ನಾಳೆಯಿಂದ ಹುಬ್ಬಳ್ಳಿ- ದೆಹಲಿ ವಿಮಾನ ಹಾರಾಟ
ಹುಬ್ಬಳ್ಳಿ: ಹುಬ್ಬಳ್ಳಿ- ದೆಹಲಿ ಮಧ್ಯೆ ಆ. 22ರಿಂದ ನಿತ್ಯ ವಿಮಾನ ಸಂಚಾರ ಪ್ರಾರಂಭಗೊಳ್ಳಲಿದೆ.
ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಸಂಚಾರ ಪ್ರಾರಂಭಿಸುವಂತೆ ಉದ್ಯಮಿಗಳು ಹಾಗೂ ರಾಜಕಾರಣಿಗಳದ್ದು ಬಹುದಿನಗಳ ಬೇಡಿಕೆಯಾಗಿತ್ತು. ಕೊನೆಗೂ ಈ ಬೇಡಿಕೆ ಪುರಸ್ಕರಿಸಿರುವ ಭಾರತೀಯ ವಿಮಾನ ಪ್ರಾಧಿಕಾರ, ಹುಬ್ಬಳ್ಳಿ-ಮುಂಬಯಿ ವಿಮಾನ ಹಾರಾಟವನ್ನು ದೆಹಲಿವರೆಗೆ ವಿಸ್ತರಿಸಿದೆ.
ಹುಬ್ಬಳ್ಳಿಯಿಂದ ಮುಂಬಯಿಗೆ ಸಂಚರಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ಆ. 22ರಿಂದ ಮುಂಬಯಿ ಹಾಗೂ ಜಬ್ಬಲಪುರ ಮಾರ್ಗವಾಗಿ ದೆಹಲಿವರೆಗೂ ಸಂಚರಿಸಲಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಕೆ.ಎಂ. ಬಸವರಾಜು 'ಕನ್ನಡಪ್ರಭ'ಕ್ಕೆ ತಿಳಿಸಿದರು. ಆ. 22ರಿಂದ ನಿತ್ಯ ಮಧ್ಯಾಹ್ನ 2.10ಕ್ಕೆ ಹುಬ್ಬಳ್ಳಿಗೆ ಬಂದಿಳಿಯುವ ವಿಮಾನ, 2.40ಕ್ಕೆ ದೆಹಲಿಗೆ ಸಂಚಾರಿಸುವುದು. ಮಾರ್ಗ ಮಧ್ಯೆ ಮುಂಬಯಿ ಹಾಗೂ ಜಬ್ಬಲಪುರ ನಿಲ್ದಾಣದಲ್ಲಿ ವಿಮಾನ ಇಳಿಯಲಿದೆ. ಹುಬ್ಬಳ್ಳಿಯಿಂದ ಮುಂಬಯಿಗೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಇವರಲ್ಲಿ ಅನೇಕರು ದೆಹಲಿಯತ್ತಲೂ ಪ್ರಯಾಣ ಬೆಳೆಸುತ್ತಿದ್ದಾರೆ. ಈ ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ- ದೆಹಲಿ ವಿಮಾನ ಸಂಚಾರ ಉತ್ತಮ ಬೆಳವಣಿಗೆ. ನೈರುತ್ಯ ರೇಲ್ವೆ ವಲಯ, ಅಂತಾರಾಷ್ಟ್ರೀಯ ಗುಣಮಟ್ಟದತ್ತ ಅಭಿವೃದ್ಧಿ ಹೊಂದುತ್ತಿರುವ ವಿಮಾನ ನಿಲ್ದಾಣದಿಂದಾಗಿ ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಸಾಕಷ್ಟು ಉದ್ಯಮಿಗಳು ಭೇಟಿ ನೀಡುತ್ತಿದ್ದಾರೆ. ಇದರೊಂದಿಗೆ ರಾಜಕಾರಣಿಗಳ ಭೇಟಿಯೂ ಈ ಭಾಗಕ್ಕೆ ಹೆಚ್ಚಿದೆ. ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಹಾರಾಟ ಪ್ರಾರಂಭಿಸಿದ್ದರಿಂದ ಉದ್ಯಮಿಗಳಿಗೆ ಹೆಚ್ಚು ಅನುಕೂಲವಾಗಿದೆ.