ಇ-ತೂಕ ಯಂತ್ರ ಕಡ್ಡಾಯ ಮಾಡಿ
ಧಾರವಾಡ: ಮೊದಲು ಜಾರಿಯಲ್ಲಿದ್ದ ಎಲೆಕ್ಟ್ರಾನಿಕ್ ತೂಕದ ತಕ್ಕಡಿಗಳ ಮೂಲಕವೇ ಪಡಿತರ ವಿತರಣೆಯನ್ನು ಮಾಡುವಂತೆ ಒತ್ತಾಯಿಸಿ ಪಡಿತರ ವಿತರಕರ ಸಂಘವು ಸೋಮವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದೆ.
ಈಗಾಗಲೇ ಹುಬ್ಬಳ್ಳಿಯ 144 ಪಡಿತರ ವಿತರಣೆ ಮಳಿಗೆಯಲ್ಲಿ ಪಡಿತರ ವಿತರಣೆಗೆ ತಾಂತ್ರಿಕ ಸ್ವರೂಪ ನೀಡಿದ್ದು, ಸುಲಭವಾಗಿ ವ್ಯವಹರಿಸಲಾಗದ ಇ-ತೂಕದ ಯಂತ್ರದ ಕಡ್ಡಾಯ ಉಪಯೋಗದ ಆದೇಶದಿಂದ ಪಡಿತರ ವಿತರಣೆಯಲ್ಲಿ ಸಮಸ್ಯೆಗಳು ಉಂಟಾಗುತ್ತಿವೆ. ಪಡಿತರ ವಿತರಕರಿಗೆ ಇಲಾಖೆ ನಿಗದಿಪಡಿಸಿದ ಅತಿ ಕಡಿಮೆ ಕಮೀಷನ್‌ನಿಂದ ಪಡಿತರ ಸಾಮಗ್ರಿ ವೆಚ್ಚ,ಹಮಾಲಿ ದರ, ಅಂಗಡಿ ಬಾಡಿಗೆ ಮುಂತಾದ ಸಮಸ್ಯೆಗಳಾಗುತ್ತಿವೆ ಎಂದು ದೂರಿದೆ.
ಇ-ಯಂತ್ರದ ತಾಂತ್ರಿಕತೆಯನ್ನು ಹಾಗೂ ಯಂತ್ರದ ಕಾರ್ಯ ವಿಧಾನ ಸರಿಯಾದ ಕ್ರಮದಲ್ಲಿ ಕಲಿತುಕೊಳ್ಳುವ ಸಲುವಾಗಿ ತಾತ್ಕಾಲಿಕವಾಗಿ ಒಂದು ವರ್ಷದರೆಗೆ ಮೊದಲು ಜಾರಿಗೆ ಇದ್ದ ವಿತರಣಾ ಕಾರ್ಯವನ್ನೇ ಮುಂದುವರಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಿ ಇಲಾಖೆ ಮತ್ತು ಪಡಿತರ ಮಧ್ಯೆ ಸಮನ್ವಯತೆ ಕಾಪಾಡಲು ಮುಂದಾಗಬೇಕು. ಇ-ತೂಕ ಯಂತ್ರದ ಅಳವಡಿಕೆ, ನಿರ್ವಹಣೆ ಮತ್ತು ನಿಯತಕಾಲಿಕ ಸಮೀಕ್ಷೆಗಾಗಿ ಯಂತ್ರದ ಕಾರ್ಯ ಕ್ಷಮತೆಯ ವೀಕ್ಷಣೆಗಾಗಿ ಪ್ರತಿ 25 ಪಡಿತರ ವಿತರಣಾ ಅಂಗಡಿಗಳಿಗೆ ಒಬ್ಬರಂತೆ ನಿರ್ವಹಣಾಕಾರರನ್ನು ನೇಮಿಸಲು ಆದೇಶಿಸಬೇಕು. ಪ್ರತಿ ಪಡಿತರ ವಿತರಣೆ ಅಂಗಡಿಗೂ ನೀಡುವ ಕಮಿಷನ್ ಜೊತೆಗ ಮಾಸಿಕ ರು. 10 ಸಾವಿರ ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ಪಡಿತರ ವಿತರಕರ ಹಾಗೂ ಫಲಾನುಭವಿಗಳಿಗೆ ಆಗುತ್ತಿರುವ ಈ ಎಲ್ಲ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, 15 ದಿನಗಳಲ್ಲಿ ಸೂಕ್ತ ಕ್ರಮಗಳನ್ನು ಪರಿಹರಿಸಬೇಕು ಎಂದು ಸಂಘದ ಅಧ್ಯಕ್ಷ ಎಂ.ಎಸ್. ಶಿರಗಣ್ಣವರ, ಆನಂದ ಪಿಳ್ಳೆ, ಕಾರ್ಯದರ್ಶಿ ನಾಗರಾಜ ಉಪರೆ, ಉಪಾಧ್ಯಕ್ಷ ಕೃಷ್ಣಾ ನಾಯಕ, ಎಲ್.ಸಿ. ಬೈರಿದೇವರಕೊಪ್ಪ, ಎಚ್.ಎಫ್. ಅಂಗಡಿ, ಬಿ.ಎಂ. ಸಕ್ರರಿ ಒತ್ತಾಯಿಸಿದರು.