ಇಂದು ಸಂಗೊಳ್ಳಿ ರಾಯಣ್ಣ ಜಯಂತಿ
ಹುಬ್ಬಳ್ಳಿ: ನಗರದಲ್ಲಿ ಆ. 15ರಂದು ನಡೆಯಲಿರುವ ವೀರ ಸಂಗೊಳ್ಳಿ ರಾಯಣ್ಣನ 219ನೇ ಜಯಂತಿಗೆ ಕನ್ನಡ ಚಲನಚಿತ್ರ ನಟ ಶಿವರಾಜಕುಮಾರ್ ಚಾಲನೆ ನೀಡಲಿದ್ದಾರೆ.ಅಂದು ಮಧ್ಯಾಹ್ನ 12ಕ್ಕೆ ವೀರಾಪುರ ಮಹಾಬಳೇಶ್ವರ ಕಲ್ಯಾಣಮಂಟದಿಂದ ಆರಂಭಗೊಳ್ಳಲಿರುವ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಮೆರವಣಿಗೆಗೆ ಶಿವರಾಜಕುಮಾರ್ ಚಾಲನೆ ನೀಡಲಿದ್ದಾರೆ. ಸಂಜೆ 4ಕ್ಕೆ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಸಂಸದ ಪ್ರಹ್ಲಾದ ಜೋಶಿ, ಮಾಜಿ ಸಚಿವ ಬಸವರಾಜ ಹೊರಟ್ಟಿ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಇದೇ ಸಮಾರಂಭದಲ್ಲಿ ಶಿವರಾಜಕುಮಾರ್ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಲಾಗುವುದು ಎಂದು ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ ಹೇಳಿದ್ದಾರೆ.
ಇಂದು ಸಾಂಸ್ಕೃತಿಕ ಉತ್ಸವ
ಹುಬ್ಬಳ್ಳಿ: 67 ಸ್ವಾತಂತ್ರ್ಯೋತ್ಸವ ನಿಮಿತ್ತ ಆ. 15ರಂದು ಸಂಜೆ 5ಕ್ಕೆ ಕಿಮ್ಸ್ ಸಭಾಂಗಣದಲ್ಲಿ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ. ಕಿಮ್ಸ್ ನಿರ್ದೇಶಕಿ ಡಾ. ವಸಂತಾ ಕಾಮತ್ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಕಿಮ್ಸ್ ಪ್ರಾಂಶುಪಾಲ ಡಾ.ಬಿ.ಎಸ್. ಹಂಗರಗಾ, ಸಾಮಾಜಿಕ ಕಾರ್ಯಕರ್ತ ಶೈಲೇಂದ್ರಕುಮಾರ್ ಪಾಟೀಲ, ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಡೇಷನ್ ಉಪಾಧ್ಯಕ್ಷ ಬಾಬುರಾವ್ ಹಾನಗಲ್ ಮತ್ತು ಎಸಿಪಿ ಅಡಿವೇಪ್ಪ ಬಡಿಗೇರ ಆಗಮಿಸಲಿದ್ದಾರೆ.
ಜಿಮಖಾನಾ ಮೈದಾನದಲ್ಲಿ ಧ್ವಜಾರೋಹಣ
ಹುಬ್ಬಳ್ಳಿ: ಸಾರ್ವಜನಿಕ ಆಸ್ತಿಯ ದುರುಪಯೋಗ ಖಂಡಿಸಿ ಆ. 15ರಂದು ಜಿಮಖಾನಾ ಸ್ಪೋರ್ಟ್ಸ್ ಮೈದಾನದಲ್ಲಿ ಆಮ್ ಆದ್ಮಿ ಪಾರ್ಟಿ ವತಿಯಿಂದ 67 ಸ್ವಾತಂತ್ರ್ಯೋತ್ಸವ ನಿಮಿತ್ತ ಧ್ವಜಾರೋಹಣ ಹಮ್ಮಿಕೊಳ್ಳಲಾಗಿದೆ. ರಿಕ್ರಿಯೆಷನ್ ಕ್ಲಬ್ ನಿರ್ಮಾಣವಾಗುತ್ತಿರುವ ಜಾಗ ಜಿಮಖಾನಾ ಮೈದಾನ ಸರ್ಕಾರಿ ಜಾಗವಾಗಿದ್ದು ಅದರ ದುರುಪಯೋಗ ತಡೆಯುವುದನ್ನು ಧ್ವಜಾರೋಹಣದ ಮೂಲಕ ಆಮ್ ಆದ್ಮಿ ಖಂಡಿಸಲಿದೆ ಎಂದು ಪಕ್ಷದ ಜಿಲ್ಲಾ ಸಂಚಾಲಕ ಶೈಲೇಂದ್ರಕುಮಾರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿ.ಆರ್. ಪಾಟೀಲ್ಗೆ ವಿಶಿಷ್ಟ ಸೇವಾ ಪದಕ
ಹುಬ್ಬಳ್ಳಿ: ಬೆಳಗಾವಿ ಲೋಕಾಯುಕ್ತ ಡಿವೈಎಸ್ಪಿ ಜಿ.ಆರ್. ಪಾಟೀಲ ಅವರಿಗೆ 67ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ನೀಡುವ ರಾಷ್ಟ್ರಪತಿ ಅವರ ವಿಶಿಷ್ಟ ಸೇವಾ ಪದಕ ಲಭಿಸಿದೆ. 2008ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಖಾನಾಪುರ ವೃತ್ತದಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭಜೀವದ ಹಂಗು ತೊರೆದು ದರೋಡೆಕೋರರನ್ನು ಬಂಧಿಸಿದ್ದರು. ಅವರ ಈ ಸೇವೆಯನ್ನು ಮನಗಂಡು ರಾಷ್ಟ್ರಪತಿ ಅವರು ನೀಡುವ ಶೌರ್ಯ ಪದಕ ಪಡೆದಿದ್ದರು. 1998ರಲ್ಲಿ ಹುಬ್ಬಳ್ಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅನೇಕ ಕೊಲೆ ಮತ್ತು ಖೋಟಾ ನೋಟು ಪ್ರಕರಣಗಳನ್ನು ಭೇದಿಸಿ ಮುಖ್ಯಮಂತ್ರಿ ಅವರಿಂದ ಚಿನ್ನದ ಪದಕ ಪಡೆದಿದ್ದರು.
