಲ್ಲಿ ಮೈದಾನ ಕಬಳಿಕೆ ಆರೋಪ
ಹುಬ್ಬಳ್ಳಿ: ದೇಶಪಾಂಡೆ ನಗರದ ರು. 140 ಕೋಟಿ ಮೌಲ್ಯದ 8 ಎಕರೆ ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನವನ್ನು ರಿಕ್ರಿಯೇಶನ್ ಕ್ಲಬ್ ಹೆಸರಿನಲ್ಲಿ ಕಬಳಿಸುವ ಹುನ್ನಾರ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಪ್ರದೀಪ ಶೆಟ್ಟರ್ ಹಾಗೂ ಅವರ ಬೆಂಬಲಿಗರಿಂದ ನಡೆದಿದೆ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ನಾಡೋಜ ಡಾ. ಪಾಟೀಲ ಪುಟ್ಟಪ್ಪ ನೇತೃತ್ವದಲ್ಲಿ 35ಕ್ಕೂ ಹೆಚ್ಚು ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿದವು.
ಬ್ರಿಟೀಷ್ ಸರ್ಕಾರ 1924ರಲ್ಲಿ ಈ ಮೈದಾನವನ್ನು ನೀಡುವಾಗ ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಬಳಸುವಂತೆ ತಾಕೀತು ಮಾಡಿತ್ತು. ನಂತರ ಮುಂಬಯಿ ಸರ್ಕಾರವೂ ಇದೇ ಶರತ್ತನ್ನು ವಿಧಿಸಿತ್ತು. ಆದರೆ ರಿಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಜಾಗ ಕಬಳಿಸಿ ತಮ್ಮ ಮೋಜಿನ ಅಡ್ಡೆ ಮಾಡಿಕೊಳ್ಳಲು ಶೆಟ್ಟರ್ ಮತ್ತವರು ಕೆಲ ಬೆಂಬಲಿಗರು ಹೊರಟಿದ್ದಾರೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನದ ಮುಖ್ಯ ದ್ವಾರದಲ್ಲಿ ಸುಮಾರು ಒಂದು ತಾಸಿಗೂ ಹೆಚ್ಚು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಬಳಿಕ ರಸ್ತೆ ತಡೆ ನಡೆಸಿ ಆಕ್ರೋಶ ಹೊರಗೆಡವಿದರು. ನಂತರ ಪ್ರತಿಭಟನಾ ರ್ಯಾಲಿ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮೈದಾನದ ಜಾಗ ಉಳಿಸಿಕೊಡುವಂತೆ ಮನವಿ ಸಲ್ಲಿಸಿದರು.
ಪಾಪು ಛಾಟಿ: ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪಾಟೀಲ ಪುಟ್ಟಪ್ಪ, ಸಾರ್ವಜನಿಕರು ಹಾಗೂ ಕ್ರೀಡಾಪಟುಗಳ ಅನುಕೂಲಕ್ಕಾಗಿ ಸರ್ಕಾರ ನೀಡಿರುವ ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನ ಕಬಳಿಸುತ್ತಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಸಂಸದ ಪ್ರಹ್ಲಾದ ಜೋಶಿ ಅವರಿಗೆ ಧೈರ್ಯ ಇದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ದರ್ಪಣ ಜೈನ್ ಅವರು ಅಂದಿನ ಬಿಜೆಪಿ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ ಹಾಗೂ ಇತರ ಬಿಜೆಪಿ ಮುಖಂಡರ ಒತ್ತಡಕ್ಕೆ ಮಣಿದು ಮೈದಾನವನ್ನು ರಿಕ್ರಿಯೇಷನ್ ಕ್ಲಬ್ಗೆ ನೀಡುವ ಮೂಲಕ ಸಾರ್ವಜನಿಕರಿಗೆ ಅನ್ಯಾಯ ಮಾಡಿದ್ದಾರೆ.
ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನ ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಮುಕ್ತಗೊಳಿಸುವವರೆಗೂ ಯಾವುದೇ ಕಾರಣಕೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. ರಾಜ್ಯ ಸರ್ಕಾರವೂ ಸಹ ಮಧ್ಯೆ ಪ್ರವೇಶಿಸಿ ಈ ಮೈದಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಮೈದಾನದ ಜಾಗ ಉಳಿಸಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯವರಿಗೆ ಫೋನ್ ಕರೆ ಮಾಡಿ ತಿಳಿಸಿದ್ದಾಗಿ ಹೇಳಿದ ಪಾಟೀಲ ಪುಟ್ಟಪ್ಪ, ಸಿದ್ಧರಾಮಯ್ಯ ಸೂಕ್ತ ಪ್ರತಿಕ್ರಿಯೆ ನೀಡಿದ್ದಾಗಿಯೂ ಹೇಳಿದರು. ಮೈದಾನ ಕ್ರೀಡಾಪಟುಗಳಿಗೆ ಮುಕ್ತವಾಗುವವರೆಗೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.
ಜೀವ ಬೆದರಿಕೆ: ಸ್ಪೋರ್ಟ್ಸ್ ಮೈದಾನ ಬಚಾವೋ ಸಮಿತಿಯ ಸಿ.ಬಿ. ಲಕ್ಷ್ಮೀನಾರಾಯಣ ಹೆಗಡೆ ಮಾತನಾಡಿ, 2008ರಲ್ಲಿಯೇ ಈ ಮೈದಾನ ಅತಿಕ್ರಮಣದ ವಿರುದ್ಧ ಹೋರಾಟ ಪ್ರಾರಂಭಿಸಲಾಗಿತ್ತು. ಆದರೆ ಅಂದಿನ ಸಮಿತಿ ಅಧ್ಯಕ್ಷ ಬೇವಿನಮರದ ಅವರಿಗೆ ಜೀವ ಬೆದರಿಕೆ ಒಡ್ಡಲಾಗಿತ್ತು. ಆಗಿನ ಬಿಜೆಪಿ ಸರ್ಕಾರ ತಮ್ಮ ಹೋರಾಟ ಹತ್ತಿಕ್ಕಿತ್ತು ಎಂದು ಆರೋಪಿಸಿದರು.
ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ತಮ್ಮ ಸಮಿತಿ ಪದಾಧಿಕಾರಿಗಳು ಅವರನ್ನು ಭೇಟಿ ಮಾಡಿ, ಮೈದಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಮನವಿ ಮಾಡಲಾಗಿತ್ತು. ಈ ಕುರಿತು ಮಾತನಾಡಲು ಮನೆಗೆ ಬರುವಂತೆ ಶೆಟ್ಟರ್ ಆಹ್ವಾನಿಸಿದ್ದರು. ಮೈದಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಮಾತುಗಳು ಬಹಿರಂಗವಾಗಿ ನಡೆಯಲಿ. ಮನೆಯಲ್ಲಿ ಅಲ್ಲ ಎಂದರು.
ಡಾ. ಮಹೇಶ ನಾಲವಾಡ ಮಾತನಾಡಿ, ಹುಬ್ಬಳ್ಳಿ ಜನತೆ ಹಗಲು ರಾತ್ರಿ ಕೆಲಸ ಮಾಡಿ ಜಗದೀಶ ಶೆಟ್ಟರ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಆದರೆ ಶೆಟ್ಟರ್ ಹಾಗೂ ಅವರ ಬಳಗ ಮಾತ್ರ ಹುಬ್ಬಳ್ಳಿ ಅಭಿವೃದ್ಧಿಗೆ ಯಾವುದೇ ಕಾರ್ಯ ಮಾಡದೇ, ಇಲ್ಲಿರುವ ಆಸ್ತಿಗಳನ್ನು ಕಬಳಿಸುವ ಹುನ್ನಾರ ನಡೆಸಿದೆ. ಸುಮಾರು ರು. 140 ಕೋಟಿ ಮೌಲ್ಯದ 8 ಎಕರೆ ಮೈದಾನದ ಜಾಗವನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಪ್ರದೀಪ ಶೆಟ್ಟರ್ ಹಾಗೂ ಅವರ ಬೆಂಬಲಿಗರು ಕಬಳಿಸಲು ಮುಂದಾಗಿದ್ದಾರೆ ಎಂದು ದೂರಿದರು.
