ಕಾಂಗ್ರೆಸ್ ಅಲೆಯೂ ಇಲ್ಲ ನೆಲೆಯೂ ಇಲ್ಲ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 18
'ಲೋಕಸಭೆ ಹಾಗೂ ವಿಧಾನ ಪರಿಷತ್ಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅಲೆಯೂ ಇಲ್ಲ, ನೆಲೆಯೂ ಇಲ್ಲ. ಅಧಿಕಾರದ ಗುಂಗಿನಲ್ಲಿರುವ ಕಾಂಗ್ರೆಸ್ ಮುಖಂಡರ ಉತ್ಸಾಹಕ್ಕೆ ಈ ಉಪ ಚುನಾವಣೆ ತಣ್ಣೀರೆರಚಲಿದೆಯಲ್ಲದೇ, ಆ ಪಕ್ಷದ ಭ್ರಮೆಗೆ ಸ್ಪೀಡ್ ಬ್ರೇಕ್ ಆಗಿ ಪರಿಣಮಿಸಲಿದೆ'.
'ರಾಜ್ಯದಲ್ಲಿ ಬಿಜೆಪಿ ಮತ್ತೆ ಜನಾನುರಾಗ ಗಳಿಸಲು ಈ ಉಪ ಚುನಾವಣೆ ಒಂದು ವೇದಿಕೆ. ಕಳೆದ ನೂರು ದಿನಗಳಲ್ಲಿ ಕಾಂಗ್ರೆಸ್ ಪ್ರಚಾರ ಪಡೆಯುವ ಧಾವಂತದಲ್ಲಿ ಜನರಿಗೆ ಮಾಡಿದ ಭ್ರಮನಿರಸನ ಅಷ್ಟಿಷ್ಟಲ್ಲ. ಇದರ ಪರಿಣಾಮವೇ ಈ ಉಪ ಚುನಾವಣೆ ಆಡಳಿತ ಕಾಂಗ್ರೆಸ್ಗೆ ಬಹುದೊಡ್ಡ ಪಾಠ ಕಲಿಸಲಿದೆ.'
ಈ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಜೊತೆಗೆ ಕಾಂಗ್ರೆಸ್ಗೆ ಭಾರೀ ಹಿನ್ನಡೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ. ಪ್ರತಿಪಕ್ಷಗಳೆಲ್ಲ ಒಂದಾಗಿ ಕಾಂಗ್ರೆಸ್ ವಿರುದ್ಧ ರಚಿಸಿರುವ ರಣತಂತ್ರ ಸಫಲಗೊಳ್ಳುವುದು ನಿಶ್ಚಿತವೆಂಬ ಅಭಿಪ್ರಾಯವನ್ನು ಪ್ರಹ್ಲಾದ ಜೋಶಿ 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣ ಆ ಪಕ್ಷದ ಅಲೆಯಿಂದ ಅಲ್ಲವೇ ಅಲ್ಲ, ಬದಲಾಗಿ ಬಿಜೆಪಿಯಲ್ಲಾದ ವಿಭಜನೆಯಿಂದ. ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯಂತೆ ಈ ಉಪ ಚುನಾವಣೆಯಲ್ಲಿಯೂ ಗೆಲ್ಲುವ ಕನಸನ್ನು ಕಾಂಗ್ರೆಸ್ ಕಾಣುತ್ತಿದೆ. ಕಾಂಗ್ರೆಸ್ ಕನಸು ಭಗ್ನಗೊಳಿಸಲೆಂದೇ ಎಲ್ಲ ಪ್ರತಿಪಕ್ಷಗಳು ಒಂದಾಗಿ ರಣತಂತ್ರ ರೂಪಿಸಿದ್ದು ಎಂದ ಜೋಶಿ ಅವರ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ತಾವು ದೊಡ್ಡ ಸಾಧನೆ ಮಾಡಿದ್ದಾಗಿ ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದ ಮುಖಂಡರದ್ದು ಕೇವಲ ಭ್ರಮೆಯಷ್ಟೇ. ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಈ ಭ್ರಮೆಯಿಂದ ಹೊರಬರಲು ಉಪ ಚುನಾವಣೆ ಸಹಕಾರಿಯಾಗಲಿದೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸುವ ಜೊತೆಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣ ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯಗಳು. ಈ ಭಿನ್ನಾಭಿಪ್ರಾಯಗಳನ್ನು ಉಪಯೋಗಿಸಿಕೊಂಡು ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆಯೇ ಹೊರತಾಗಿ ಮತದಾರರು ಆ ಪಕ್ಷಕ್ಕೆ ಬೆಂಬಲಿಸಿಲ್ಲ.