ಸ್ವಾತಂತ್ರ್ಯೋತ್ಸವ: ಸಿದ್ಧತೆ
ಕಲಘಟಗಿ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆ. 15ರಂದು ನಡೆಯಲಿರುವ 67ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಸಿದ್ಧತೆ ನಡೆಯುತ್ತಿದೆ. ತಾಲೂಕು ಕೇಂದ್ರದಲ್ಲಿ ಮುಂಜಾನೆ 9ಕ್ಕೆ ಸಾರ್ವಜನಿಕ ಧ್ವಜಾರೋಹಣವನ್ನು ತಹಸೀಲ್ದಾರ್ ಕೆ.ಆರ್. ಕುಲಕರ್ಣಿ ನೆರವೇರಿಸಿದರು. ಪಪಂ ಕಚೇರಿಯಲ್ಲಿ ಮುಖ್ಯಾಧಿಕಾರಿ ರವಿ ಬಾಗಲಕೋಟ ನೆರವೇರಿಸುವರು. ತಾಪಂ ಕಚೇರಿಯಲ್ಲಿ ಅಧ್ಯಕ್ಷ ಬಸವಣ್ಣಯ್ಯ ಹಿರೇಮಠ ನೆರವೇರಿಸುವರು. ತಾ ಂ ಇಒ ಎಸ್.ಆರ್. ವೀರಕರ ಹಾಗೂ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಧಾರವಾಡ: ಇಂದುಚಿತ್ರಕಲಾ ಪ್ರದರ್ಶನ
ಧಾರವಾಡ: ಸ್ವಾತಂತ್ರ್ಯೋತ್ಸವ ಅಂಗವಾಗಿ ಇಲ್ಲಿನ ಸರ್ಕಾರಿ ಚಿತ್ರಕಲಾ ಕಾಲೇಜಿನಲ್ಲಿ ಚಿತ್ತಾರ ಕಲಾ ಬಳಗ ಆ. 15ರ ಬೆಳಗ್ಗೆ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಹಿರಿಯ ಸಾಹಿತಿ ಡಾ. ಗಿರಡ್ಡಿ ಗೋವಿಂದರಾಜ, ಕವಿವಿ ಸಿಂಡಿಕೇಟ್ ಸದಸ್ಯ ಡಾ. ಲೋಹಿತ್ ನಾಯ್ಕರ್ ಹಾಗೂ ಕಲಾವಿದ ಬಿ. ಮಾರುತಿ ಭಾಗವಹಿಸುತ್ತಾರೆ. ಮಹಿಳಾ ಪಾಲಿಟೆಕ್ನಿಕ್ನ ಪ್ರಾಚಾರ್ಯ ಜಿ.ಎಂ. ಗೋಣಿ ಅಧ್ಯಕ್ಷತೆ ವಹಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ. ಈ ಚಿತ್ರಕಲಾ ಪ್ರದರ್ಶನ ಆ. 15ರಿಂದ 20ರ ವರೆಗೆ ಬೆಳಗ್ಗೆ 10ರಿಂದ ಸಂಜೆ 7ರ ವರೆಗೆ ನಡೆಯಲಿದೆ.
ಇಂದು ಪ್ರಚಾರ
ಕಲಘಟಗಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ನಡೆದಿರುವ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಆ. 15ರಂದು ಮಧ್ಯಾಹ್ನ 12ಕ್ಕೆ ಪಟ್ಟಣದ ಶಿವಗಂಗಾ ಚಿತ್ರಮಂದಿರದಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಶಿವಳ್ಳಿ, ಶಾಸಕರಾದ ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವ ಎಸ್.ಆರ್. ಮೋರೆ ಮುಂತಾದವರು ಪಾಲ್ಗೊಳ್ಳುವರೆಂದು ತಾಲೂಕು ಅಧ್ಯಕ್ಷ ಬಿ.ವೈ. ಪಾಟೀಲ ತಿಳಿಸಿದ್ದಾರೆ.
ರಾಜೇಶ್ವರಿ ನಿಧನ
ಧಾರವಾಡ: ಇಲ್ಲಿನ ಮಾಳಮಡ್ಡಿ ಗೌಳಿಗಲ್ಲಿ ನಿವಾಸಿ ರಾಜೇಶ್ವರಿ ಸದಾಶಿವ ಹಿರೇಮಠ (70) ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಬಂಧು ಬಳಗ ಇದ್ದಾರೆ.