ನಮ್ಮವರೇ ಮುಖ್ಯಮಂತ್ರಿ ಆದರೆಂದು ಬೀಗುತ್ತಿದ್ದ ಹುಬ್ಬಳ್ಳಿ ಜನ ಈಗ ಅಂತವರು ಮುಖ್ಯಮಂತ್ರಿಯಾಗಿದ್ದಕ್ಕೆ ಅಸಹ್ಯಪಟ್ಟುಕೊಳ್ಳುತ್ತಿದ್ದಾರೆಂದು ಖೇದ ವ್ಯಕ್ತಪಡಿಸಿದರು.
ಕರವೇ ತಾಲೂಕಾಧ್ಯಕ್ಷ ಅಮೃತ ಇಜಾರಿ, ಗಜಾನನ ಮಹಾಮಂಡಳದ ಡಿ. ಗೋವಿಂದರಾವ್, ಜಿ. ದೇವಕಿ, ಎಪಿಎಂಸಿ ಸದಸ್ಯ ರಾಜಶೇಖರ ಮೆಣಸಿನಕಾಯಿ, ಮಹಾನಗರ ಪಾಲಿಕೆ ಸದಸ್ಯ ಮೋಹನ ಹಿರೇಮನಿ, ನ್ಯಾಯವಾದಿ ಮನೋಜ ಹಾನಗಲ್, ಗೋವಿಂದ ಮಡಿವಾಳ, ಅನ್ವರ ಮುಧೋಳ, ಶ್ರೀಧರ ರಡ್ಡೇರ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಧಾರವಾಡ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್, ಗಜಾನನ ಮಹಾಮಂಡಳ, ಉತ್ತರ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾ ಎಂಜನಿಯರ್ಸ್ ಸಂಘ, ಹೋಮ್ ಯುಥ್ ಕ್ಲಬ್, ನರೇಂದ್ರ ಯುವಕ ಮಂಡಳ, ಸತ್ಯ ಶೋಧನಾ ಸಮಿತಿ, ಕರ್ನಾಟಕ ಮಹಿಳಾ ಮಂಡಳ, ಕನ್ನಡ ಕ್ರಾಂತಿ ದೀಪ, ಆಮ್ ಆದ್ಮಿ ಪಕ್ಷ ಸೇರಿದಂತೆ 35ಕ್ಕೂ ಹೆಚ್ಚಿನ ಸಂಘ-ಸಂಸ್ಥೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಏನಿದು ಪ್ರಕರಣ?
ಹುಬ್ಬಳ್ಳಿಯ ಹೃದಯ ಭಾಗದಲ್ಲಿ ಸವಾಯಿ ಗಂಧರ್ವ ಸಭಾಭವನಕ್ಕೆ ಹೊಂದಿಕೊಂಡಂತೆ ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನವಿದೆ. 8 ಎಕರೆ ವಿಸ್ತಾರದ ಈ ಮೈದಾನವನ್ನು ಭವಿಷ್ಯತ್ತಿನಲ್ಲಿಯೂ ಕ್ರೀಡಾ ಚಟುವಟಿಕೆಗೆ ಮಾತ್ರ ಬಳಸತಕ್ಕದ್ದು ಎಂದು 1924ರಲ್ಲಿ ಬ್ರಿಟಿಷ್ ಸರ್ಕಾರ ನಿಯಮ ರೂಪಿಸಿತ್ತು. ಅದರಂತೆ ಇಲ್ಲಿ ಶಾಲಾ-ಕಾಲೇಜುಗಳ ಕ್ರೀಡಾಕೂಟ ಸೇರಿದಂತೆ ಸಾರ್ವಜನಿಕ ಕ್ರೀಡಾಕೂಟಗಳು ನಡೆಯುತ್ತಿದ್ದವು. ಹೀಗಿರುವಾಗ ಹುಬ್ಬಳ್ಳಿಯವರೇ ಆದ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾದ ಬಳಿಕ ಶೆಟ್ಟರ್ ಸೇರಿದಂತೆ ಸಂಸದ ಪ್ರಹ್ಲಾದ ಜೋಶಿ, ಪ್ರದೀಪ ಶೆಟ್ಟರ್, ಗೋವಿಂದ ಜೋಶಿ, ನಂದಕುಮಾರ, ವೀರಣ್ಣ ಸವಡಿ ಸದ್ದುಗದ್ದಲವಿಲ್ಲದೇ ಮೈದಾನವನ್ನು ರಿಕ್ರಿಯೇಶನ್ ಕ್ಲಬ್ ಎಂದು ಮಾಡಿಕೊಂಡು, ಇಡೀ ಮೈದಾನವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು. ಸಾಲದ್ದಕ್ಕೆ ಮೈದಾನದೊಳಕ್ಕೆ ಸಾರ್ವಜನಿಕ ಪ್ರವೇಶ ನಿಷಿದ್ಧಗೊಳಿಸಿದರು. ಏತನ್ಮಧ್ಯೆ ಬಿಜೆಪಿಯವರೇ ಸೇರಿಕೊಂಡು ರಿಕ್ರಿಯೇಶನ್ ಕ್ಲಬ್ ಮಾಡಿಕೊಂಡರೆ ಸಾರ್ವಜನಿಕ ವಿರೋಧ ವ್ಯಕ್ತವಾಗುತ್ತದೆ ಎಂಬ ಮುಂದಾಲೋಚನೆಯಿಂದ ವಸಂತ ಹೊರಟ್ಟಿ, ಮಹೇಂದ್ರ ಸಿಂಘಿ, ರಾಜಾ ದೇಸಾಯಿಯಂಥ ರಾಜಕಾರಣಿಗಳನ್ನು ಕ್ಲಬ್ ನಿರ್ದೇಶಕ ಮಂಡಳಿಯಲ್ಲಿ ಸೇರಿಸಿಕೊಂಡರು. ಜತೆಗೆ ತಮಗೆ ಬೇಕಾದವರಿಗೆ ಸದಸ್ಯತ್ವ ಕೊಡಿಸಿದರು. ಸದಸ್ಯತ್ವ ಪಡೆದವರಿಗೆ ಮಾತ್ರ ಮೈದಾನದೊಳಕ್ಕೆ ಪ್ರವೇಶ ಎನ್ನುವ ಸ್ವಲಿಖಿತ ನಿಯಮ ಮಾಡಿಕೊಂಡರು. ಇಷ್ಟು ಸಾಲದು ಎಂಬಂತೆ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಮೋಜು ಮಸ್ತಿ ಮಾಡಲು ಕಟ್ಟಡವನ್ನೂ ನಿರ್ಮಿಸುತ್ತಿದ್ದಾರೆ. ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಾಡೋಜ ಡಾ. ಪಾಟೀಲ ಪುಟ್ಟಪ್ಪನವರೂ ಈ ಅಕ್ರಮದ ವಿರುದ್ಧ ದನಿ ಎತ್ತಿದ್ದಾರೆ. ಪುಟ್ಟಪ್ಪನವರ ನೇತೃತ್ವದಲ್ಲಿ ಹೋರಾಟ ಉಗ್ರ ರೂಪ ಪಡೆದಿದೆ. ಶೆಟ್ಟರ್ ಮತ್ತವರ ಬೆಂಬಲಿಗರ ಹಕೀಕತ್ತು ಅರಿಯದಾಗಿದ್ದ ಕಾಂಗ್ರೆಸ್ ಮುಖಂಡ ಮಹೇಂದ್ರ ಸಿಂಘಿ ಕ್ಲಬ್ನ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ವಸಂತ ಹೊರಟ್ಟಿ, ರಾಜಾ ದೇಸಾಯಿ ಕೂಡ ಕ್ಲಬ್ನಿಂದ ಹೊರ ಬರುವುದಾಗಿ ತಿಳಿಸಿದ್ದಾರೆ. ಮಾಜಿ ಸಚಿವ ಬಸವರಾಜ ಹೊರಟ್ಟಿ, ತಮಗೂ ಆಮಿಷವೊಡ್ಡುವ ಪ್ರಯತ್ನ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ.