ಪುಣ್ಯಾರಾಧನೆ: ವಿವಿಧ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 13
ಸಿದ್ಧಾರೂಢ ಸ್ವಾಮಿಗಳ 84ನೇ ಪುಣ್ಯಾರಾಧನೆ ಮತ್ತು ಶ್ರಾವಣ ಸಪ್ತಾಹದ ಅಂಗವಾಗಿ ಕಾರ್ಯಕ್ರಮ ಆ. 16ರಿಂದ 22ರ ವರೆಗೆ ನಡೆಯಲಿದ್ದು, ಪುಣ್ಯಾರಾಧಾನೆ ನಿಮಿತ್ತ ಜಲರಥೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸಿದ್ಧಾರೂಢಮಠದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ಧಾರೂಢ ಮಠದ ಟ್ರಸ್ಟ್ ಚೇರ್‌ಮನ್ ನಾರಾಯಣಪ್ರಸಾದ ಪಾಠಕ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರಾವಣ ಸಪ್ತಾಹದ ಅಂಗವಾಗಿ ಪ್ರತಿನಿತ್ಯ ಬೆಳಗ್ಗೆ 7:45ಕ್ಕೆ ಸಿದ್ಧಾರೂಢ ಸ್ವಾಮೀಜಿ ಪುರಾಣ ಪ್ರವಚನ, 9:30ಕ್ಕೆ ಪೂಜ್ಯ ಮಹಾತ್ಮರಿಂದ ಶಾಸ್ತ್ರ ಪ್ರವಚನ, ಸಂಜೆ 5:00ಕ್ಕೆ ಕೀರ್ತನೆ ನಡೆಯಲಿದೆ. ಆ.22ರಂದು ಸಿದ್ಧಾರೂಢ ಶ್ರೀಗಳ 84ನೇ ಪುಣ್ಯಾರಾಧನೆ ನಡೆಯಲಿದ್ದು, ಅಂದು ಸಂಜೆ 5:30ಕ್ಕೆ ಜಲರಥೋತ್ಸವ ನಡೆಯಲಿದ್ದು, ಅದೇ ದಿನ ಮಹಾಪೂಜೆಯೊಂದಿಗೆ ಶ್ರಾವಣ ಸಪ್ತಾಹ ಮತ್ತು ಪುಣ್ಯಾರಾಧನೆ ಮುಕ್ತಾಯಗೊಳ್ಳಲಿದೆ.
ಆ.16ರಂದು ಬೆಳಗ್ಗೆ 7:45ರಿಂದ 9ರ ವರೆಗೆ ಗೋಪಾಲ ಭಟ್ ಜೋಶಿ ಅವರು ಶ್ರೀಸಿದ್ಧಾರೂಢ ಭಾರತಿ ಕಲ್ಪದೃಮ ಪುರಾಣ ಪ್ರವಚನ ನಡೆಯಲಿದೆ. ಬೆಳಗ್ಗೆ 9ರಿಂದ 12ರ ವರೆಗೆ ನಾಡಿನ ವಿವಿಧ ಮಠಾಧೀಶರು, ಸ್ವಾಮೀಜಿಗಳಿಂದ ನಾನಾ ವಿಷಯಗಳ ಕುರಿತು ತತ್ವೋಪದೇಶ ನಡೆಯಲಿದೆ ಎಂದರು.
ಪ್ರಸಕ್ತ ವರ್ಷದಿಂದ ಮಠದಿಂದ ನಾನಾ ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಳ್ಳಲಾಗಿದ್ದು, ಭಕ್ತರಿಗೆ ಬೆಳಗ್ಗೆ ಉಪಾಹಾರ ಮತ್ತು ನಿರಂತರ ಅನ್ನಸಂತರ್ಪಣೆ ಕೈಗೆತ್ತಿಕೊಳ್ಳಲಾಗಿದೆ. ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಅವರು ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ನೀಡಿರುವ 5 ಲಕ್ಷ ಅನುದಾನ ಮತ್ತು ಹು-ಧಾ ಮಹಾನಗರ ಪಾಲಿಕೆ ನೀಡಿರುವ 5 ಲಕ್ಷ ಅನುದಾನದಲ್ಲಿ ಪಾಠಶಾಲೆ ಆವರಣಕ್ಕೆ ಸಿಮೆಂಟ್ ನೆಲಹಾಸು ಹೊದಿಕೆ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಮಠದ ಕಾರ್ಯಾಲಯದ ಹಿಂದೆ ಭಕ್ತರಿಗಾಗಿ ಸ್ನಾನ ಮತ್ತು ಶೌಚಾಲಯ ನಿರ್ಮಿಸಲಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ಮಠದ ಆವರಣದಲ್ಲಿ ವೇದಾಂತ ಗುರುಕುಲ ಸ್ಥಾಪನೆ, ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರು ಆಗಿರುವ 5 ಲಕ್ಷ ಅನುದಾನದಲ್ಲಿ 8 ಸ್ನಾನ ಮತ್ತು ಶೌಚಾಲಯ ನಿರ್ಮಿಸಲಾಗುವುದು. ಗುರುನಾಥಾರೂಢ ಸಮಾಧಿ ಮಂದಿರದ ಗೋಪುರ ಕಳಸಕ್ಕೆ ಸ್ವರ್ಣ ಲೇಪನ, ಬಾಗಿಲು ಚೌಕಟ್ಟಿಗೆ ಬೆಳ್ಳಿ ಕವಚ ಅಳವಡಿಕೆ ಮತ್ತು ಮಠದಲ್ಲಿ ಭವ್ಯ ಪ್ರಸಾದ ನಿಲಯ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಸಿದ್ಧಾರೂಢಮಠ ಟ್ರಸ್ಟ್ ಗೌರವ ಕಾರ್ಯದರ್ಶಿ ನಿವೃತ್ತ ಡಿಎಸ್‌ಪಿ ಪಿ.ಎಸ್. ಪಾಟೀಲ, ಉಪಾಧ್ಯಕ್ಷೆ ವೈ.ಎಸ್. ಸಾಲಿಮಠ, ಟ್ರಸ್ಟ್‌ನ ಇನ್ನಿತರ ಪದಾಧಿಕಾರಿಗಳು ಇದ್ದರು.