ಸತ್ಕರ್ಮದಿಂದ ಪುಣ್ಯ ಪ್ರಾಪ್ತಿ: ಕರ್ಕಿ ಮಠದ ಶ್ರೀ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 18
ಮಾನವ ಜೀವನ ಅನೇಕ ಪುಣ್ಯ ಫಲಗಳಿಂದ ಲಭಿಸುತ್ತದೆ. ಹೀಗಾಗಿ ಮಾನವ ಜನ್ಮದಲ್ಲಿ ಸತ್ಕರ್ಮ ಮಾಡಬೇಕು. ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ದೈವಜ್ಞ ಬ್ರಾಹ್ಮಣ ಕರ್ಕಿ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ಉತ್ತರಾಖಂಡದ ಹರಿದ್ವಾರದಲ್ಲಿ ಅವರು ಹಮ್ಮಿಕೊಂಡಿರುವ ಚಾತುರ್ಮಾಸ ವ್ರತಾಚರಣೆಯಂಗವಾಗಿ ಆಶೀರ್ವಚನ ನೀಡಿ, ಇತ್ತೀಚಿನ ದಿನಗಳಲ್ಲಿ ಬೇಗನೆ ಹಣ ಗಳಿಸಬೇಕು, ಹೆಸರು ಗಳಿಸಬೇಕು ಎನ್ನುವ ಧಾವಂತದಲ್ಲಿ ಪಾಪ ಮಾರ್ಗ ಅನುಸರಿಸಲಾಗುತ್ತಿದೆ. ಇಂತಹ ಮಾರ್ಗದಿಂದ ಗಳಿಸಿ ಹಣ-ಹೆಸರಿಗೆ ಬೆಲೆ ಇಲ್ಲ. ಇದರಿಂದಾಗಿ ಮನಃಶಾಂತಿ, ಆರೋಗ್ಯ ಹಾಳು ಮಾಡಿಕೊಳ್ಳುತ್ತೇವೆಯೇ ವಿನಃ ಏನನ್ನೂ ಗಳಿಸಲಾಗದು ಎಂದರು.
ಅಪರೂಪಕ್ಕೆ ಸಿಗುವ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಪರೋಪಕಾರ, ಸೇವಾ ಕಾರ್ಯಗಳಿಂದ ಮಾನವ ಜನ್ಮ ಪಾವನವಾಗುತ್ತದೆ. ಇಂದಿನ ದಿನಮಾನದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸುವಲ್ಲಿ ಹಿಂದೆ ಬೀಳುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದ್ದೇ ಆದಲ್ಲಿ ಅವರು ಸನ್ಮಾರ್ಗದಲ್ಲಿ ನಡೆಯುತ್ತಾರೆ. ಬಹುಪಾಲು ಪಾಲಕರು ಈ ಕಾರ್ಯದಿಂದ ವಿಮುಖರಾಗಿರುವುದರಿಂದ ಇಂದಿನ ಯುವಕರು ದಾರಿ ತಪ್ಪುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಾಲಕರು ಜಾಗೃತಿ ವಹಿಸಬೇಕಿದೆಯಲ್ಲದೇ, ಗುರು ಹಿರಿಯರನ್ನು ಗೌರವಿಸುವ, ದೇವರನ್ನು ಪೂಜಿಸುವಂತಹ ಸದ್ಗುಣಗಳ ಪಾಠ ಮಾಡಬೇಕೆಂದರು.
ಮಾಜಿ ಶಾಸಕ ಗಂಗಾಧರ ಭಟ್, ಮಹೇಶ ಅಣ್ವೇಕರ, ರಘುಪತಿ ಅಣ್ವೇಕರ ಇದ್ದರು.
ಆತಂಕ ಬೇಡ
ಹರಿದ್ವಾರದಲ್ಲಿ ತಾವು ಕೈಗೊಂಡಿರುವ ಚಾತುರ್ಮಾಸ ವ್ರತ ಸಾಂಗವಾಗಿ ನಡೆಯುತ್ತಿದೆ ಎಂದು ತಿಳಿಸಿರುವ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ, ಉತ್ತರಾಖಂಡದಲ್ಲಿ ಮಳೆಯಿಂದಾದ ತೊಂದರೆ ದೂರವಾಗಿದ್ದು ಪರಿಸ್ಥಿತಿ ಸಹಜ ಸ್ಥಿತಿಗೆ ತಲುಪಿದೆ. ತಾವು ಚಾತುರ್ಮಾಸ್ಯ ಕೈಗೊಂಡಿರುವ ಹರಿದ್ವಾರದಲ್ಲಿ ಯಾವುದೇ ತೊಂದರೆಯಾಗಿಲ್ಲ. ಇಲ್ಲಿ ಎಲ್ಲವೂ ಸುಸೂತ್ರವಾಗಿದ್ದು, ಭಕ್ತಾದಿಗಳು ಯಾವುದೇ ಅಂಜಿಕೆ ಅಳುಕಿಲ್ಲದೇ ಚಾತುರ್ಮಾಸದಲ್ಲಿ ಪಾಲ್ಗೊಳ್ಳಬಹುದು. ಚಾತುರ್ಮಾಸ್ಯ ವ್ರತ ಸೆಪ್ಟೆಂಬರ್ 17ರ ವರೆಗೆ ನಡೆಯಲಿದೆ ಎಂದಿದ್ದಾರೆ.