ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅರಣ್ಯ ಸಂಶೋಧನಾ ಕೇಂದ್ರದಿಂದ ಔಷಧಿ ಸಸ್ಯ ರಕ್ಷಣೆ

Vishwanath S
Updated On : 17 Aug 2013, 10:49 am

ಕನ್ನಡಪ್ರಭ ವಾರ್ತೆ, ಧಾರವಾಡ, ಆ. 16
ಕಳೆದ ಎರಡು ದಶಕಗಳಿಂದ ಅರಣ್ಯದಲ್ಲಿನ ಉತ್ತಮ ತಳಿಗಳನ್ನು ರಕ್ಷಿಸಿ ತಳಿ ಅಭಿವೃದ್ಧಿ ಮಾಡುತ್ತಿರುವ ಇಲ್ಲಿನ ಗುಂಗಾರಗಟ್ಟಿಯ ಅರಣ್ಯ ಸಂಶೋಧನ ಕೇಂದ್ರ ಪ್ರಥಮ ಬಾರಿಗೆ ನಶಿಸಿ ಹೋಗುತ್ತಿರುವ ಕೆಲ ಔಷಧಿ ಸಸ್ಯಗಳ ರಕ್ಷಣೆಗೆ ಮುಂದಾಗಿದೆ.
ಬಿಜಾಪುರ, ಶಿವಮೊಗ್ಗ, ಬಾದಾಮಿ, ಬೆಳಗಾವಿ, ದಾಂಡೇಲಿ, ಧಾರವಾಡ, ಶಿರಸಿ ಸೇರಿದಂತೆ ಎಂಟು ಜಿಲ್ಲೆಗಳ ವ್ಯಾಪ್ತಿ ಅರಣ್ಯ ಪ್ರದೇಶ ಹೊಂದಿರುವ ಈ ಸಂಶೋಧನ ಕೇಂದ್ರವು, ಕೇಂದ್ರ ಸರ್ಕಾರದ ರು. 1.67 ಕೋಟಿ ಅನುದಾನದಲ್ಲಿ ಐದು ವರ್ಷದ ಅವಧಿಯಲ್ಲಿ ನಶಿಸಿ ಹೋಗುತ್ತಿರುವ ಸಸ್ಯಗಳನ್ನು ಕಾಪಾಡುವ ಹೊಣೆ ಹೊತ್ತಿದೆ. ಧೂಪದ ಮರ, ಸೀತಾ ಅಶೋಕ, ಮರದರ್ಶಕ, ರಾಮಪತ್ರೆ, ದುರ್ವಾಸನೆ, ಸಪ್ತರಂಗಿ ಮತ್ತಿತರರೆ ಔಷಧಿ ಸಸ್ಯಗಳನ್ನು ರಕ್ಷಿಸಿ ಒಟ್ಟು 420 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಅವುಗಳನ್ನು ಬೆಳೆಸಲು ಕೇಂದ್ರ ಈಗಾಗಲೇ ಕಾರ್ಯಾರಂಭ ಮಾಡಿದೆ.
ಯಾವ್ಯಾವ ಸಸ್ಯಗಳು: ಮನೆಯಲ್ಲಿ ಅನೇಕ ಸಂದರ್ಭ ಧೂಪ ಹಾಕಲಾಗುತ್ತದೆ. ಅದರೆ, ಅದು ಎಲ್ಲಿಂದ ಬರುತ್ತದೆ ಎಂದು ಸಾಮಾನ್ಯವಾಗಿ ಬಹಳಷ್ಟು ಜನರಿಗೆ ಗೊತ್ತಿಲ್ಲ. ಧೂಪದ ಮರದಿಂದ ಇದನ್ನು ಸಿದ್ಧಪಡಿಸಲಾಗುತ್ತಿದ್ದು, ಸಂಶೋಧನೆ ಪ್ರಕಾರ ಇತ್ತೀಚೆಗೆ ಈ ಮರಗಳ ಸಂಖ್ಯೆ ತೀರಾ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿದ್ದಾಪುರದ ಕ್ಯಾದಗಿ ಅರಣ್ಯ ಪ್ರದೇಶದಲ್ಲಿ 50 ಹೆಕ್ಟೇರ್‌ನಲ್ಲಿ ಈ ಗಿಡಗಳನ್ನು ಬೆಳೆಸಲಾಗುತ್ತಿದೆ. ಸಕ್ಕರೆ ರೋಗ ಹಾಗೂ ರಕ್ತಸ್ರಾವ ತಡೆಯಲು ಬಳಸುವ ಸೀತಾ ಅಶೋಕ ಸಸ್ಯವನ್ನು ಶಿವಮೊಗ್ಗ 25 ಹೆಕ್ಟೇರ್, ಬನವಾಸಿಯಲ್ಲಿ 60 ಹಾಗೂ ಬ್ರಾಹ್ಮಣವಾಡ ಪ್ರದೇಶದಲ್ಲಿ 85 ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದೆ. ಇದಲ್ಲದೇ, ಮರದರ್ಶಕ, ರಾಮಪತ್ರೆ, ದುರ್ವಾಸನೆ ಹಾಗೂ ಸಪ್ತರಂಗಿ ಸಸ್ಯಗಳನ್ನು ಯಲ್ಲಾಪುರದ ಅರಬೈಲ್ ಘಾಟ್‌ನಲ್ಲಿ 100 ಹೆಕ್ಟೇರ್, ಹೊಸನಗರದ ಹತ್ತಿರ ಸುಮಾರು 100 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಮನೋಜಕುಮಾರ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಹೈಟೆಕ್ ನರ್ಸರಿ: ಪ್ರತಿ ಐದು ವರ್ಷಕ್ಕೊಮ್ಮೆ ಅರಣ್ಯ ಪ್ರದೇಶದಲ್ಲಿ ಉಂಟಾಗುತ್ತಿರುವ ಬದಲಾವಣೆಯನ್ನು ಈ ಸಂಶೋಧನಾ ಕೇಂದ್ರದ ಮೂಲಕ ಅರಿಯಲಾಗುತ್ತದೆ. ಅದರಲ್ಲೂ ಧಾರವಾಡದ ಅರಣ್ಯ ಸಂಶೋಧನಾ ಕೇಂದ್ರಕ್ಕೆ ಪಶ್ಚಿಮ ಘಟ್ಟ ವ್ಯಾಪ್ತಿ ಇರುವುದರಿಂದ ಮಹತ್ತರ ಜವಾಬ್ದಾರಿ ಇದೆ. ಈ ಹಿನ್ನೆಲೆಯಲ್ಲಿ ಆರಂಭದಲ್ಲಿ ನಶಿಸಿ ಹೋಗುತ್ತಿರುವ ಔಷಧಿ ಸಸ್ಯಗಳ ರಕ್ಷಣೆಗೆ ಮುಂದಾಗಿದ್ದೇವೆ.
ಸಂಶೋಧನಾ ಕೇಂದ್ರವು ಅರಣ್ಯದಲ್ಲಿನ ಉತ್ತಮ ತಳಿಗಳನ್ನು (ಔಷಧಿ ಅಥವಾ ಅರಣ್ಯ ಹಾಗೂ ಹಣ್ಣಿನ ಸಸ್ಯಗಳು ಇರಬಹುದು) ರಕ್ಷಿಸಿ ಅವುಗಳನ್ನು ಮತ್ತೇ ಬೆಳೆಸುವುದರಿಂದ ಇಳುವರಿ ಹೆಚ್ಚು ಪಡೆಯಬಹುದು.
ಈ ನಿಟ್ಟಿನಲ್ಲಿ ಕೇಂದ್ರವು ಸುಮಾರು 160 ಎಕರೆ ಪ್ರದೇಶದಲ್ಲಿ ಹೈಟೆಕ್ ನರ್ಸರಿ ರಚಿಸಿಕೊಂಡು ಉತ್ತಮ ಸಸಿಗಳನ್ನು (ಹುಣಸೆ, ನೀರಲ, ನೆಲ್ಲಿ, ಶ್ರೀಗಂಧ, ಹೆಬ್ಬೇವು, ಸೀಮಾರೊಬಾ, ಶಿವನಿ, ಸಾಗವಾಣಿ, ಬಿದಿರು, ಸೀತಾಫಲ, ಗೋಡಂಬಿ ಇತ್ಯಾದಿ) ಬೆಳೆಸುತ್ತಿದೆ.
ಅಲ್ಲದೆ, ಅವುಗಳನ್ನೂ ರೈತರಿಗೂ ವಿತರಿಸಲಾಗುತ್ತಿದೆ. 2012-13ನೇ ಸಾಲಿನಲ್ಲಿ 2,42,529 ವಿವಿಧ ಜಾತಿ ಸಸಿಗಳನ್ನು ಬೆಳೆಸಿದ್ದು 1,25,427 ಸಸಿಗಳನ್ನು ರೈತರಿಗೆ ಅತೀ ಕಡಿಮೆ ದರದಲ್ಲಿ ಮಾರಾಟ ಮಾಡಲಾಗಿದ್ದು, 1,17, 102 ಸಸಿಗಳು ಉಳಿದುಕೊಂಡಿವೆ ಎಂದು ಮನೋಜಕುಮಾರ ಮಾಹಿತಿ ನೀಡಿದರು.
ಸಲಹಾ ಮಂಡಳಿ..
ಇಲ್ಲಿನ ಅರಣ್ಯ ಸಂಪತ್ತು ರಕ್ಷಿಸುವುದಲ್ಲದೇ ಇನ್ನಷ್ಟು ಅಭಿವೃದ್ಧಿ ಪಡಿಸುವುದು ನಮ್ಮ ಜವಾಬ್ದಾರಿಯಾಗಿದ್ದು, ಸಂಶೋಧನಾ ಕ್ಷೇತ್ರ ಸೇರಿದಂತೆ ಅರಣ್ಯ ಸಂಪತ್ತಿನ ವಿಷಯವಾಗಿ ಈ ಭಾಗದಲ್ಲಿ ಇನ್ನೂ ಆಗಬೇಕಾದ ಕಾರ್ಯಗಳ ಸಲಹೆ-ಸೂಚನೆ ಪಡೆಯಲು ಸಲಹಾ ಮಂಡಳಿ ರಚಿಸಿಕೊಳ್ಳಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆ ಸುಭಾಶ್ಚಂದ್ರ, ಪರಿಸರವಾದಿ ಹಾಗೂ ರೈತರುಗಳಾದ ಪ್ರಕಾಶ ಭಟ್, ಡಾ. ಸಂಜೀವ ಕುಲಕರ್ಣಿ, ಕರ್ನಾಟಕ ವಿವಿ ಜೀವಶಾಸ್ತ್ರ ವಿಭಾಗದ ಡಾ. ರಮೇಶ ಅವರನ್ನೊಳಗೊಂಡ ಸಮಿತಿಯು ಇಲಾಖೆಗೆ ಸಲಹೆಗಳನ್ನು ನೀಡುತ್ತದೆ. ಈ ಮೂಲಕ ಈ ಭಾಗದ ಅರಣ್ಯ ಸಂಪತ್ತು ಹೆಚ್ಚಿಸುವುದು ಹಾಗೂ ಉಳಿಸಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗುವುದು.
- ಮನೋಜಕುಮಾರ(ಅರಣ್ಯ ಸಂರಕ್ಷಣಾಧಿಕಾರಿ)

-ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement