ಕಟ್ಟಡ ನಿರ್ಮಾಣದ ರಹಸ್ಯವೇನು?
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 13
ಮಂಜೂರಾದ ಜಾಗವನ್ನು ಬೇಕೆಂದಾಗ ಯಾವುದೇ ರೀತಿಯ ಧನಸಹಾಯ ಅಪೇಕ್ಷಿಸದೇ ವಾಪಸ್ಸು ಬಿಟ್ಟುಕೊಡಬೇಕೆಂಬ ಷರತ್ತಿನಿಂದ ಸರ್ಕಾರ ಇಲ್ಲಿಯ ದೇಶಪಾಂಡೆ ನಗರದ ಸ್ಪೋರ್ಟ್ಸ್ ಮೈದಾನವನ್ನು ನೀಡಿದ್ದರೂ ಜಮೀನು ಪಡೆದಿದ್ದ ಕರ್ನಾಟಕ ಜಿಮ್ಖಾನಾ ಅಸೋಸಿಯೇಶನ್ ಆ ಮೈದಾನದಲ್ಲಿ ರು. 20 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿದ್ದರ ಉದ್ದೇಶ ಏನು?
ಸರ್ಕಾರ ನೀಡಿದ್ದ ಖುಲ್ಲಾ ಜಾಗದಲ್ಲಿ ಕೋಟ್ಯಂತರ ರು. ವೆಚ್ಚ ಮಾಡಿ ಕಟ್ಟಡ ಕಟ್ಟಿದ್ದಲ್ಲಿ ಸಹಜವಾಗಿಯೇ ಸರ್ಕಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಬಹುದೆಂಬ ಉದ್ದೇಶ ಈ ಯೋಜನೆಯ ಹಿಂದೆ ಇರಬಹುದೆಂಬ ಗುಮಾನಿ ಸಾರ್ವಜನಿಕರದ್ದು.
ಈ ಶಂಕೆಗೆ ಮತ್ತಷ್ಟು ಪುಷ್ಟಿ ನೀಡಿದ್ದು ದೇಶಪಾಂಡೆ ನಗರದಲ್ಲಿರುವ ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನದ ಆವರಣದಲ್ಲಿ ಕರ್ನಾಟಕ ಜಿಮ್ಖಾನಾ ಅಸೋಸಿಯೇಶನ್ ಪದಾಧಿಕಾರಿಗಳು ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿ.
ಗಮನಕ್ಕೆ ತರಲಾಗುವುದು: ಸರ್ಕಾರ ಏನಾದರೂ ಮೈದಾನ ವಾಪಸ್ ಪಡೆಯಲು ಮುಂದಾದಲ್ಲಿ ನ್ಯಾಯಾಲಯದ ಮೆಟ್ಟಿಲು ಏರಲು ಸಿದ್ಧ. ಮೈದಾನವನ್ನು ಸರ್ಕಾರ ವಾಪಸ್ ಪಡೆಯಲು ಮುಂದಾದಲ್ಲಿ ಕೋಟ್ಯಂತರ ರು. ಹಣ ವ್ಯಯಿಸಿ ಕಟ್ಟಿದ ಕಟ್ಟಡ ವ್ಯರ್ಥವಾಗುತ್ತದೆಂಬುದನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಅಸೋಸಿಯೇಶನ್ ಅಧ್ಯಕ್ಷ ಡಾ. ಸುಭಾಷ ಜೋಷಿ ಸ್ವತಃ ಒಪ್ಪಿಕೊಂಡರು.
