ನನ್ನನ್ನು ಹೆಂಡತಿಯಾಗಿ ಗಂಡ ಸ್ವೀಕರಿಸುತ್ತಿಲ್ಲ!
ಕ.ಪ್ರ.ವಾರ್ತೆ, ಧಾರವಾಡ, ಆ. 20
2009ರಲ್ಲಿಯೇ ನಮ್ಮಿಬ್ಬರ ಮದುವೆಯಾಗಿದ್ದು, ಒಂದು ಗಂಡು ಮಗು ಸಹ ಇದೆ. ಆದರೆ, ಪತಿ ನನ್ನನ್ನು ಹೆಂಡತಿಯಾಗಿ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿ ವಿಜಯಲಕ್ಷ್ಮಿ ಎಂಬುವರು ಇಲ್ಲಿನ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಮಂಗಳವಾರ ಕೆಲವು ಹೊತ್ತು ಪ್ರತಿಭಟಿಸಿದರು.
ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ಸಹಾಯಕರಾಗಿರುವ ವೀರಣ್ಣ ಮೊಟಗಿ ಎಂಬುವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನನ್ನು ಪ್ರೀತಿಸಿದರು. ಇವರ ಪ್ರೀತಿಗಾಗಿ ಮೊದಲನೆಯ ಪತಿಯನ್ನು ತ್ಯಜಿಸಿ ಬಂದಿದ್ದೇನೆ. ಆದರೆ, ಈಗ ನೀನು ನನ್ನ ಹೆಂಡತಿ ಅಲ್ಲ. ಮಗು ಸಹ ನನ್ನದಲ್ಲ ಎಂದು ಹೇಳುತ್ತಿದ್ದಾರೆ. ವೀರಣ್ಣ ಅವರ ದೈಹಿಕ ಸಂಪರ್ಕದಿಂದಾಗಿ ಎರಡು ವರ್ಷದ ಹಿಂದೆ ಗಂಡು ಮಗು ಜನಿಸಿದೆ. ಈ ಬಗ್ಗೆ ಡಿಎನ್ಎ ಪರೀಕ್ಷೆಗೂ ನಾನು ಸಿದ್ಧ. ಇಲಾಖೆ ವತಿಯಿಂದ ನನಗೆ ಮತ್ತು ಮಗುವಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕೆಂದು ವಿಜಯಲಕ್ಷ್ಮಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎನ್.ಎಂ. ಅಂಗಡಿಗೆ ಮನವಿ ಸಲ್ಲಿಸಿದರು.
ಆಕೆ ನನ್ನ ಹೆಂಡತಿ ಅಲ್ಲ: ಆದರೆ, ಈ ಕುರಿತಂತೆ ಅಲ್ಲಿಯೇ ಇದ್ದ ವೀರಣ್ಣ ಮೊಟಗಿ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, 'ವಿಜಯಲಕ್ಷ್ಮಿಗೂ ನನಗೂ ಯಾವುದೇ ಸಂಬಂಧವಿಲ್ಲ. ಹಣಕ್ಕಾಗಿ ಈ ರೀತಿ ಮೋಸ ಮಾಡುತ್ತಿದ್ದಾಳೆ. ಪೊಲೀಸ್ ಠಾಣೆಗೆ ಕರೆದು ಬೆದರಿಸುವ ತಂತ್ರ ನಡೆಸಿದ್ದಾಳೆ. ಅಲ್ಲದೆ, ಅಪರಿಚಿತ ವ್ಯಕ್ತಿಗಳಿಂದ ಜೀವ ಬೆದರಿಕೆ ಹಾಕಿ 5 ಲಕ್ಷ ನೀಡುವಂತೆ ಒತ್ತಾಯಿಸುತ್ತಿದ್ದಾಳೆ. ಹಣ ನೀಡದಿರುವುದರಿಂದ ಈ ರೀತಿ ಪ್ರತಿಭಟನೆ ನಡೆಸುತ್ತಿದ್ದಾಳೆ' ಎಂದು ಆರೋಪಿಸಿದರು.
ವಿಜಯಲಕ್ಷ್ಮಿ ಅವರಿಗೆ ಹುಟ್ಟಿರುವ ಮಗು ನನ್ನದಲ್ಲ. ಈ ಕುರಿತಂತೆ ಬೇಕಿದ್ದರೆ, ಡಿಎನ್ಎ ಪರೀಕ್ಷೆಗೆ ಒಳಪಡಿಸಲಿ. ಕೇವಲ ಬೆದರಿಕೆಯ ಮೂಲಕ ನನ್ನೊಂದಿಗೆ ತೆಗೆಯಿಸಿದ ಫೋಟೋಗಳನ್ನು ಇಟ್ಟುಕೊಂಡು ಬೆದರಿಸಿ ಹಣ ಕೀಳುವ ಉದ್ದೇಶ ಇವರದ್ದು. ನಾನು ಸರ್ಕಾರಿ ಕೆಲಸದಲ್ಲಿದ್ದೇನೆ ಎಂಬ ಕಾರಣಕ್ಕಾಗಿ ಬೆನ್ನು ಬಿದ್ದಿದ್ದಾಳೆ ಎಂದು ವಿಜಯಲಕ್ಷ್ಮಿ ವಿರುದ್ಧ ಕಿಡಿಕಾರಿದರು.
ಈ ಸಮಸ್ಯೆಯನ್ನು ಪೊಲೀಸ್ ಇಲಾಖೆ ಹಾಗೂ ಕೋರ್ಟ್ ಬಗೆಹರಿಸಬೇಕು. ಆರೋಪಕ್ಕೆ ಒಳಗಾಗಿರುವ ವೀರಣ್ಣ ಅವರ ಮೇಲೆ ಇಲಾಖೆ ತನಿಖೆ ನಡೆಸಿ, ತಪ್ಪಿದ್ದರೆ ಶಿಕ್ಷೆ ನೀಡಲಾಗುತ್ತದೆ.
- ಡಾ. ಅಂಗಡಿ, ಧಾರವಾಡ ಜಿಲ್ಲಾ ಆರೋಗ್ಯ ಅಧಿಕಾರಿ