ಪ್ರಥಮ ಬಾರಿಗೆ ತಳಿವಾರು ಜಾನುವಾರು ಸಮೀಕ್ಷೆ
ಧಾರವಾಡ: ವಿನಾಶದ ಅಂಚಿನಲ್ಲಿರುವ ಸ್ಥಳೀಯ ಜಾನುವಾರು ತಳಿಗಳ ಉಳಿವು ಸೇರಿದಂತೆ ಒಟ್ಟಾರೆ ತಳಿವಾರು ಜಾನುವಾರುಗಳ ಮಾಹಿತಿ ಪಡೆಯಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪ್ರಥಮ ಬಾರಿಗೆ ರಾಜ್ಯಾದ್ಯಂತ ತಳಿವಾರು ಜಾನುವಾರುಗಳ ಸಮೀಕ್ಷೆ ಶುರು ಮಾಡಿದೆ.
ಮೈಸೂರು ಮಹಾರಾಜರು 1897ರಲ್ಲಿ ಮೈಸೂರು ಸಂಸ್ಥಾನದಲ್ಲಿ ಜಾನುವಾರು ಗಣತಿ ಪ್ರಾರಂಭಿಸಿ ಐದು ವರ್ಷಕ್ಕೊಮ್ಮೆ ಗಣತಿ ನಡೆಸುವ ವ್ಯವಸ್ಥೆಗೆ ಚಾಲನೆ ನೀಡಿದ್ದರು. ಅಂತೆಯೇ ಈಗಾಗಲೇ 19 ಬಾರಿ ಬರೀ ಜಾನುವಾರು ಗಣತಿಯನ್ನು ಮಾತ್ರ ನಡೆಸಲಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸ್ಥಳೀಯ ಮತ್ತು ವಿದೇಶಿ ತಳಿಗಳ ಸಂಕಲನದಿಂದ ಮಿಶ್ರ ತಳಿಗಳ ಉತ್ಪತ್ತಿ ಹೆಚ್ಚಾಗಿರುವ ಕಾರಣ, ಸ್ಥಳೀಯ ಜಾನುವಾರುಗಳು ವಿನಾಶದ ಅಂಚಿನಲ್ಲಿವೆ. ಅಲ್ಲದೇ, ಎಲ್ಲ ತಳಿವಾರು ಜಾನುವಾರುಗಳ ನಿಖರ ಮಾಹಿತಿ ಇಲ್ಲದಿರುವುದರಿಂದ ಈ ಸಮೀಕ್ಷೆಯನ್ನು ಆಗಸ್ಟ್ 1ರಿಂದ 15ರ ವರೆಗೆ ಇಲಾಖೆ ರಾಜ್ಯಾದ್ಯಂತ ನಡೆಸುತ್ತಿದೆ.
ಏನೇನು ಸಮೀಕ್ಷೆ: ಸಮೀಕ್ಷೆಯಲ್ಲಿ ದನಗಳು (ಆಕಳು, ಎತ್ತು, ಹೋರಿ), ಎಮ್ಮೆ, ಕೋಣ, ಕುರಿ, ಮೇಕೆ, ಕುದುರೆ, ಚಿಕ್ಕ ಕುದುರೆ, ಹೇಸರ ಕತ್ತೆ, ಕತ್ತೆ, ಒಂಟೆ, ಹಂದಿಗಳು ಹಾಗೂ ಮೊಲಗಳು ಎಂದು ವರ್ಗೀಕರಿಸಲಾಗಿದ್ದು, ವಿದೇಶಿ, ಮಿಶ್ರತಳಿ, ಸ್ಥಳೀಯ ಮತ್ತು ಉನ್ನತೀಕರಿಸಿದ ಸ್ಥಳೀಯ ಜಾನುವಾರುಗಳ ಮಾಹಿತಿಯನ್ನು ನಿರ್ದಿಷ್ಟಪಡಿಸಿದ ಗಣತಿದಾರರು ಪಡೆಯಬೇಕು.
