ಹೋರಾಟಕ್ಕೆ ವಕೀಲರ ಬೆಂಬಲ
ಧಾರವಾಡ: ಕಳಸಾ ಬಂಡೂರಿ ನಾಲಾಗಳಿಗೆ ಶೀಘ್ರವೇ ಮಲಪ್ರಭಾ ನೀರು ಬಿಡಬೇಕೆಂದು ಒತ್ತಾಯಿಸಿ ಕಳಸಾ ಬಂಡೂರಿ ನಾಲಾ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ಬುಧವಾರ ವಕೀಲರ ಸಂಘದ ಪದಾಧಿಕಾರಿಗಳು ಬೆಂಬಲ ಸೂಚಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇಲ್ಲಿನ ಸಿವಿಲ್ ಕೋರ್ಟ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ವಕೀಲರು, ಈ ಯೋಜನೆಗಾಗಿ ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ರೈತ ಸಂಘಟನೆ, ಸಂಸ್ಥೆಗಳು ಬುಧವಾರ ಬಂದ್‌ಗೆ ಕರೆ ನೀಡಿದ್ದವು. ಅನೇಕ ವರ್ಷಗಳಿಂದ ಈ ಹೋರಾಟ ನಡೆಯುತ್ತಿದೆ.
ಈ ಹೋರಾಟಕ್ಕೆ ಪ್ರತಿಫಲ ಸಿಕ್ಕರೆ, ಹುಬ್ಬಳ್ಳಿ- ಧಾರವಾಡ ಅವಳಿನಗರಗಳಿಗೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತದೆ. ಅಲ್ಲದೆ, ಐದು ಜಿಲ್ಲೆಗಳ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಬಹುದಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಕಳಸಾ ಬಂಡೂರಿ ನಾಲಾಕ್ಕೆ ಮಲಪ್ರಭಾ ನದಿ ನೀರು ಜೋಡಣೆ ಶೀಘ್ರವೇ ಅನುಷ್ಠಾಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಕ್ತಕ್ರಮ ಕೈಗೊಳ್ಳಬೇಕು. ಅಲ್ಲದೆ, ಈ ಕುರಿತಂತೆ ಕಾನೂನಾತ್ಮಕವಾದ ಕ್ರಮ ಕೈಗೊಳ್ಳುವ ಮೂಲಕ ಮಹಾದಾಯಿ ಯೋಜನೆ ಅಂತಿಮಪಡಿಸಿ, ಕಳಸಾ ಬಂಡೂರಿ ಯೋಜನೆಗೆ ಮಧ್ಯಂತರ ಅನುಮತಿ ತೆಗದುಕೊಂಡು ಕಾಮಗಾರಿ ಪೂರೈಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕಾಮರಡ್ಡಿ, ಸದಾನಂದ ಮುಂದಿನಮನಿ, ಅಶೋಕ ಲಕ್ಕುಂಡಿ, ರಾಜಶೇಖರ ಅಂಗಡಿ, ಸಂತೋಷ ಶೀಗಿಹಳ್ಳಿ, ಮಂಜುನಾಥ ಮುಗ್ಗನವರ, ಸಂತೋಷ ಕಮತರ, ರಾಜು ಕೋಟಿ, ನಾಗರಾಜ ಹುಬ್ಬಳ್ಳಿ, ಆರ್.ವೈ. ಠಾಕೂರ ಇದ್ದರು.