ಗ್ರಾಮೀಣಾಭಿವೃದ್ಧಿಯಲ್ಲಿ ಬಿಜೆಪಿ ಕೆಲಸ ಉತ್ತಮ: ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತನ್ನ ಹಲವಾರು ಭಿನ್ನಾಭಿಪ್ರಾಯಗಳ ಮಧ್ಯೆಯೂ ಉತ್ತಮ ಕೆಲಸ ಮಾಡಿದೆ. ಬಡಜನತೆಯಷ್ಟೇ ಅಲ್ಲದೇ ಮಧ್ಯಮ ಜನರಿಗೂ ಉಪಯೋಗವಾಗುವಂಥ ಹಲವಾರು ಯೋಜನೆಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿತ್ತು. ಶಿಕ್ಷಣ, ಆರೋಗ್ಯ, ಕೈಗಾರಿಕೆ, ನೀರಾವರಿ, ಲೋಕೋಪಯೋಗಿ ಸೇರಿದಂತೆ ಎಲ್ಲ ಇಲಾಖೆಗಳ ವ್ಯಾಪ್ತಿಯಲ್ಲಿ ಉತ್ತಮ ಕೆಲಸಗಳು ನಡೆದಿವೆ.
ಗ್ರಾಪಂ ಸಬಲೀಕರಣಕ್ಕೆ ಶ್ರಮಿಸಿರುವ ಬಿಜೆಪಿ ಸರ್ಕಾರ, ನರೇಗಾ ಯೋಜನೆ ಜಾರಿಯಲ್ಲಿ ಅತ್ಯುತ್ತಮ ಕೆಲಸ ಮಾಡಿದೆ. ಇದೇ ಕಾರಣಕ್ಕೆ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ ಕರ್ನಾಟಕಕ್ಕೆ 3 ಪ್ರಶಸ್ತಿ ನೀಡಿತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಗ್ರಾಪಂ ಸದಸ್ಯರ ಅಧಿಕಾರ ಮೊಟಕುಗೊಳಿಸಲು ಮುಂದಾಗಿದೆ. ಗ್ರಾಮ ಸಭೆಗಳಿಗೆ ಹಾಜರಾಗದ ಸದಸ್ಯರ ಸದಸ್ಯತ್ವ ರದ್ದುಪಡಿಸಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಅವೈಜ್ಞಾನಿಕ. ಬಹುತೇಕ ಗ್ರಾಪಂಗಳಲ್ಲಿ ಪಿಡಿಓ ಸೇರಿದಂತೆ ಅಧಿಕಾರಿಗಳ ಕೊರತೆ ಇದೆ. ಹಣಕಾಸಿನ ಸಾಕಷ್ಟು ಬೆಂಬಲ ಇಲ್ಲ. ಗ್ರಾಪಂ ಸದಸ್ಯರ ಸದಸ್ಯತ್ವ ರದ್ದು ಪಡಿಸುವ ಅಧಿಕಾರವನ್ನು ವಿಭಾಗೀಯ ಅಧಿಕಾರಿಗೆ ನೀಡಿದ್ದರಿಂದ ಆತ ಯಾವುದೇ ಸದಸ್ಯನನ್ನು ಅನರ್ಹಗೊಳಿಸುವ ಸಾಧ್ಯತೆ ಇದೆ. ಬಿಜೆಪಿ ಸರ್ಕಾರ ಗ್ರಾಮೀಣಾಭಿವೃದ್ಧಿಯಲ್ಲಿ ಮಾಡಿರುವ ಕೆಲಸ ಶೂನ್ಯವೆಂದು ಹೇಳುತ್ತಿರುವ ಕಾಂಗ್ರೆಸ್ ಸರ್ಕಾರ, ಇದೀಗ ಗ್ರಾಪಂ ಸದಸ್ಯರ ವಿರುದ್ಧವೇ ಕತ್ತಿ ಮಸೆಯುವ ಮೂಲಕ ಅಧಿಕಾರವನ್ನು ದುರುಪಯೋಗಪಡೆದುಕೊಳ್ಳುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಪ್ರಜೆಗಳನ್ನು ಗೊಂದಲದಲ್ಲಿಡುವುದರಲ್ಲಿಯೇ ಕಾಲಹರಣ ಮಾಡುತ್ತಿದೆ. ಪ್ರತಿ ಪಡಿತರ ಚೀಟಿಗೆ 30 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ಹಲವಾರು ಗೊಂದಲಗಳ ಹೇಳಿಕೆ ನೀಡಿದರು. ಮುಖ್ಯಮಂತ್ರಿಯವರ ಈ ಘೋಷಣೆ ಈಗಲೂ ಸಮರ್ಪಕವಾಗಿ ಜಾರಿಗೊಂಡಿಲ್ಲ. ಪ್ರತಿ ಪಡಿತರ ಅಂಗಡಿ ವ್ಯಾಪ್ತಿಯಲ್ಲಿ ಶೇ. 10ರಿಂದ 20ರಷ್ಟು ಚೀಟಿಗಳು ರದ್ದುಗೊಂಡಿವೆ. ಪಡಿತರ ಅಂಗಡಿಯಲ್ಲಿ ವಿತರಿಸುವ ಅಕ್ಕಿ, ಗೋದಿ, ಸಕ್ಕರೆ, ಸೀಮೆಎಣ್ಣೆ ಕಳಪೆ ಗುಣಮಟ್ಟದ್ದಾಗಿದೆ.
ಕಾಂಗ್ರೆಸ್ ಸರ್ಕಾರ ತಾನು ಜಾರಿಗೆ ತರಲು ಉದ್ದೇಶಿಸಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಈ ಮಧ್ಯೆ ಬಿಜೆಪಿ ಸರ್ಕಾರ ಅನುಷ್ಠಾನಗೊಳಿಸಿದ್ದ ಅನೇಕ ಯೋಜನೆಗಳನ್ನು ಸ್ಥಗಿತಗೊಳಿಸುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದ ಹೊಸ ತಾಲೂಕುಗಳ ರಚನೆಗೆ ಕಾಂಗ್ರೆಸ್ ಸರ್ಕಾರ ಕತ್ತರಿ ಹಾಕಿದೆ. ಸ್ವರ್ಣ ಗ್ರಾಮ ಸ್ವರ್ಣ ಭೂಮಿ ಸೇರಿದಂತೆ ಇನ್ನೂ ಅನೇಕ ಯೋಜನೆಗಳು ಸ್ಥಗಿತಗೊಂಡಿವೆ.
ಈ ಉಪ ಚುನಾವಣೆ ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಈ ಉಪ ಚುನಾವಣೆಯಷ್ಟೇ ಅಲ್ಲ, ತಮಗೆ ಎಲ್ಲ ಚುನಾವಣೆಗಳೂ ಪ್ರತಿಷ್ಠೆ ಇದ್ದಂತೆ ಎಂದರು.
-ಆನಂದ ಅಂಗಡಿ