ಡಾ. ವಸಂತಾ ಕಾಮತ್ ವಿರುದ್ಧ ತಮಗೊಂಡ ಆರೋಪ
ಧಾರವಾಡ: ಹುಬ್ಬಳ್ಳಿ ಕಿಮ್ಸ್ ನಿರ್ದೇಶಕಿ ಡಾ. ವಸಂತಾ ಕಾಮತ್ ಅವರ ವಿರುದ್ಧ ನಿವೃತ್ತ ಸರ್ಜನ್ ಡಾ.ಜಿ.ಆರ್. ತಮಗೊಂಡ ಅವರು ದುರಾಡಳಿತದ ಆರೋಪ ಮಾಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ವಸಂತಾ ಕಾಮತ್ ಅವರ ಆಡಳಿತಾವಧಿಯಲ್ಲಿ ಅನೇಕ ಅಕ್ರಮಗಳು ನಡೆದಿದ್ದು, ಅವುಗಳ ಬಗ್ಗೆ ತನಿಖೆ ನಡೆಯಬೇಕೆಂದು ವೈದ್ಯಕೀಯ ಶಿಕ್ಷಣ ಮಂತ್ರಿ ಡಾ. ಶರಣ ಪ್ರಕಾಶ ಪಾಟೀಲರಿಗೂ ಮನವಿ ಮಾಡಲಾಗಿದೆ. ಸಚಿವರು ಈ ಬಗ್ಗೆ ಗಮನ ನೀಡದ್ದರಿಂದ ಲೋಕಾಯುಕ್ತರಿಗೂ ಈ ಕುರಿತು ದೂರು ನೀಡುತ್ತೇನೆಂದು ಹೇಳಿದರು.
ಉತ್ತರ ಕರ್ನಾಟಕದ ಪ್ರಮುಖ ಸಂಸ್ಥೆಗಳಾದ ಹುಬ್ಬಳ್ಳಿಯ ಕಿಮ್ಸ್ ಮತ್ತು ಧಾರವಾಡದ ಮಾನಸಿಕ ಆಸ್ಪತ್ರೆಗೆ ಈ ಭಾಗದವರನ್ನೇ ನಿರ್ದೇಶಕರನ್ನಾಗಿ ನೇಮಿಸಬೇಕಿದ್ದು, ಸರ್ಕಾರ ಈ ವಿಷಯದಲ್ಲಿ ತುಂಬ ಅನ್ಯಾಯ ಮಾಡಿದೆ. ಪ್ರಾದೇಶಿಕ ಅಸಮತೋಲನ ಕುರಿತು ಡಾ.ಡಿ.ಎಂ.ನಂಜುಂಡಪ್ಪ ಅವರು ಸಲ್ಲಿಸಿರುವ ವರದಿಯಲ್ಲಿ ಕಿಮ್ಸ್ ಮತ್ತು ಮಾನಸಿಕ ಆಸ್ಪತ್ರೆ ಅಭಿವೃದ್ಧಿ ಮತ್ತು ಹಿತದೃಷ್ಟಿಯಿಂದ ಉತ್ತರ ಕರ್ನಾಟಕದವರನ್ನೇ ನಿರ್ದೇಶಕರಾಗಿ ನೇಮಿಸಬೇಕು ಎಂದು ತಿಳಿಸಲಾಗಿದೆ. ಆದರೆ, ಹಿಂದಿನ ಬಿಜೆಪಿ ಸರ್ಕಾರ ಇದಾವುದನ್ನೂ ಪರಿಗಣಿಸದೆ ಡಾ. ವಸಂತಾ ಕಾಮತ್ ಅವರನ್ನು ಕಿಮ್ಸ್ ಮತ್ತು ಅವರ ಪತಿ ಡಾ.ನಾಗರಾಜ ಅವರನ್ನು ಮಾನಸಿಕ ಆಸ್ಪತ್ರೆ ನಿರ್ದೇಶಕರನ್ನಾಗಿ ನೇಮಿಸಿತು. ಇವರಿಬ್ಬರ ಆಡಳಿತಾವಧಿಯಲ್ಲಿ ಅನೇಕ ಅಕ್ರಮಗಳನ್ನು ನಡೆಸಿದ್ದು, ಕ್ರಮ ಕೈಗೊಳ್ಳಬೇಕೆಂದು ಡಾ. ತಮಗೊಂಡ ಆಗ್ರಹಿಸಿದರು.
ಡಾ. ವಸಂತಾ ಕಾಮತ್ ಅವರ ಅಧಿಕಾರದ ಅವಧಿಯಲ್ಲಿ ಉಂಟಾದ ಅಕ್ರಮಗಳ ಬಗ್ಗೆ ತಮ್ಮಲ್ಲಿ ಇರುವ ದಾಖಲೆಗಳನ್ನು ಒದಗಿಸಿ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಬಹಳ ಅಕ್ರಮಗಳಿದ್ದು, ದಾಖಲೆಗಳ ಹೊರೆಯೇ ಆಗುತ್ತದೆ. ಆದ್ದರಿಂದ ತರಲಿಲ್ಲ. ನಂತರದಲ್ಲಿ ನೀಡುತ್ತೇನೆಂದು ಡಾ. ತಮಗೊಂಡ ಉತ್ತರಿಸಿದರು.