ಹಿಂದಿನ ಸರ್ಕಾರಗಳ ಅಪವಾದ ಸಲ್ಲದು: ಕೋಡಿಹಳ್ಳಿ ಚಂದ್ರಶೇಖರ
ನವಲಗುಂದ: ಹಿಂದಿನ ಸರ್ಕಾರಗಳ ಅಪವಾದದ ಹೇಳಿಕೆ ಮತ್ತು ಸಬೂಬು ನೀಡದೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ತುರ್ತು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ಅವರು ನಗರದ ರೈತ ಭವನ ಎದುರು ಕಳಸಾ-ಬಂಡೂರಿ ನಾಲಾ ಹೋರಾಟ ಹಾಗೂ ಯೋಜನೆ ಜಾರಿಗಾಗಿ ಆಗ್ರಹಿಸಿ ಕರೆ ನೀಡಿದ್ದ ನವಲಗುಂದ ಬಂದ್ ಹಿನ್ನೆಲೆಯಲ್ಲಿ ರೈತರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಳಸಾ-ಬಂಡೂರಿ ಕಾಮಗಾರಿ ಕೇವಲ 600 ಮೀಟರ್‌ನಷ್ಟು ಉಳಿದಿದೆ. ಆದರೆ, ಈ ಕಾಮಗಾರಿಯನ್ನು ಯಾವ ಸರ್ಕಾರಗಳು ಪೂರ್ಣಗೊಳಿಸಲು ತಲೆ ಕೆಡಿಸಿಕೊಳ್ಳುತ್ತಿಲ್ಲ. ರಾಜಕೀಯ ಬಣ್ಣ ಬೆರೆಸಿ ಕಳಸಾ-ಬಂಡೂರಿ ಹೆಸರಿನ ಮೇಲೆ ಶಾಸಕ ಮತ್ತು ಮಂತ್ರಿಗಳಾಗಿ ರೈತರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಈ ಭಾಗದ ರೈತರ ಜಮೀನುಗಳಿಗೆ ನೀರು ಅವಶ್ಯವಾಗಿದ್ದರಿಂದ ಮನೆಗೊಬ್ಬ ರೈತ ಈ ಹೋರಾಟಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಸರ್ಕಾರ ಕಣ್ಣು ಮುಚ್ಚಿದೆ: ಸತತವಾಗಿ ಮೂರು ವರ್ಷ ಈ ಭಾಗ ಬರಗಾಲದಿಂದ ತತ್ತರಿಸುತ್ತಿದೆ. ಇದನ್ನೆಲ್ಲ ಸರ್ಕಾರ ಸರಿಪಡಿಸದೇ ಕಣ್ಣುಮುಚ್ಚಿ ಕುಳಿತಿದೆ. ರೈತರು ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೆ ರೈತ ಮಳೆಯಿಲ್ಲದೆ ಚಿಂತಾಕ್ರಾಂತರಾಗಿದ್ದು, ಈ ಯೋಜನೆಯಿಂದ ರೈತನ ಬಾಳು ಸಮೃದ್ಧಿಯಾಗುವುದರಲ್ಲಿ ಸಂಶಯವೇ ಇಲ್ಲ ಎಂದರು.
ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕಳಸಾ-ಬಂಡೂರಿ ನಾಲಾ ಯೋಜನೆಯ ಅನುಷ್ಠಾನಕ್ಕಾಗಿ ಬಂದ್ ಕರೆ ನೀಡಿದ್ದು ಭಾಗಶಃ ಯಶಸ್ವಿಯಾಯಿತು. ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ವ್ಯಾಪಾರಿಗಳು ಸ್ವಯಂಪ್ರೇರಣೆಯಿಂದ ಬಂದ್ ಮಾಡಿ ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೆ ಬೆಂಬಲ ಸೂಚಿಸಿದರು. ಇದೇ ಸಂದರ್ಭ ಕಳಸಾ-ಬಂಡೂರಿ ನಾಲಾ ಹೋರಾಟ ಸಮಿತಿಯ ಮುಖ್ಯಸ್ಥ ವಿಜಯ ಕುಲಕರ್ಣಿ, ಜಿಲ್ಲಾಧ್ಯಕ್ಷ್ಯೆ ಶೋಭಾ ಚಲವಾದಿ, ತಾಲೂಕಾಧ್ಯಕ್ಷ ಹನುಮಂತಗೌಡ ಹುಡೇದ ಮಾತನಾಡಿದರು. ಶಂಕ್ರವ್ವ ಕರಕಣ್ಣವರ, ಅಮೀನ್‌ಪಾಶ ದಿಡ್ಡಿ, ಮುತ್ತಪ್ಪ, ಸುಭಾಷ ಶಿರಬೂರ ಸೇರಿದಂತೆ ಸಾವಿರಾರು ರೈತರು ಪಾಲ್ಗೊಂಡಿದ್ದರು. ಪಟ್ಟಣದಲ್ಲಿ ಬಂದ್ ಕರೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಬಸ್ ಸಂಚಾರ ಇರಲಿಲ್ಲ. ಇದರಿಂದಾಗಿ ಪ್ರಯಾಣಿಕರು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು. ಬಂದ್‌ಗೆ ಶಾಸಕ ಎನ್.ಎಚ್. ಕೋನರಡ್ಡಿ ಅವರ ಅನುಪಸ್ಥಿತಿ ರೈತರಲ್ಲಿ ಆಕ್ರೋಶ ಮೂಡಿಸಿತ್ತು.