ಸಮೀಕ್ಷೆ ಪೈಕಿ ದನಗಳಲ್ಲಿ ಸ್ಥಳೀಯ ತಳಿಗಳಾದ ಕೃಷ್ಣಾವ್ಯಾಲಿ, ಮಲೆನಾಡು ಗಿಡ್ಡ, ಕಿಲಾರ್, ಹಳ್ಳಿಕಾರ. ಅಮೃತಮಹಲ್ ಎಮ್ಮೆಗಳಲ್ಲಿ- ಮೆಹಸಾನ್, ಮುರ್ರಾ, ಪಂಡರಾಪುರಿ, ಸುರ್ತಿ. ಕುರಿಗಳಲ್ಲಿ - ಬಳ್ಳಾರಿ, ಡೆಕ್ಕನಿ, ಹಾಸನ, ಕೆಂಗುರಿ, ಮಂಡ್ಯ. ಮೇಕೆಗಳಲ್ಲಿ- ಜಮುನಾಪುರಿ, ಓಸ್ಮನಾಬಾದಿ, ಸಿರೋಹಿ. ಕುದುರೆಗಳಲ್ಲಿ- ಮಾರವಾರಿ. ಮೊಲಗಳಲ್ಲಿ- ಅಂಗುರಾ, ಬ್ರಾಯ್ಲರ್ ಇತ್ಯಾದಿ ತಳಿಗಳು ಮಿಶ್ರ ತಳಿಗಳಾಗಿ ಮಾರ್ಪಾಡು ಹೊಂದುತ್ತಿವೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಹೀಗೆ ನಡೆಯಲಿದೆ ಸಮೀಕ್ಷೆ: ಸಮೀಕ್ಷಾ ಕಾರ್ಯದ ಬಗ್ಗೆ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಜಂಟಿ ನಿರ್ದೇಶಕ (ಅಂಕಿ-ಅಂಶ) ಕೆ. ನಾರಾಯಣ ಕೆಎಸ್ಎಸ್, ಅನಿಯಮಿತ ಮಾದರಿಯ ಮೇರೆಗೆ ರಾಜ್ಯದ ಎಲ್ಲ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜಾನುವಾರುಗಳಿರುವ ಸ್ಥಳಗಳಲ್ಲಿ ಈ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದೆ. ಇಲಾಖೆಯಿಂದ ನಿಯೋಜಿಸಿದ ಸಿಬ್ಬಂದಿಯೇ ಗಣತಿದಾರರಾಗಿದ್ದಾರೆ. ಗರಿಷ್ಠ 1,500 ಮನೆಗಳಿಗೆ ಓರ್ವ ಗಣತಿದಾರರಿರುತ್ತಾರೆ. ಮನೆ ಮನೆಗೆ ಹೋಗಿ ಗಣತಿದಾರ ಕಡ್ಡಾಯವಾಗಿ ಮಾಹಿತಿ ಕಲೆ ಹಾಕಬೇಕು. ಸಮೀಕ್ಷೆ ಸಮರ್ಪಕವಾಗಿ ನಡೆಸಲು ಹಾಗೂ ಗಣತಿದಾರರ ನಿಖರ ಮಾಹಿತಿ ಸಂಗ್ರಹಿಸಲು ವ್ಯವಸ್ಥಿತ ಮೇಲ್ವಿಚಾರಣೆ ಸಹ ಇಲಾಖೆ ಉಪ ನಿರ್ದೇಶಕರು ಮಾಡುತ್ತಾರೆ ಎಂದು ಹೇಳಿದರು.
ಸಮೀಕ್ಷೆಯಿಂದ ಹೊರ ಬರುವ ಅಂಕಿ-ಅಂಶಗಳು ಹೊಸ ಯೋಜನೆ ಹಾಗೂ ಇಲಾಖೆಯ ಪ್ರಗತಿಪರ ಕಾರ್ಯಕ್ರಮ ರೂಪಿಸುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ವಲಯದ ರಾಷ್ಟ್ರೀಯ ಆದಾಯ ಕುಸಿದು ರೈತನ ಆರ್ಥಿಕ ಸ್ಥಿತಿ ಸಹ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಪಶು ಸಂಪತ್ತಿನ ಯೋಜನೆಗಳು ಸತ್ವ ಪಡೆಯಬೇಕಾಗುತ್ತದೆ. ಈ ಗುರಿ ಸಾಧಿಸಲು ತಳಿವಾರು ಜಾನುವಾರು ಸಮೀಕ್ಷೆ ಅಗತ್ಯ ಎನ್ನುತ್ತಾರೆ ನಾರಾಯಣ ಕೆಎಸ್ಎಸ್.
-ಬಸವರಾಜ ಹಿರೇಮಠ