1916ರಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ಈ ಸ್ಪೋರ್ಟ್ಸ್ ಮೈದಾನವನ್ನು ಕರ್ನಾಟಕ ಜಿಮ್ಖಾನಾ ಅಸೋಸಿಯೇಶನ್ಗೆ ನೀಡಿದ್ದ ಸಂದರ್ಭದಲ್ಲಿದ್ದ ಬೈಲಾಗಳನ್ನು 2009ರಲ್ಲಿ ತಿದ್ದುಪಡಿ ಮಾಡುವಾಗ ಸಾರ್ವಜನಿಕರಿಂದ ತಕರಾರುಗಳನ್ನು ಏಕೆ ಆಹ್ವಾನಿಸಲಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಅವರು ಉತ್ತರಿಸದಾದರು. ಈ ಮೈದಾನವನ್ನು ಯಾವುದೇ ಸಂದರ್ಭದಲ್ಲಿ ಸರ್ಕಾರ ವಾಪಸ್ ಪಡೆಯಬೇಕೆಂಬ ಷರತ್ತು ಇದ್ದರೂ ಮೈದಾನದ ಆವರಣದಲ್ಲಿ ರು. 20 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಮಹಾನಗರ ಪಾಲಿಕೆ ಸಮ್ಮತಿ ನೀಡಿರುವುದು ಸಹ ಸಂಶಯಕ್ಕೆ ಆಸ್ಪದವಾಗಿದೆ. ಪ್ರತಿ ಸದಸ್ಯತ್ವಕ್ಕೆ ರು. 4 ಲಕ್ಷ ಶುಲ್ಕ ಸಂಗ್ರಹಿಸುತ್ತಿರುವ ಅಸೋಸಿಯೇಶನ್ ಪದಾಧಿಕಾರಿಗಳು, ಸದಸ್ಯರಿಗೆ ಬೇಕಾದ ಅಂತರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಒದಗಿಸಲೂ ಮುಂದಾಗಿದ್ದಾರೆ. ಕ್ರೀಡೆ ಹಾಗೂ ಮನರಂಜನೆಯ ಉದ್ದೇಶದ ಹೆಸರಿನಲ್ಲಿ ಮೈದಾನದಲ್ಲಿ ನಿರ್ಮಿಸುತ್ತಿರುವ ಕಟ್ಟಡದಲ್ಲಿ ಮದ್ಯ ಪೂರೈಕೆ ಮಾಡುವುದಿಲ್ಲವೆಂಬ ಸ್ಪಷ್ಟ ಉತ್ತರವೂ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಕರ್ನಾಟಕ ಜಿಮ್ಖಾನಾ ಅಸೋಸಿಯೇಶನ್ ಪದಾಧಿಕಾರಿಗಳಿಂದ ಬರಲಿಲ್ಲ.
ನಿಗದಿತ ಶುಲ್ಕ: ಈ ಮೊದಲು ಮೈದಾನದಲ್ಲಿ ಉಚಿತವಾಗಿ ಕ್ರಿಕೆಟ್ ಸೇರಿದಂತೆ ಮತ್ತಿತರ ಕ್ರೀಡೆ ಅಭ್ಯಾಸ ಮಾಡುತ್ತಿದ್ದ ಕ್ರೀಡಾಪಟುಗಳು ಇನ್ನು ಮುಂದೆ ಅಸೋಸಿಯೇಶನ್ಗೆ ನಿಗದಿತ ಶುಲ್ಕ ನೀಡಿಯೇ ಮೈದಾನಕ್ಕೆ ಇಳಿಯಬೇಕು.
ಮುಂಬಯಿ ಸರ್ಕಾರ ಜಮೀನು ಮಂಜೂರು ಮಾಡಿದ್ದ ಸಂದರ್ಭದಲ್ಲಿ ಕ್ರಿಕೆಟ್, ಫುಟ್ಬಾಲ್, ಟೆನ್ನಿಸ್ಗಳಿಗೆ ಜಮೀನು ಬಳಸುವಂತೆ ಷರತ್ತು ವಿಧಿಸಿತ್ತು. ಆದರೆ, ಇದೀಗ ಕರ್ನಾಟಕ ಜಿಮ್ಖಾನಾ ಅಸೋಸಿಯೇಶನ್ ಪದಾಧಿಕಾರಿಗಳು ಮನರಂಜನೆಯನ್ನೂ ಒದಗಿಸುವ ಉದ್ದೇಶದಿಂದ ಸರ್ಕಾರದಿಂದ ತೆರೆಮರೆಯಲ್ಲಿ ಪರವಾನಗಿ ಪಡೆದು, ಮೈದಾನದಲ್ಲಿ ಮೋಜುಮಸ್ತಿಗೆ ಮುಂದಾಗುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರದ್ದು. ಹಲವಾರು ಶಂಕೆ ಹಾಗೂ ಆರೋಪಗಳಿಗೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟ ಉತ್ತರ ನೀಡಲು ಕರ್ನಾಟಕ ಜಿಮ್ಖಾನಾ ಅಸೋಸಿಯೇಶನ್ ಅಧ್ಯಕ್ಷ ಡಾ. ಸುಭಾಷ ಜೋಷಿ ಹಾಗೂ ಕರ್ನಾಟಕ ಜಿಮ್ಖಾನಾ ಅಸೋಸಿಯೇಶನ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ ಶೆಟ್ಟಿ ತಡಬಡಿಸಿದರು.
