ಇಂದು ಡಾ. ಜೋಶಿ ಮನೆ ಎದುರು ಪ್ರತಿಭಟನೆ
ಹುಬ್ಬಳ್ಳಿ: ಇಲ್ಲಿನ ಜಿಮಖಾನಾ ಮೈದಾನದ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಗ್ರೌಂಡ್ ಬಚಾವೋ ಸಮಿತಿ ವತಿಯಿಂದ ಆ. 17ರಂದು ಬೆಳಗ್ಗೆ 11ಕ್ಕೆ ರಿಕ್ರಿಯೆಷನ್ ಕ್ಲಬ್ ಅಧ್ಯಕ್ಷ ಡಾ. ಸುಭಾಷ್ ಜೋಶಿ ಅವರ ಮನೆ ಎದುರು ಪ್ರತಿಭಟನೆ ನಡೆಯಲಿದೆ ಎಂದು ಸಿಬಿಎಲ್ ಹೆಗ್ಡೆ ಹೇಳಿದ್ದಾರೆ.
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಕ್ಲಬ್ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಅವರ ಮನೆ ಮತ್ತು ಆಸ್ಪತ್ರೆ ಎದುರು ರೋಗಿಗಳಿಗೆ ತೊಂದರೆಯಾಗದಂತೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಗ್ರೌಂಡ್ ಬಚಾವೋ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಇನ್ನಿತರ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂದು ವೇಳೆ ಪ್ರತಿಭಟನೆಗೆ ಮೊದಲೇ ಡಾ. ಸುಭಾಷ್ ಜೋಶಿ ಅವರು ರಿಕ್ರಿಯೆಷನ್ ಕ್ಲಬ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದಲ್ಲಿ ಹೋರಾಟ ಕೈಬಿಡಲಾಗುವುದು. ವೈಯಕ್ತಿಕವಾಗಿ ನಮಗೆ ಡಾ. ಜೋಶಿ ಅವರ ಮೇಲೆ ಯಾವುದೇ ರೀತಿಯ ದ್ವೇಷವಿಲ್ಲ. ಹುಬ್ಬಳ್ಳಿಯ ಹಿರಿಯ ವೈದ್ಯರಾಗಿರುವ ಅವರ ವಿರುದ್ಧ ಅವರು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷರಾಗಿದ್ದಾರೆ ಎನ್ನುವ ಕಾರಣಕ್ಕೆ ಮಾತ್ರ ಈ ಪ್ರತಿಭಟನೆ ನಡೆಯುತ್ತಿದ್ದು, ಸಭ್ಯರನ್ನು ಮುಂದಿಟ್ಟುಕೊಂಡು ಹುಬ್ಬಳ್ಳಿಯ ಕೆಲವು ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದೆ ಎಂಬ ಗಾದೆ ಮಾತು ಉದ್ಘರಿಸಿದ ಸಿಬಿಎಲ್ ಹೆಗ್ಡೆ, ಭವಿಷ್ಯತ್ತಿನ ದಿನಗಳಲ್ಲಿ ರಿಕ್ರಿಯೇಷನ್ ಕ್ಲಬ್‌ನ ಎಲ್ಲ ಸದಸ್ಯರ ಮನೆ ಎದುರು ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ಒಂದು ವೇಳೆ ಪ್ರತಿಭಟನೆಗೆ ಮೊದಲೇ ಡಾ. ಸುಭಾಷ್ ಜೋಶಿ ಅವರು ರಿಕ್ರಿಯೆಷನ್ ಕ್ಲಬ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದಲ್ಲಿ ಹೋರಾಟ ಕೈಬಿಡಲಾಗುವುದು. ವೈಯಕ್ತಿಕವಾಗಿ ನಮಗೆ ಡಾ. ಜೋಶಿ ಅವರ ಮೇಲೆ ಯಾವುದೇ ರೀತಿಯ ದ್ವೇಷವಿಲ್ಲ.
-ಸಿಬಿಎಲ್ ಹೆಗ್ಡೆ