ಅವಳಿ ನಗರದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ಧಾರವಾಡ: ಸ್ವಾತಂತ್ರ್ಯೋತ್ಸವ
ಧಾರವಾಡ: 67ನೇ ಸ್ವಾತಂತ್ರ್ಯೋತ್ಸವವನ್ನು ನಗರದ ವಿವಿಧೆಡೆ ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ರಾಜ್ಯ ಸರ್ಕಾರಿ ನೌಕರಸ್ಥರ ಸಹಕಾರಿ ಬ್ಯಾಂಕ್ನಲ್ಲಿ ಅಧ್ಯಕ್ಷ ಬಸವರಾಜ ಕಟಗಿ ಧ್ವಜಾರೋಹಣ ನೆರವೇರಿಸಿದರು. ಬ್ಯಾಂಕ್ನ ಉಪಾಧ್ಯಕ್ಷ ವೈ.ಎಚ್. ಬನಸೋಡೆ, ನಿರ್ದೇಶಕ ಯು.ಬಿ. ತಿವಾರಿ, ಪಿ.ಕೆ. ಯಾರಾದಿ, ಬ್ಯಾಂಕಿನ ಮ್ಯಾನೇಜರ್ ಎಂ.ಎಸ್. ಹುಂಬೇರಿ ಇದ್ದರು.
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಬಸವರಾಜ ಗುರಿಕಾರ ಧ್ವಜಾರೋಹಣ ನೆರವೇರಿಸಿದರು. ರಾಜ್ಯ ಪರಿಷತ್ ಸದಸ್ಯ ಎಸ್.ಎಫ್. ಸಿದ್ಧನಗೌಡರ ಇದ್ದರು.
ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಲಾಯಿತು. ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ ಧ್ವಜಾರೋಹಣ ನೇರವೇರಿಸಿದರು. ಅತಿಥಿಗಳಾಗಿ ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ, ಗಾಂಧೀಜಿಯವರ ಕುರಿತು ದಿನಕರ ದೇಸಾಯಿ ಅವರು ರಚಿಸಿದ ನಿನ್ನ ಪ್ರತಿಮೆಯ ನಿಲ್ಲಿಸಿ ನಾವು ಮೆರೆವುದು ವ್ಯರ್ಥ ಎಂಬ ಹಾಡನ್ನು ಪ್ರಸ್ತುತಪಡಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಪ್ರೊ.ಬಿ.ವಿ. ಗುಂಜೆಟ್ಟಿ, ಶಿವಾನಂದ ಭಾವಿಕಟ್ಟಿ ಶಂಕರ ಕುಂಬಿ, ಬಸವಪ್ರಭು ಹೊಸಕೇರಿ, ಗುರು ಹಿರೇಮಠ, ವಿಶ್ವೇಶ್ವರಿ ಹಿರೇಮಠ ಮತ್ತಿತರರು ಇದ್ದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಅಕಾಡೆಮಿ ಯೋಜನಾಧಿಕಾರಿ ಮಾಲತಿ ಪೋಳ ಧ್ವಜಾರೋಹಣ ಮಾಡಿದರು. ಹೊನ್ನಮ್ಮ ಶಿಕ್ಷಣ ಸಂಸ್ಥೆಯ ಅನಾಥ ಮಕ್ಕಳು ಇದ್ದರು.
ಪ್ರೇರಣಾ: ಸ್ವಾತಂತ್ರ್ಯ ದಿನಾಚರಣೆ
ಹುಬ್ಬಳ್ಳಿ: ಕೆ.ಎಲ್.ಇ ಸಂಸ್ಥೆಯ ಪ್ರೇರಣಾ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ 67ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಧ್ವಜಾರೋಹಣವನ್ನ್ನು ನೆರವೇರಿಸಿದ ಪ್ರಾಚಾರ್ಯ ಪ್ರೊ. ಹೇಮಂತ ಕೃಷ್ಣ ಅವರು ಕವನ ವಾಚನ ಮಾಡಿ ಹಿಂದಿನ, ಇಂದಿನ ಹಾಗೂ ಮುಂದಿನ ಭಾರತದ ಚಿತ್ರಣ ವಿದ್ಯಾರ್ಥಿಗಳ ಮುಂದೆ ಪ್ರಸ್ತುತ ಪಡಿಸಿದರು. ಇದೇ ಸಂದರ್ಭ ವಿದ್ಯಾರ್ಥಿಗಳು ದೇಶಭಕ್ತಿಗೀತೆಗಳನ್ನ್ನು ಹಾಡಿದರು. ವಿದ್ಯಾರ್ಥಿಗಳಾದ ಅಂಕುಶ್ ಹಾಗೂ ಪ್ರಸನ್ನ ರಾಷ್ಟ್ರಗೀತೆಯನ್ನು ವಾದ್ಯದಲ್ಲಿ ನುಡಿಸಿದರು. ಇದೇ ಸಂದರ್ಭ ಚಿತ್ರಕಲೆ ಮತ್ತು ಸ್ವರಾಂಜಲಿ ಸಂಗೀತ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿಯಾದ ಆಜ್ಞಾ ಕಟ್ಟಿ ಹಾಗೂ ಶ್ರೇಯಾ ಕುದರಿ ಕಾರ್ಯಕ್ರಮ ನಿರೂಪಿಸಿದರು. ಹಿಂದಿ ಉಪನ್ಯಾಸಕ ಗಿರೀಶ ಮಠದ ವಂದಿಸಿದರು.