ವೈಯಕ್ತಿಕ ಹಿತಾಸಕ್ತಿ ಇಲ್ಲ: ಡಾ. ಸುಭಾಷ ಜೋಷಿ ಸ್ಪಷ್ಟನೆ
ಇಲ್ಲಿಯ ದೇಶಪಾಂಡೆ ನಗರದ ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನವನ್ನು ಕ್ರೀಡಾ ಹಿತಾಸಕ್ತಿಯಿಂದ ಅಭಿವೃದ್ಧಿಗೊಳಿಸಲಾಗುತ್ತಿದೆಯೇ ಹೊರತು ಇದರಲ್ಲಿ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದು ಕರ್ನಾಟಕ ಜಿಮ್ಖಾನಾ ಅಸೋಸಿಯೇಶನ್ ಅಧ್ಯಕ್ಷ ಡಾ. ಸುಭಾಷ ಜೋಷಿ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ಪೋರ್ಟ್ಸ್ ಮೈದಾನವನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ನಂತರ ಸಾರ್ವಜನಿಕರಿಗೆ ವಾಯು ವಿಹಾರಕ್ಕೆ ಮುಕ್ತ ಪ್ರವೇಶ ನೀಡಲಾಗುವುದು. ಈ ಮೈದಾನದಲ್ಲಿ ಸದಸ್ಯತ್ವ ಪಡೆದವರಿಗೆ ಮಾತ್ರ ಪ್ರವೇಶವೆಂಬ ಸುದ್ದಿ ಸತ್ಯಕ್ಕೆ ದೂರವಾದುದು ಎಂದರು. ಕಳೆದ 98 ವರ್ಷಗಳಿಂದ ಮೈದಾನದ ಉಪಯೋಗ ನಡೆದ ರೀತಿಯಲ್ಲಿಯೇ ಮುಂದಿನ ದಿನಗಳಲ್ಲಿಯೂ ಮೈದಾನವನ್ನು ಬಳಸಲಾಗುವುದು. ಮೈದಾನದಲ್ಲಿ 8 ಸಾವಿರ ಪ್ರೇಕ್ಷಕರು ಕೂರಲು ಅನುಕೂಲವಾಗುವಂತೆ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಲಾಗಿದೆ. ಬ್ಯಾಡ್ಮಿಂಟನ್, ಟೆನ್ನಿಸ್, ಈಜು ಸೇರಿದಂತೆ ಎಲ್ಲ ರೀತಿಯ ಒಳಾಂಗಣ ಕ್ರೀಡೆಗಳಿಗೆ ಅನುಕೂಲ ಒದಗಿಸಲಾಗಿದೆ. ಮಹಾನಗರ ಪಾಲಿಕೆಯಿಂದ ಅನುಮತಿ ಪಡೆದು ಸುಮಾರು ರು. 20 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದ್ದು, ಪ್ರತಿಶತ 70ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದರು. ಕಾಂಗ್ರೆಸ್ ಧುರೀಣ ಮಹೇಂದ್ರ ಸಿಂಘಿ ಅಸೋಸಿಯೇಶನ್ಗೆ ರಾಜೀನಾಮೆ ನೀಡಿಲ್ಲ. ಬೈಲಾ ರಚನೆಯ ಅಧ್ಯಕ್ಷರಾಗಿದ್ದ ರಾಜಾ ದೇಸಾಯಿ ಅವರೇ ಬೈಲಾ ಕುರಿತು ಅಪಸ್ವರ ಎತ್ತಿರುವುದು ಹಾಸ್ಯಾಸ್ಪದ ಎಂದ ಅವರು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಸಂಸದ ಪ್ರಹ್ಲಾದ ಜೋಶಿ ಅಸೋಶಿಯೇಶನ್ಗೆ ಕೇವಲ ಸದಸ್ಯರಾಗಿದ್ದಾರೆ. ಪದಾಧಿಕಾರಿಗಳಲ್ಲ ಎಂದರು.
ಕರ್ನಾಟಕ ಜಿಮ್ಖಾನಾ ಅಸೋಸಿಯೇಶನ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ ಶೆಟ್ಟಿ, ಪದಾಧಿಕಾರಿಗಳಾದ ಮಾಜಿ ಮೇಯರ್ ವೀರಣ್ಣ ಸವಡಿ, ನಂದಕುಮಾರ, ಜಯರಾಂ ಶೆಟ್ಟಿ, ರಾಜೀವ್ ಮಾನಿಂಗ ಶೆಟ್ಟಿ, ಸುನೀಲ ಕೊಠಾರಿ ಇದ್ದರು.