ಮೇಲೆಲ್ಲ ಹೊಳಪು, ಒಳಗೆಲ್ಲ ಹುಳುಕು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 18
ಉಣಕಲ್ ಕೆರೆ ದಂಡೆಯ ಮೇಲಿನ ಉದ್ಯಾನವನ ಉದ್ಘಾಟನೆಗೊಂಡು ಒಂದು ವರ್ಷಕ್ಕಿಂತ ಹೆಚ್ಚಿನ ಸಮಯ ಕಳೆದರೂ ಕೆರೆಗೆ ಹರಿದು ಬರುವ ಕೊಳಚೆ ನೀರು ಮಾತ್ರ ನಿಂತಿಲ್ಲ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ನಗರಾಭಿವೃದ್ಧಿ ಸಚಿವ ಸುರೇಶಕುಮಾರ 2012ರ ಜೂ. 10ರಂದು ಉದ್ಘಾಟಿಸಿದ್ದ ಉಣಕಲ್ ಕೆರೆ ದಂಡೆಯ ಉದ್ಯಾನವನ ಇಂದಿಗೂ 'ಮೇಲೆಲ್ಲ ಹೊಳಪು, ಒಳಗೆಲ್ಲ ಹುಳುಕು' ಎನ್ನುವಂತಿದೆ.
ಒಂದು ವರ್ಷದೊಳಗೆ ಉಣಕಲ್ ಕೆರೆ ಸೇರುವ ಚರಂಡಿ ನೀರು ತಡೆಯಲಾಗುವುದೆಂಬ ಭರವಸೆಯನ್ನು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ ಹಾಗೂ ಅಂದಿನ ಜಿಲ್ಲಾಧಿಕಾರಿ ದರ್ಪಣ ಜೈನ್ ಉಪಸ್ಥಿತಿಯಲ್ಲಿ ನೀಡಲಾಗಿತ್ತು.
ಕಳೆದ ಸುಮಾರು ಒಂದು ದಶಕದಿಂದ ಉಣಕಲ್ ಕೆರೆಗೆ ನವನಗರ, ಅಮರಗೋಳ ಸೇರಿದಂತೆ ಸುತ್ತಲಿನ ಪ್ರದೇಶ ಕೊಳಚೆ ನೀರು ಹರಿದು ಬರುತ್ತಿದೆ. ಈ ಕೊಳಚೆ ನೀರು ಉಣಕಲ್ ಕೆರೆ ಸೇರುವುದನ್ನು ತಡೆಯುವವರೆಗೂ ಉದ್ಯಾನವನ ಉದ್ಘಾಟಿಸಬಾರದೆಂದು ಈ ಭಾಗದ ಜನರು ಒತ್ತಾಯಿಸಿದ್ದರು. ಆದರೂ ಮಹಾನಗರ ಪಾಲಿಕೆಯಲ್ಲಿ ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಆಡಳಿತ ಈ ಜನರ ಒತ್ತಾಯಕ್ಕೆ ಮನ್ನಣೆ ನೀಡದೆ, ಮುಂದಿನ ಒಂದು ವರ್ಷದೊಳಗೆ ಉಣಕಲ್ ಕೆರೆಗೆ ಸೇರುವ ಚರಂಡಿ ನೀರನ್ನು ಪ್ರತ್ಯೇಕಿಸುವ ಭರವಸೆ ನೀಡಿತ್ತು. ಈ ಭರವಸೆಯನ್ನೇ ನಂಬಿದ್ದ ಉಣಕಲ್ ಸುತ್ತಲಿನ ಜನರು ಒಂದು ವರ್ಷದೊಳಗೆ ಕೆರೆ ಮೊದಲಿನಂತಾಗುತ್ತದೆ ಎಂದೇ ನಂಬಿದ್ದರು. ಆದರೆ ಈ ಭರವಸೆ ಹುಸಿಯೆಂಬುದು ಗೊತ್ತಾಗಿದ್ದು ಒಂದು ವರ್ಷದ ಅವಧಿ ಕಳೆದ ಮೇಲಷ್ಟೇ.
ಕೆರೆ ದಂಡೆ ಮೇಲಿನ ಉದ್ಯಾನವನ ಉದ್ಘಾಟನೆಗೊಂಡು ಒಂದು ವರ್ಷ ಗತಿಸಿದ್ದರೂ ಕೆರೆಗೆ ಸೇರುವ ಒಳಚರಂಡಿ ನೀರು ಮಾತ್ರ ನಿಂತಿಲ್ಲ. ಇಂದಿಗೂ ನವನಗರ, ಅಮರಗೋಳ ಹಾಗೂ ಸುತ್ತಲಿನ ಪ್ರದೇಶದ ಕೊಳಚೆ ನೀರು ಉಣಕಲ್ ಕೆರೆಗೆ ಹರಿದು ಬರುತ್ತಿದೆ.