ಸಾಖರೆ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿಸ್ವಾತಂತ್ರ್ಯೋತ್ಸವ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 16
ಕೆಎಲ್ಇ ಸಂಸ್ಥೆಯ ಎಂ.ಆರ್. ಸಾಖರೆ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 67ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಸ್ವಾತಂತ್ರ್ಯೋತ್ಸವ ನಿಮಿತ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇದೇ ಸಂದರ್ಭ ಕ್ರೀಡೆ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಚೀನ್ ತಹಸೀಲ್ದಾರ್ ಮತ್ತು ರಿದ್ಧಿ ಓಝಾ ಅತಿಥಿಗಳಾಗಿ ಆಗಮಿಸಿದ್ದರು. ದೀಪಾ ಅವರು ಪ್ರಾರ್ಥಿಸಿ ಸ್ವಾಗತಿಸಿದರು. ಮಾರಿಯಾ ಅಬ್ರಾಹಂ ವಂದಿಸಿದರು.
3 ಅಂಗಗಳ ಹೊಣೆಗಾರಿಕೆ ಮಧ್ಯೆ ಅಹಿತಕರ ಘಟನೆ
ಧಾರವಾಡ: ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಅಧಿಕಾರ ವಿಭಜನೆಯ ಮಹತ್ವ ಅರಿತು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದರೂ ಇತ್ತೀಚೆಗೆ ಸಮಾಜದಲ್ಲಿ ಭಯ ಹುಟ್ಟಿಸುವ ಸಂಗತಿಗಳು ಘಟಿಸುತ್ತಿವೆ. ಎಲ್ಲ ರಂಗಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎನ್. ಕುಮಾರ ಹೇಳಿದರು.
ಹೈಕೋರ್ಟ್ ಸಂಚಾರಿ ಪೀಠದಲ್ಲಿ ಗುರುವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹಿರಿಯರ ಶ್ರಮದ ಫಲವಾಗಿ ಪಡೆದ ಸ್ವಾತಂತ್ರ್ಯವನ್ನು ನಾವು ಸ್ವೇಚ್ಛಾಚಾರವಾಗಿ ಪರಿವರ್ತಿಸಿಕೊಂಡಿದ್ದೇವೆ. ಸ್ವಾತಂತ್ರ್ಯದ ದುರುಪಯೋಗವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದರು.
ಆರು ದಶಕಗಳಲ್ಲಿ ಸ್ವಾತಂತ್ರ್ಯದ ಸವಿ ಅನುಭವಿಸಿದ್ದೇವೆ. ಕಾನೂನುಗಳನ್ನು ರಚಿಸಿ, ಅನುಷ್ಠಾನ ಮಾಡುವ ಪ್ರಯತ್ನವಾಗಿದೆ. ಸಮಾನ ಅವಕಾಶ, ಗೌರವಗಳು ಲಭ್ಯವಾಗುವ ಸ್ಥಿತಿ ನಿರ್ಮಾಣವಾಗಿದೆ. ಕಾನೂನುಗಳಿಂದ ಸಮಾನ ರಕ್ಷಣೆ ದೊರಕಲು ಸಾಧ್ಯವಾಗಿದೆ. ಆದರೆ, ಸಮಾಜದಲ್ಲಿ ಹೆಚ್ಚುತ್ತಿರುವ ಜಾತೀಯತೆ, ಅಂಧ ಶ್ರದ್ಧೆಗಳು, ಸೋಮಾರಿತನ, ಮಾನವೀಯ ಮೌಲ್ಯಗಳ ಕಡೆಗಣನೆ, ಕಾನೂನಿಗೆ ಅಗೌರವ ತೋರುವ ಪ್ರವೃತ್ತಿ ದೇಶದ ಅಖಂಡತೆಗೆ ಸವಾಲು ತಂದೊಡ್ಡಿವೆ. ಶಾಸಕಾಂಗ ಮತ್ತು ಕಾರ್ಯಾಂಗದ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ. ನಂಬಿಕೆ ಉಳಿದಿದ್ದರೆ ಅದು ನ್ಯಾಯಾಂಗದ ಮೇಲೆ ಮಾತ್ರ ಎಂದು ಹೇಳಿದರು.