ಸುಮಾರು 8 ಕೋಟಿ ವೆಚ್ಚ ಮಾಡಿ ಕೆರೆ ದಂಡೆ ಮೇಲೆ ಅತ್ಯಾಕರ್ಷಣೆಯ ಉದ್ಯಾನ ನಿರ್ಮಿಸಿರುವ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ, ಚರಂಡಿ ನೀರು ಉಣಕಲ್ ಕೆರೆಗೆ ಸೇರುವುದನ್ನು ತಡೆಯಲು ನಿರ್ಲಕ್ಷ್ಯ ತೋರುತ್ತ ಬಂದಿದೆ.
ನಡೆಯದ ಕಾಮಗಾರಿ: ಸುಮಾರು 110 ವರ್ಷದ ಇತಿಹಾಸ ಇರುವ ಉಣಕಲ್ ಕೆರೆ 200 ಎಕರೆ ಪ್ರದೇಶದಲ್ಲಿ ವ್ಯಾಪಿಸಿತ್ತು. ಆದರೆ, ಕೆಲ ಜನರ ಅತಿಕ್ರಮಣದಿಂದಾಗಿ ಇಂದು ಕೆರೆಯ ವ್ಯಾಪ್ತಿ ಕುಗ್ಗಿದೆ. ದಶಕದ ಹಿಂದೆ ಉಣಕಲ್ ನೀರನ್ನೇ ಹುಬ್ಬಳ್ಳಿಯ ಅರ್ಧಭಾಗದ ಜನರು ಕುಡಿಯಲು ಬಳಸುತ್ತಿದ್ದರು. ಆದರೆ, ಇದೀಗ ಈ ಕೆರೆ ನೀರು ಮುಟ್ಟಲೂ ಹಿಂದೆಮುಂದೆ ನೋಡುವಂಥ ದುಸ್ಥಿತಿ ಎದುರಾಗಿದೆ.
ನವನಗರ ಬಳಿಯ ಬಸವನಕೆರೆ ಹಾಗೂ ಟೋಪನಕೆರೆ ಎಂಬ ಎರಡು ಕೆರೆಗಳು ಈ ಕೊಳಚೆ ನೀರಿನಿಂದ ಈಗಾಗಲೇ ಹದಗೆಟ್ಟು ಹೋಗಿವೆ. ಈ ಎರಡೂ ಸುಂದರ ಕೆರೆಗಳಲ್ಲಿ ಈಗಿರುವುದು ಕೊಳಚೆ ನೀರು ಮಾತ್ರ. ಈ ಎರಡೂ ಕೆರೆಗಳಲ್ಲಿ ತುಂಬಿಕೊಂಡಿರುವ ಕೊಳಚೆ ನೀರು, ಮುಂದೆ ಹರಿದು ಉಣಕಲ್ ಕೆರೆ ಸೇರುತ್ತದೆ. ಭೈರಿದೇವರಕೊಪ್ಪದ ಹಿಂಭಾಗಕ್ಕೆ ಒಂದು ಬಾರಿ ಭೇಟಿ ನೀಡಿದರೆ ಸಾಕು, ಈ ಕೊಳಚೆ ನೀರು ಉಣಕಲ್ ಕೆರೆ ಸೇರುವ ದೃಶ್ಯ ಕಾಣಿಸುತ್ತದೆ.
ಈಗಾಗಲೇ ನಗರದಲ್ಲಿ ಕುಂಟುತ್ತಾ ಸಾಗಿರುವ ಬೃಹತ್ ಒಳಚರಂಡಿ ಯೋಜನೆಯ ಮಾರ್ಗಕ್ಕೆ ಈ ಒಳಚರಂಡಿ ನೀರು ಸೇರಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಉಣಕಲ್ ಕೆರೆ ಬಳಿ ಬಾವಿಯೊಂದನ್ನು (ವೆಟ್ವಾಲ್) ನಿರ್ಮಿಸಲಾಗುತ್ತಿದೆ. ಬಾವಿ ನಿರ್ಮಾಣದ ಕಾಮಗಾರಿ ಪ್ರಾರಂಭಗೊಂಡು ಎರಡು ವರ್ಷಗಳು ಗತಿಸುತ್ತ ಬಂದರೂ ನಿರ್ಮಾಣ ಕಾರ್ಯ ಇದುವರೆಗೂ ಪೂರ್ಣಗೊಂಡಿಲ್ಲ.
ಈ ಮಧ್ಯೆ ಮಹಾನಗರ ಪಾಲಿಕೆ ಅಧಿಕಾರಿಗಳು ಈಗಲೂ ಉಣಕಲ್ ಕೆರೆ ಸೇರುವ ಚರಂಡಿ ನೀರು ಪ್ರತ್ಯೇಕಿಸುವ ಕೆಲಸ ಮಾಡಲಾಗುತ್ತಿದೆಯೆಂಬ ಟೊಳ್ಳು ಮಾತುಗಳನ್ನು ಹೇಳುತ್ತ ಈ ಭಾಗದ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ. ಆದರೆ, ಚರಂಡಿ ನೀರು ಕೆರೆಗೆ ಸೇರದಂತೆ ತಡೆಯಲು ತ್ವರಿತ ಕಾಮಗಾರಿ ಕೈಗೊಳ್ಳುತ್ತಿಲ್ಲ.