ನ್ಯಾಯಮೂರ್ತಿಗಳಾದ ಎಚ್.ಜಿ. ರಮೇಶ, ಅರವಿಂದಕುಮಾರ, ಎಚ್. ಬಿಳ್ಳಪ್ಪ, ಎನ್. ಆನಂದ, ಹೆಚ್ಚುವರಿ ರಿಜಿಸ್ಟ್ರಾರ್ ಪಿ.ಎನ್. ದೇಸಾಯಿ, ವಕೀಲರ ಸಂಘದ ಅಧ್ಯಕ್ಷರಾದ ಬಿ.ಡಿ. ಹಿರೇಮಠ, ವಿ.ಡಿ. ಕಾಮರೆಡ್ಡಿ ಇದ್ದರು.
ಸ್ವಾತಂತ್ರ್ಯೋತ್ಸವ ಆಚರಣೆ
ಹುಬ್ಬಳ್ಳಿ: ಉಣಕಲ್ ಕ್ರಾಸ್ ಬಳಿಯ ಸುರಭಿ ನರ್ಸರಿ ಶಾಲೆಯಲ್ಲಿ 67ನೇ ಸ್ವಾತಂತ್ರ್ಯೋತ್ಸವವನ್ನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 1971ರ ಭಾರತ-ಪಾಕ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಭಾರತೀಯ ವಾಯುಪಡೆ ಅಧಿಕಾರಿ ಶಾಮಸುಂದರ ದತ್ತಾತ್ರೆಯ ಸರಾಫ್ ಅವರು ದೇಶಪ್ರೇಮದ ಬೀಜವನ್ನು ಮಕ್ಕಳಲ್ಲಿ ಬಿತ್ತಬೇಕು ಎಂದರು. ಶಾಲೆಯ ಸಂಸ್ಥಾಪಕ ಅಧ್ಯಕ್ಷ ನಾಗರಾಜ ಯಂಡಿಗೇರಿ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿ, ಅವರ ಆದರ್ಶಗಳನ್ನ್ನು ಅಳವಡಿಸಿಕೊಳ್ಳುವಂತೆ ಮಕ್ಕಳಿಗೆ ಕರೆ ನೀಡಿದರು. ಶಿಕ್ಷಕಿಯರಾದ ಉಮಾ ಪತ್ತಾರ, ಜುಬೇದಾ, ವಿದ್ಯಾರ್ಥಿಗಳಾದ ವೇದಾ, ಯಶಸ್ವಿನಿ, ಚಂದನ, ಪ್ರಗತಿ ಕಟ್ಟಿಮನಿ, ಕೃಷಿ ಮೆಣಸಿನಕಾಯಿ ಮಾತನಾಡಿದರು. ಬೃಂದಾ ಸಿಂಚನಾ, ಹೃತಿಕಾ, ಶ್ರೇಯಾ, ವೀರೇಶ, ಚಿನ್ಮಯ, ಭವಾನಿ, ಅನುಷಾ, ಅಮೋಘ ಮುಂತಾದ ವಿದ್ಯಾರ್ಥಿಗಳು ವಿವಿಧ ರಾಷ್ಟ್ರ ನಾಯಕರ ವೇಷ ಧರಿಸಿ ಗಮನ ಸೆಳೆದರು.
ಬಡರೋಗಿಗಳಿಗೆ ಹಣ್ಣು ವಿತರಣೆ
ನವಲಗುಂದ: ಸ್ಥಳೀಯ ಯುತ್ವಿಂಗ್ ಮಾತೆ ಇಸ್ಲಾಮಿ ಹಿಂದ್ ಘಟಕದ ವತಿಯಿಂದ 67ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ನ್ನು ಉಚಿತವಾಗಿ ವಿತರಿಸಿ, ಬೇಗ ಗುಣಮುಖರಾಗಲೆಂದು ಶುಭ ಹಾರೈಸಿದರು. ಡಾ. ವಿ.ಪಿ. ಕಲ್ಲಂಗಡಿ, ಸಂಚಾಲಕರಾದ ಶೌಖತ್ಲಿ ನದಾಫ್, ಸಿರಾಜ್ಅಹ್ಮದ್ ಹೊಂಗಲ್, ಇಮಾಮಜಾಫರ್ ಮಕಾನದಾರ, ರೆಹಮಾನ ಕಲೆಗಾರ, ಸ್ಯಯದಲಿ ಗಚ್ಚಿ, ಮಕ್ತುಮಹುಸೇನ ನದಾಫ, ಮೆಹಬೂಬಲಿ ಕೊಪ್ಪಳ, ಜನಾಬ ಬದ್ರಾಪೂರ ಪಾಲ್ಗೊಂಡಿದ್ದರು.
ಅಣ್ಣಿಗೇರಿ: ಸಡಗರ, ಸಂಭ್ರಮದ ಸ್ವಾತಂತ್ರ್ಯೋತ್ಸವ
ಕನ್ನಡಪ್ರಭ ವಾರ್ತೆ, ಅಣ್ಣಿಗೇರಿ, ಆ. 16
ಪಟ್ಟಣದ ವಿವಿಧ ಸಂಘ-ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, 23 ವಾರ್ಡಗಳಲ್ಲಿ ಆಯಾ ವಾರ್ಡಿನ ಸದಸ್ಯರ ಸಮ್ಮುಖದಲ್ಲಿ 67ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಅಮೃತೇಶ್ವರ ಬಯಲಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಧ್ವಜಾರೋಹಣ ಮಾಡಿದರು. ಪುರಸಭೆ ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು, ವಿದ್ಯಾರ್ಥಿಗಳು, ಶಿಕ್ಷಕರು, ನಾಗರಿಕರು ಉಪಸ್ಥಿತರಿದ್ದರು. ಪಟ್ಟಣದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಂದ ವೇಷಭೂಷಣ, ಭಾಷಣ, ಹಾಗೂ ವಿವಿಧ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಎನ್.ಎಸ್ ಹೂಗಾರ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯ ಪ್ರೊ. ಎಸ್.ಎಸ್. ಹರ್ಲಾಪುರ ಧ್ವಜಾರೋಹಣ ಮಾಡಿ ಮಾತನಾಡಿದರು.
ಇದಕ್ಕೂ ಮೊದಲು ವಿವಿಧ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಪಟ್ಟಣದಲ್ಲಿ ಪ್ರಭಾತ್ಫೇರಿ ನಡೆಸಿದರು.
ಉಪ್ಪಿನ ಬೆಟಗೇರಿ: ಸ್ವಾತಂತ್ರ್ಯೋತ್ಸವ
ಉಪ್ಪಿನ ಬೆಟಗೇರಿ: 67ನೇ ಸ್ವಾತಂತ್ರ್ಯೋತ್ಸವವನ್ನು ಗ್ರಾಮದ ವಿವಿಧೆಡೆ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ಗ್ರಾಪಂ ಆವರಣದಲ್ಲಿ ಅಧ್ಯಕ್ಷರಾದ ಪುಷ್ಪಾ ದೊಡವಾಡ, ಸರ್ಕಾರಿ ಮಾದರಿ ಕೇಂದ್ರ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಮಂಜುಳಾ ಮಸೂತಿ, ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಭಾರತಿ ಮಸೂತಿ, ಗುರು ವಿರುಪಾಕ್ಷೇಶ್ವರ ಪಿಯು ಕಾಲೇಜಿನಲ್ಲಿ ಎಂ.ಸಿ ಕಡಗದ, ಎಂ.ಜಿ. ಹಳವೂರ ಪ್ರೌಢಶಾಲೆಯಲ್ಲಿ ಬಿ.ಎ ಬಿಜಾಪುರ, ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಜಿ.ಆರ್. ಜವಳಗಿ, ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕಲ್ಲಪ್ಪ ತಿಗಡಿ, ಹನುಮನಕೊಪ್ಪದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೃತ್ಯುಂಜಯ ಯರಗಂಬಳಿಮಠ, ಎಸ್.ಜಿ.ವಿ. ಕಾನ್ವೆಂಟ್ನಲ್ಲಿ ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು, ಕಲ್ಪವೃಕ್ಷ ಗುರುಕುಲಂ ಶಾಲೆಯಲ್ಲಿ ಶ್ರೀಶೈಲ ಗೌರಿಮಠ, ಹೆಸ್ಕಾಂ ಶಾಖೆಯಲ್ಲಿ ವಿ.ಎಸ್. ಡೂಮನವರ ಧ್ವಜಾರೋಹಣ ಮಾಡಿದರು.